ಡಿಸಿಸಿ ಬ್ಯಾಂಕ್‌ಗೆ ಅಣ್ಣಾಸಾಹೇಬ್ ಜೊಲ್ಲೆ ಆಯ್ಕೆ ನಿಶ್ಚಿತ

| Published : Oct 01 2025, 02:00 AM IST

ಸಾರಾಂಶ

ಅ.19ರಂದು ನಡೆಯುವ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಿಪ್ಪಾಣಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿರುವ ನಿಯೋಜಿತ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆಯವರ ಆಯ್ಕೆ ನಿಶ್ಚಿತ

ಕನ್ನಡಪ್ರಭ ವಾರ್ತೆ ಬೆಳಗಾವಿ

ಅ.19ರಂದು ನಡೆಯುವ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಿಪ್ಪಾಣಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿರುವ ನಿಯೋಜಿತ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆಯವರ ಆಯ್ಕೆ ನಿಶ್ಚಿತವೆಂದು ಬೆಮುಲ್ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ನಗರದ ಹೊರವಲಯದಲ್ಲಿರುವ ಖಾಸಗಿ ಹೊಟೇಲ್‌ನಲ್ಲಿ ಆಯೋಜಿತಗೊಂಡಿರುವ ನಿಪ್ಪಾಣಿ ಕ್ಷೇತ್ರದ ಪಿಕೆಪಿಎಸ್ ಸದಸ್ಯರ ಸಭೆಯಲ್ಲಿ ಸೋಮವಾರ ಭಾಗವಹಿಸಿ ಮಾತನಾಡಿದ ಅವರು, ಬಿಡಿಸಿಸಿ ಬ್ಯಾಂಕ್ ಅಧಿಕಾರ ಚುಕ್ಕಾಣಿ ಹಿಡಿಯಲು ಈಗಾಗಲೇ ರಣತಂತ್ರ ರೂಪಿಸಿದ್ದೇವೆ ಎಂದು ತಿಳಿಸಿದರು.

ನಿಪ್ಪಾಣಿ ಕ್ಷೇತ್ರದಲ್ಲಿ ಸುಮಾರು 119 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿದ್ದು, ಅವುಗಳಲ್ಲಿ ನಮ್ಮ ಪೆನೆಲ್ ಅಭ್ಯರ್ಥಿಯಾಗಿರುವ ಅಣ್ಣಾಸಾಹೇಬ ಜೊಲ್ಲೆಗೆ ಈಗಾಗಲೇ 72 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಬೆಂಬಲಿಸಿವೆ. ಇದರಿಂದ ಜೊಲ್ಲೆ ಆಯ್ಕೆ ಬಹುತೇಕ ಖಚಿತವಾಗಿದೆ. ಜಿಲ್ಲೆಯ ಎಲ್ಲ ಪಕ್ಷಗಳ ನಾಯಕರು ಪಕ್ಷ ಬೇಧ ಮರೆತು ಸಹಕಾರ ಮನೋಭಾವನೆಯಿಂದ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತಿದ್ದೇವೆ.‌ ಜಿಲ್ಲೆಯ ಎಲ್ಲ ಹಿರಿಯರ ಮುಂದಾಳತ್ವದಲ್ಲಿ ಈ ಚುನಾವಣೆ ನಡೆಯಲಿದೆ. ಒಟ್ಟು 16 ಸ್ಥಾನಗಳ ಪೈಕಿ 12 ಸ್ಥಾನಗಳನ್ನು ಗೆಲ್ಲಿಸಲು ನಾವು ಪಣ ತೊಟ್ಟಿದ್ದೇವೆ ಎಂದರು.

ಮಾಜಿ ಸಂಸದ, ನಿಪ್ಪಾಣಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ರೈತರ ಸಂಸ್ಥೆಯಾಗಿರುವ ಡಿಸಿಸಿ ಬ್ಯಾಂಕಿನ‌ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ರೈತರ ಸೇವೆಯೇ ನಮ್ಮ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗೋಡೆ, ನಿಪ್ಪಾಣಿ ಹಾಲ ಸಿದ್ದನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಎಂ.ಕೆ.ಪಾಟೀಲ, ನಿಪ್ಪಾಣಿ ಮಾಜಿ ನಗರಾಧ್ಯಕ್ಷ ಜಯವಂತ ಪಾಟೀಲ, ನಿಪ್ಪಾಣಿ ಕ್ಷೇತ್ರದ ಪಿಕೆಪಿಎಸ್ ಅಧ್ಯಕ್ಷರು, ಮತ್ತು 72 ಡೆಲಿಗೇಟರ್ಸ್ ಸಂದರ್ಭದಲ್ಲಿ ಉಪಸ್ಥಿತರಿದ್ದರು.