ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ:ಬೆಂಗಳೂರು ಮಹಾನಗರದ ಕೃಷಿ ಭವನದಲ್ಲಿರುವ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಕಚೇರಿಯಲ್ಲಿ ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಳ್ಳಿಗೇರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕಣ್ಣೂರ ಹಾಗೂ ರಾಜ್ಯಕ್ಕೆ 3ನೇ ರ್‍ಯಾಂಕ್ ಪಡೆದ ಮಂಡ್ಯ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ನವನೀತ ಅವರನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವತಿಯ ಸನ್ಮಾನಿಸಿ ಗೌರವಿಸಲಾಯಿತು.ಈ ವೇಳೆ ಮಾತನಾಡಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಅವರು, ರಾಜ್ಯದಲ್ಲಿ ಯಾವಾಗಲೂ ಬೆಂಗಳೂರು, ಮೈಸೂರು ಸೇರಿದಂತೆ ಈ ಭಾಗದ ಮಕ್ಕಳು ಮಾತ್ರ ರ್‍ಯಾಂಕ್ ಪಡೆಯುತ್ತಾರೆ ಎಂಬ ಮಾತಿತ್ತು. ಆದರೆ, ಈಗ ಆ ಮಾತನ್ನು ಹುಸಿಗೊಳಿಸಿ ರಾಜ್ಯಕ್ಕೆ ಫಸ್ಟ್ ರ್‍ಯಾಂಕ್ ಪಡೆಯುವ ಮೂಲಕ ಉತ್ತರ ಕರ್ನಾಟಕದ ಹಿರಿಮೆ ಗರಿಮೆಯನ್ನು ಅಂಕಿತಾ ಹೆಚ್ಚಿಸಿದ್ದಾರೆ. ಈ ಹಿನ್ನಲೆಯಲ್ಲಿ ಅಂಕಿತಾ ಅವರಿಗೆ ಆಯೋಗದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.ಸದಸ್ಯ ಶಶಿಧರ್ ಕೋಸಂಬೆ ಮಾತನಾಡಿ, ಸಾಧನೆ ಮಾಡುವ ಮನಸ್ಸು ಇದ್ದರೆ, ಸಾಲದು ಅಂಕಿತಾ ಹಾಗೂ ನವನೀತ್ ತರಹ ಸತತ ಪ್ರಯತ್ನದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು. ಅಂಕಿತಾಳಿಗೆ ಬೀದರ್ ಜಿಲ್ಲೆಯಲ್ಲಿ ಶ್ರೀ ಚನ್ನಬಸವೇಶ್ವರ ಗುರುಕುಲ ಕಾಲೇಜಿನಲ್ಲಿ ಎರಡು ವರ್ಷಗಳ ಕಾಲ ಪಿಯುಸಿ ಹಂತದಲ್ಲಿ ವಸತಿ ಸೇರಿದಂತೆ ಪೂರ್ಣ ಪ್ರಮಾಣದಲ್ಲಿ ಉಚಿತ ಶಿಕ್ಷಣ ಕೊಡಿಸಲು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾದ ಶ್ರೀ ನಾಡೋಜ ಡಾ ಬಸವಲಿಂಗ ಪಟ್ಟದೇವರು ಮುಂದೆ ಬಂದಿದ್ದಾರೆ. ಭಾಲ್ಕಿ ಶ್ರೀ ಮಠಕ್ಕೆ ಸನ್ಮಾನಕ್ಕೆ ಅಹ್ವಾನ ನೀಡಿದ್ದಾರೆ ಎಂದು ಕೋಸಂಬೆ ತಿಳಿಸಿದರು.
ಸನ್ಮಾನ ಸ್ವೀಕರಿಸಿದ ಅಂಕಿತಾ ಮಾತನಾಡಿ, ನನ್ನ ಸಾಧನೆಗೆ ನನ್ನ ಹೆತ್ತ ತಂದೆ ತಾಯಿ ಹಾಗೂ ಕಲಿಸಿದ ಗುರುಗಳು ಮುಖ್ಯ ಕಾರಣವಾಗಿದ್ದು, ಅವರಿಗೆ ಧನ್ಯವಾದಗಳು ತಿಳಿಸಿದರು.ಆಯೋಗದ ಸದಸ್ಯರಾದ ಡಾ.ತಿಪ್ಪೇಸ್ವಾಮಿ, ವೆಂಕಟೇಶ್, ಎಂ.ಆನಂದ, ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಿನ್ಸಿಪಾಲ್ ವಿಜಯಕುಮಾರ್ ಜಮಖಂಡಿ, ಬಸಪ್ಪ ಕಣ್ಣೂರ, ಗೀತಾ ಕಣ್ಣೂರ ಇತರರಿದ್ದರು.