ಸಾರಾಂಶ
ಗಂಗಾವತಿ : ಆಹಾರ ಇಲಾಖೆಯ ಸರ್ಕಾರಿ ಉಗ್ರಾಣದ ಮೇಲೆ ತಹಸೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಅನ್ನಭಾಗ್ಯ ಯೋಜನೆಯ ಸುಮಾರು 171 ಕ್ವಿಂಟಲ್ ಅಕ್ಕಿಯನ್ನು ವಶಪಡಿಸಿಕೊಂಡಿರುವ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ನಡೆದಿದೆ.
ಮಂಗಳವಾರ ಈ ಬಗ್ಗೆ ಮಾಹಿತಿ ಪಡೆದ ತಹಸೀಲ್ದಾರ್ ರವಿ ಅಂಗಡಿ ಮತ್ತು ಆಹಾರ ಇಲಾಖೆಯ ಅಧಿಕಾರಿಗಳು, ನಗರದ ಹೇರೂರು ರಸ್ತೆಯಲ್ಲಿರುವ ಸರ್ಕಾರಿ ಉಗ್ರಾಣದ ಮೇಲೆ ದಾಳಿ ನಡೆಸಿದರು. ಈ ವೇಳೆ, ದುಬೈ ಮೂಲದ ‘ಲಾಲ್’ ಎನ್ನುವ ಬ್ರ್ಯಾಂಡ್ ಅಕ್ಕಿಯ ಪ್ಯಾಕೆಟ್‌ಗಳು ಪತ್ತೆಯಾಗಿವೆ. ಇವುಗಳ ಮೇಲೆ ದುಬೈ, ಯುಎಇ ವಿಳಾಸವಿದ್ದು, ಇವುಗಳನ್ನು ವಿದೇಶಕ್ಕೆ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಪರಿಶೀಲನೆ ನಡೆಸಿದಾಗ ಇವೆಲ್ಲವೂ ಅನ್ನಭಾಗ್ಯದ ಅಕ್ಕಿ ಎಂದು ತಿಳಿದುಬಂದಿದೆ ಎನ್ನಲಾಗಿದೆ. 25 ಕೇಜಿಯ ಬ್ಯಾಗ್‌ಗಳಲ್ಲಿ ಇವುಗಳನ್ನು ಪ್ಯಾಕ್ ಮಾಡಲಾಗಿತ್ತು.
ದಾಳಿಯ ಮುನ್ಸೂಚನೆ ಸಿಗುತ್ತಲೇ, ಆಹಾರ ಇಲಾಖೆಯ ಉಗ್ರಾಣದಲ್ಲಿ ಲಕ್ಷಾಂತರ ರುಪಾಯಿ ಮೌಲ್ಯದ ಅನ್ನಭಾಗ್ಯ ಯೋಜನೆಯ ಅಕ್ಕಿ ಸಂಗ್ರಹಿಸಿದ ಆರೋಪ ಹೊತ್ತಿರುವ ಉಗ್ರಾಣ ವ್ಯವಸ್ಥಾಪಕ ಸೋಮಶೇಖರ ನಾಪತ್ತೆಯಾಗಿದ್ದಾರೆ. ಉಗ್ರಾಣಕ್ಕೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾರೆ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ.
ವಿಶೇಷವೆಂದರೆ, ಅಧಿಕಾರಿಗಳ ಬಳಿ ಈ ವ್ಯಕ್ತಿಯ ವಿಳಾಸವೇ ಇಲ್ಲವಂತೆ. ಈ ಮಧ್ಯೆ, ಆಹಾರ ಇಲಾಖೆಯ ಅಧಿಕಾರಿಗಳು ಸರ್ಕಾರಿ ಉಗ್ರಾಣಕ್ಕೆ ಬೀಗ ಹಾಕಿ, ಅಕ್ಕಿ ಸಾಗಾಟಕ್ಕಾಗಿ ಬಳಸಲಾಗುತ್ತಿದ್ದ ಲಾರಿಯನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ.
ಇದರ ಬೆನ್ನಲ್ಲೇ, ಗೋದಾಮಿನ ಮ್ಯಾನೇಜರ್ ಸೋಮಶೇಖರ ಬುಡ್ಡಣ್ಣವರ್, ಉಮಾಶಂಕರ ರೈಸ್‌ಮಿಲ್, ಲಾರಿ ಚಾಲಕ ಹಾಗೂ ಲಾರಿ ಮಾಲೀಕರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
2022ರಲ್ಲಿ ಇದೇ ಗೋದಾಮಿನಲ್ಲಿ 168 ಕ್ವಿಂಟಲ್ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹ ಮಾಡಲಾಗಿತ್ತು. ಆ ವೇಳೆ ಜಿಲ್ಲಾಧಿಕಾರಿಯಾಗಿದ್ದ ನಲಿನ್ ಅತುಲ್ ಅವರು ಅಕ್ಕಿ ಸಂಗ್ರಹಿಸಿರುವ ವ್ಯಕ್ತಿಯ ದಾಖಲೆ ಪರಿಶೀಲಿಸಿ, ಅಕ್ಕಿ ಬಿಡುಗಡೆ ಮಾಡುವಂತೆ ಆದೇಶಿಸಿದ್ದರು. ಅವರ ಆದೇಶದ ಹೊರತಾಗಿಯೂ ಅಕ್ಕಿ ಉಗ್ರಾಣದಲ್ಲಿಯೇ ಉಳಿದಿತ್ತು.
ಕೇಸ್ ಹಾಕಿದ್ದೇವೆಆಹಾರ ಇಲಾಖೆಯ ಉಗ್ರಾಣದಲ್ಲಿ ಲಕ್ಷಾಂತರ ರುಪಾಯಿ ಮೌಲ್ಯದ ಅನ್ನಭಾಗ್ಯ ಯೋಜನೆಯ ಅಕ್ಕಿ ಪ್ಯಾಕೆಟ್‌ಗಳನ್ನು ಅನಧಿಕೃತವಾಗಿ ಇಟ್ಟಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಉಗ್ರಾಣಕ್ಕೆ ಬೀಗ ಹಾಕಲಾಗಿದೆ. ಅಲ್ಲದೆ, ಬೇರೆಡೆ ಸಾಗಾಟ ಮಾಡುತ್ತಿದ್ದ ಅಕ್ರಮ ಅಕ್ಕಿಯ ಲಾರಿಯನ್ನು ಪೊಲೀಸ್ ಠಾಣೆಗೆ ಒಪ್ಪಿಸಲಾಗಿದ್ದು, ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ.-ರವಿ ಅಂಗಡಿ, ತಹಸೀಲ್ದಾರ್ ಗಂಗಾವತಿ.---
ಸಭೆಯಲ್ಲಿ ಚರ್ಚೆ
ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ಮಾಹಿತಿ ಬಂದ ತಕ್ಷಣ ಆಹಾರ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ, ಸಂಬಂಧಪಟ್ಟವರ ಮೇಲೆ ದೂರು ದಾಖಲಿಸುವಂತೆ ತಿಳಿಸಲಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಕೊಪ್ಪಳದಲ್ಲಿ ಜರುಗುವ ಜಿಲ್ಲಾ ಗ್ಯಾರಂಟಿ ಯೋಜನೆ ಸಭೆಯಲ್ಲಿ ಚರ್ಚಿಸಲಾಗುತ್ತದೆ.
-ಡಾ। ವೆಂಕಟೇಶ ಬಾಬು, ಅಧ್ಯಕ್ಷ, ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಗಂಗಾವತಿ.