ಅಂಕೋಲಾ ತಾಲೂಕಿನ ವೀರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ಹೋರಾಟದ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ನಿರ್ಮಿಸಲಾದ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನವೇ ಈಗ ಆಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗುತ್ತಿದೆ.
ರಾಘು ಕಾಕರಮಠ
ಅಂಕೋಲಾ: ಅಂಕೋಲಾ ತಾಲೂಕಿನ ವೀರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ಹೋರಾಟದ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ನಿರ್ಮಿಸಲಾದ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನವೇ ಈಗ ಆಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗುತ್ತಿದೆ. ಸ್ವಾತಂತ್ರ್ಯೋತ್ಸವದ ಸಂಭ್ರಮದ ಸಂದರ್ಭದಲ್ಲಿ ತ್ಯಾಗಿಗಳ ಸ್ಮರಣೆಯ ಸಂದರ್ಭದಲ್ಲಿ ಇದರ ನೆನಪಿಗಾಗಿ ನಿರ್ಮಿಸಿರುವ ಸ್ಮಾರಕದ ದುಸ್ಥಿತಿಯತ್ತ ಗಮನ ಹರಿಸದಿರುವುದು ವಿಪರ್ಯಾಸ.1983ರ ಮೇ ತಿಂಗಳಲ್ಲಿ ಅಂಕೋಲಾದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸುವರ್ಣ ಮಹೋತ್ಸವ ಆಯೋಜಿಸಲಾಗಿತ್ತು. ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ, ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಯನ್ನು ಶಾಶ್ವತವಾಗಿಸುವ ಹಾಗೂ ಮುಂದಿನ ಪೀಳಿಗೆಗೆ ಅವರ ಹೋರಾಟದ ಇತಿಹಾಸ ಪರಿಚಯಿಸುವ ಉದ್ದೇಶದಿಂದ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನ ನಿರ್ಮಿಸುವ ನಿರ್ಧಾರ ಕೈಗೊಳ್ಳಲಾಗಿತ್ತು.
1988ರಲ್ಲಿ ರಾಮಕೃಷ್ಣ ಹೆಗಡೆ ಅವರೇ ಸ್ಮಾರಕಕ್ಕೆ ಅಡಿಗಲ್ಲು ಹಾಕಿದರು. ತಾಲೂಕು ಕೇಂದ್ರದ ಹೃದಯಭಾಗದಲ್ಲಿ ಮೂರು ಬೃಹತ್ ಕಟ್ಟಡಗಳು ತಲೆ ಎತ್ತಿದವು. ಆದರೆ ಈಗ ಇದೇ ಕಟ್ಟಡಗಳ ಪೈಕಿ ಕೆಲವೊಂದು ಬಳಕೆಯಾಗದೆ, ನಿರ್ವಹಣೆಯ ಕೊರತೆಯಿಂದ ಶಿಥಿಲಾವಸ್ಥೆ ತಲುಪಿವೆ.ಮೂರು ಕಟ್ಟಡಗಳು: ಸ್ವಾತಂತ್ರ್ಯ ಸಂಗ್ರಾಮ ಭವನದ ಆವರಣದಲ್ಲಿ ಮೂರು ಕಟ್ಟಡಗಳಿವೆ. ಒಂದು ಸಭಾಭವನ ಸಾರ್ವಜನಿಕರ ಬಳಕೆಗೆ ತೆರೆದಿದ್ದು, ಮತ್ತೊಂದು ಕಟ್ಟಡದಲ್ಲಿ ಹಿಂದೆ ಸಾಕ್ಷರತಾ ಇಲಾಖೆಯ ಚಟುವಟಿಕೆ ಹಾಗೂ ಗ್ರಂಥಾಲಯ ಕಾರ್ಯನಿರ್ವಹಿಸುತ್ತಿತ್ತು. ಇನ್ನೊಂದು ಕಟ್ಟಡದಲ್ಲಿ ಸುಮಾರು 15 ವರ್ಷಗಳ ಹಿಂದೆ ಪದವಿ ಕಾಲೇಜು ಕಾರ್ಯನಿರ್ವಹಿಸುತ್ತಿತ್ತು. ಪೂಜಗೇರಿಯಲ್ಲಿ ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಾಣವಾದ ಬಳಿಕ ಈ ಕಟ್ಟಡದ ಬಾಗಿಲು ಬಹುತೇಕ ಮುಚ್ಚಿಯೇ ಉಳಿದಿದೆ. ಕೋಟ್ಯಂತರ ರುಪಾಯಿ ಮೌಲ್ಯ ಹೊಂದಿರುವ ಈ ಕಟ್ಟಡ ಇಂದು ಬಳಕೆಯಾಗದೆ ಪಾಳು ಬೀಳುವ ಹಂತ ತಲುಪಿದೆ.
ಸ್ವಾತಂತ್ರ್ಯ ಹೋರಾಟಗಾರರಿಗಾಗಿ ನಿರ್ಮಿಸಲಾಗಿದ್ದ ಅತಿಥಿಗೃಹ ನಿರ್ವಹಣೆ ಇಲ್ಲದೆ ಭೂತಬಂಗಲೆಯ ಸ್ವರೂಪ ಪಡೆದುಕೊಂಡಿದೆ. ಗೋಡೆಗಳು ಬಿರುಕು ಬಿಟ್ಟಿದ್ದು, ಕಿಟಕಿಗಳ ಮೇಲೆ ಗಿಡಗಳು ಬೆಳೆದು ನಿಂತಿವೆ. ಹಲವು ಕಿಟಕಿಗಳ ಗಾಜುಗಳು ಒಡೆದು ನೆಲಕಚ್ಚಿವೆ. ಕಟ್ಟಡದ ಸುತ್ತಮುತ್ತಲಿನ ಪರಿಸರವೂ ಅಸ್ತವ್ಯಸ್ತಗೊಂಡಿದೆ.ಒಂದು ಕೋಟಿ ಅನುದಾನ: ಸರ್ಕಾರ 10 ವರ್ಷಗಳ ಹಿಂದೆ ಸ್ಮಾರಕ ಭವನದ ಕಟ್ಟಡಗಳ ಅಭಿವೃದ್ಧಿಗೆ ₹1 ಕೋಟಿ ಅನುದಾನ ಮಂಜೂರು ಮಾಡಿತ್ತು. ನಿರ್ಮಿತಿ ಕೇಂದ್ರ ಕಾಮಗಾರಿ ಜವಾಬ್ದಾರಿ ವಹಿಸಿಕೊಂಡಿತ್ತು. ಆದರೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದ್ದವು. ಸಾರ್ವಜನಿಕರಿಂದ ವಿರೋಧ ವ್ಯಕ್ತವಾದರೂ ಅದೇ ಸಂಸ್ಥೆಗೆ ಕಾಮಗಾರಿ ನೀಡಿದ್ದೇಕೆ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಸೋಲಾರ್ ಬ್ಯಾಟರಿ ನಾಪತ್ತೆ: ಸ್ವಾತಂತ್ರ್ಯ ಹೋರಾಟಗಾರರ ನೆನಪಿಗಾಗಿ ನಿರ್ಮಿಸಲಾಗಿರುವ ಭವನದ ಆವರಣದಲ್ಲಿ ಅಳವಡಿಸಲಾಗಿದ್ದ ನಾಲ್ಕು ಸೋಲಾರ್ ಬ್ಯಾಟರಿಗಳು ಕಳೆದ ಮೂರು ವರ್ಷಗಳ ಅವಧಿಯಲ್ಲಿ ನಾಪತ್ತೆಯಾಗಿವೆ ಎನ್ನಲಾಗಿದೆ. ಸ್ಮಾರಕದ ಭದ್ರತೆ ಮತ್ತು ನಿರ್ವಹಣೆ ಕುರಿತು ಇದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಈ ಕಟ್ಟಡಗಳು ಜಿಲ್ಲೆಯಲ್ಲಿಯೇ ಅರ್ಥಪೂರ್ಣ ಸ್ಮಾರಕಗಳಾಗಿ ರೂಪುಗೊಳ್ಳಬೇಕು ಎನ್ನುವುದು ನಮ್ಮ ಆಶಯ. ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು ಎಂದು ವಕೀಲ ಉಮೇಶ ನಾಯ್ಕ ಹೇಳಿದರು.