ಆರೋಪಿಗೆ ಚಿಕಿತ್ಸೆ: ಮನನೊಂದು ನನ್ನ ಮೊಮ್ಮಗಳು ಆತ್ಮಹತ್ಯೆಗೆ ಯತ್ನ

| Published : May 20 2024, 01:32 AM IST

ಆರೋಪಿಗೆ ಚಿಕಿತ್ಸೆ: ಮನನೊಂದು ನನ್ನ ಮೊಮ್ಮಗಳು ಆತ್ಮಹತ್ಯೆಗೆ ಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

ಶನಿವಾರ ಸಂಜೆ ಫಿನಾಯಿಲ್‌ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಅಂಜಲಿ ಸಹೋದರಿ ಯಶೋದಾ ಭಾನುವಾರ ಮಧ್ಯಾಹ್ನ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದಳು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಅಂಜಲಿ ಹತ್ಯೆಗೈದ ಆರೋಪಿಗೆ ಚಿಕಿತ್ಸೆ ನೀಡುತ್ತಿರುವುದರಿಂದ ಮನನೊಂದ ನನ್ನ ಮೊಮ್ಮಗಳು ಯಶೋದಾ ಶನಿವಾರ ಫಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಅಂಜಲಿ ಅಜ್ಜಿ ಗಂಗಮ್ಮ ಅಂಬಿಗೇರ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಅಂಜಲಿ ಸಾವಿಗೆ ನ್ಯಾಯ ದೊರೆಯಬೇಕೆಂದು ನಮ್ಮ ಬೆನ್ನಿಗೆ ನಿಂತಿದ್ದಾರೆ. ಆದರೆ, ಆರೋಪಿಗೆ ಚಿಕಿತ್ಸೆ ನೀಡುತ್ತಿರುವುದು ವಿಷಾದನೀಯ. ಈ ಚಿಕಿತ್ಸೆ ನೀಡುವ ಬದಲು ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು. ನನ್ನ ಮೊಮ್ಮಗಳು ಇದೀಗ ಕ್ಷೇಮವಾಗಿದ್ದು, ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆದು ಹಿಂತಿರುಗಿದ್ದಾಳೆ ಎಂದರು.

ಆಸ್ಪತ್ರೆಯಿಂದ ಮರಳಿದ ಯಶೋದಾ:

ಶನಿವಾರ ಸಂಜೆ ಫಿನಾಯಿಲ್‌ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಅಂಜಲಿ ಸಹೋದರಿ ಯಶೋದಾ ಭಾನುವಾರ ಮಧ್ಯಾಹ್ನ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದಳು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಶೋದಾ, ನನ್ನ ಸಹೋದರಿ ಅಂಜಲಿಯ ಹತ್ಯೆಯನ್ನು ನಾನು ಕಣ್ಣಾರೆ ನೋಡಿದ್ದು, ಈಗಲೂ ನನ್ನನ್ನು ಮಾನಸಿಕ ಖಿನ್ನತೆಗೆ ಒಳಗಾಗುವಂತೆ ಮಾಡಿದೆ. ಇಂತಹ ಕ್ರೂರಿಗೆ ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿರುವುದಕ್ಕೆ ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ಅಲ್ಲದೇ ಆರೋಪಿ ಗಿರೀಶ ನನ್ನ ಅಕ್ಕನ ಬಗ್ಗೆ ಕೆಟ್ಟದಾಗಿ ಮತ್ತು ಸುಳ್ಳು ಹೇಳಿಕೆಗಳನ್ನು ನೀಡುತ್ತಿರುವುದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದೆ. ಆದಷ್ಟು ಬೇಗ ಆರೋಪಿಗೆ ಗಲ್ಲುಶಿಕ್ಷೆ ವಿಧಿಸಬೇಕು, ಇಲ್ಲವೇ ಎನ್‌ಕೌಂಟರ್‌ ಮಾಡಬೇಕು. ಹೀಗಾಗದೆ ಮಾತ್ರ ನನ್ನ ಅಕ್ಕನ ಆತ್ಮಕ್ಕೆ ಶಾಂತಿ ದೊರೆಯಲಿದೆ. ಈಗಾಗಲೇ ಪೊಲೀಸರು ನಡೆಸುತ್ತಿರುವ ತನಿಖೆಯ ಮೇಲೆ ನಂಬಿಕೆಯಿದೆ ಎಂದರು.