ಮಕ್ಕಳ ಪ್ರತಿಭೆಗೆ ಹೊರತರಲು ವಾರ್ಷಿಕೋತ್ಸವಗಳು ಸಹಕಾರಿ: ಆನಂದಕುಮಾರ್

| Published : Feb 24 2025, 12:34 AM IST

ಸಾರಾಂಶ

ಗ್ರಾಮಗಳಲ್ಲಿ ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಸಹಕಾರ ನೀಡಬೇಕು. ಮಕ್ಕಳಿಗೆ ಪಾಠ ಪ್ರವಚನಗಳ ಜೊತೆಗೆ ಹೆಚ್ಚಾಗಿ ಪಠ್ಯೇತರ ಚಟುವಟಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆಗಳ ಕಡೆ ಆಸಕ್ತಿ ಹೊಂದಿರುತ್ತಾರೆ. ಪೋಷಕರು, ಶಿಕ್ಷಕರು ಸಹ ಮಕ್ಕಳ ಅನುಕೂಲಕ್ಕೆ ತಕ್ಕಂತೆ ಸಾಧನೆಗೆ ಸಹಕಾರ ನೀಡಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮಕ್ಕಳಲ್ಲಿನ ಸುಪ್ತ ಪ್ರತಿಭೆ ಹೊರತರಲು ಶಾಲಾ ವಾರ್ಷಿಕೋತ್ಸವಗಳು ಸಹಕಾರಿಯಾಗಿವೆ ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಆನಂದಕುಮಾರ್ ಅಭಿಪ್ರಾಯಪಟ್ಟರು.

ತಾಲೂಕಿನ ನಾಟನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಲು ಸಹಕಾರ ನೀಡಬೇಕು ಎಂದರು.

ಗ್ರಾಮಗಳಲ್ಲಿ ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಸಹಕಾರ ನೀಡಬೇಕು. ಮಕ್ಕಳಿಗೆ ಪಾಠ ಪ್ರವಚನಗಳ ಜೊತೆಗೆ ಹೆಚ್ಚಾಗಿ ಪಠ್ಯೇತರ ಚಟುವಟಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆಗಳ ಕಡೆ ಆಸಕ್ತಿ ಹೊಂದಿರುತ್ತಾರೆ. ಪೋಷಕರು, ಶಿಕ್ಷಕರು ಸಹ ಮಕ್ಕಳ ಅನುಕೂಲಕ್ಕೆ ತಕ್ಕಂತೆ ಸಾಧನೆಗೆ ಸಹಕಾರ ನೀಡಬೇಕು ಎಂದರು.

ಶಾಸಕರ ಸಹೋದರ ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಎಚ್.ಟಿ.ಲೋಕೇಶ್ ಮಾತನಾಡಿ, ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸಿದ ನಂತರ ಆಗಾಗ್ಗೆ ಶಾಲೆಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ವರದಿಯ ಪ್ರಗತಿ ಬಗ್ಗೆ ಮಾಹಿತಿ ತೆಗೆದುಕೊಂಡು ಮಗುವಿನ ಜ್ಞಾನ ತಿಳಿಯಲು ಯತ್ನ ಮಾಡಬೇಕು ಎಂದರು.

ವಿದ್ಯಾರ್ಥಿಗಳಿಗೆ ಮೊದಲ ಪಾಠಶಾಲೆ ಮನೆಯಿಂದಲೇ ಸಂಸ್ಕಾರ, ಸಂಯಮ, ಶಿಸ್ತು ಮೊದಲ ಪಾಠವಾಗಬೇಕು. ನಂತರ ಪಾಠದ ಬಗ್ಗೆ ತಿಳಿಯಬೇಕು. ಶಿಕ್ಷಕರು, ಪೋಷಕರು ಹಾಗೂ ಸಮುದಾಯ ಪರಸ್ಪರ ಸಂಪರ್ಕ ಹೊಂದಿದರೆ ಮಾತ್ರ ಗ್ರಾಮೀಣ ಶಾಲೆಗಳು ಉಳಿಯುತ್ತವೆ ಎಂದರು.

ಇದೇ ವೇಳೆ ವಿವಿಧ ಕ್ರೀಡೆಗಳಲ್ಲಿ ಗೆದ್ದ ಪೋಷಕರಿಗೆ ಬಹುಮಾನ ವಿತರಿಸಲಾಯಿತು. ಎಸ್ ಡಿಎಂಸಿ ಅಧ್ಯಕ್ಷ ಮಹಾದೇವ್, ಮುಖಂಡ ಬೋರ್ ವೆಲ್ ಮಹೇಶ್, ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ತಾಲೂಕು ಕಸಾಪ ಅಧ್ಯಕ್ಷ ಎಚ್.ಆರ್.ಪೂರ್ಣಚಂದ್ರ ತೇಜಸ್ವಿ, ನಿವೃತ್ತ ಅಭಿಯಂತರರಾದ ದೇವೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಪದ್ಮೇಶ್, ಪ್ರಧಾನ ಕಾರ್ಯದರ್ಶಿ ಸಿ.ಟಿ.ಲಕ್ಷ್ಮಣಗೌಡ ಹಲವರು ಭಾಗವಹಿಸಿದ್ದರು.