ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ

| Published : Feb 06 2025, 11:47 PM IST

ಸಾರಾಂಶ

ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವವು ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆಯಿತು.

ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಹುದೇರಿ ರಾಜೇಂದ್ರ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸರ್ವ ಸಮಸ್ಯೆಗಳಿಗೂ ಶಿಕ್ಷಣವು ಪರಿಹಾರವನ್ನು ನೀಡುತ್ತದೆ. ಆ ನಿಟ್ಟಿನಲ್ಲಿ ಎಲ್ಲ ವಿದ್ಯಾರ್ಥಿಗಳು ಶ್ರಮವಹಿಸಿ ಉತ್ತಮ ಶಿಕ್ಷಣವನ್ನು ಪಡೆಯುವ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಈ ಶೈಕ್ಷಣಿಕ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗುವುದಲ್ಲದೆ, ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವಂತಾಗಬೇಕು ಎಂದು ತಿಳಿಸಿದರು.

ದಂತ ವೈದ್ಯರಾದ ಬೆಳ್ಯನ ರಾಘವೇಂದ್ರ ಅವರು ಮಾತನಾಡಿ ನಿರಂತರವಾದ ಅಧ್ಯಯನವು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ಅಲ್ಲದೆ ನಾವು ಓದಿದ ಶಿಕ್ಷಣ ಸಂಸ್ಥೆ, ರಾಜ್ಯ ಮತ್ತು ರಾಷ್ಟ್ರಕ್ಕೆ ಉತ್ತಮ ಪ್ರಜೆಯಾಗುವ ಮೂಲಕ ಒಳ್ಳೆಯ ಹೆಸರು ತರುವ ನಿಟ್ಟಿನಲ್ಲಿ ಎಲ್ಲರೂ ಒಳ್ಳೆಯ ರೀತಿಯಲ್ಲಿ ಭವಿಷ್ಯದ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹುದೇರಿ ರಾಜೇಂದ್ರ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಈ ಹಿಂದೆ ಎಲ್ಲರಿಗೂ ಶಿಕ್ಷಣ ದೊರೆಯಲೆಂದು ಜಿಲ್ಲೆಯ ಹಲವಾರು ಕಡೆಗಳಲ್ಲಿ ಶಿಕ್ಷಣ ಸಂಸ್ಥೆಗಳಿರುವಂತೆ ನಮ್ಮ ಮದೆ ಮಹೇಶ್ವರ ವಿದ್ಯಾಸಂಸ್ಥೆಯು ಸುಮಾರು 43 ವರ್ಷಗಳಿಂದ ನಿರಂತರವಾಗಿ ಉತ್ತಮ ರೀತಿಯಲ್ಲಿ ಶಿಕ್ಷಣ ನೀಡುತ್ತಾ ಬಂದಿದೆ ಎಂದರು.

ಇದರಲ್ಲಿ ಅಧ್ಯಾಪಕರ ಶ್ರಮವು ಅಡಗಿದೆ. ಎಲ್ಲ ವಿದ್ಯಾರ್ಥಿಗಳು ಶಿಕ್ಷಣದ ಸದುಪಯೋಗಪಡೆದುಕೊಂಡು ಕಾಲೇಜಿಗೆ, ತಂದೆ, ತಾಯಿಯರಿಗೆ, ರಾಜ್ಯಕ್ಕೆ ಉತ್ತಮ ಹೆಸರನ್ನು ತರುವ ಮೂಲಕ ಉತ್ತಮ ಪ್ರಜೆಯಾಗಿ ಬಾಳಬೇಕು ಎಂದು ಹೇಳಿದರು.

ರಾಜ್ಯಶಾಸ್ತ್ರ ಉಪನ್ಯಾಸಕರಾದ ಯೋಗಿತ ಅವರು ಕಾಲೇಜು ವಾರ್ಷಿಕ ವರದಿ ವಾಚಿಸಿದರು. ಕನ್ನಡ ಉಪನ್ಯಾಸಕರಾದ ಶ್ರೀನಿವಾಸ ಅವರು ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಕಾಲೇಜಿನ ಪ್ರಾಂಶುಪಾಲರಾದ ಸಿದ್ದರಾಜು ಬೆಳ್ಳಯ್ಯ ಅವರು ಸ್ವಾಗತಿಸಿದರು. ಇತಿಹಾಸ ಉಪನ್ಯಾಸಕರಾದ ಪರಶುರಾಮಪ್ಪ ಅವರು ನಿರೂಪಿಸಿದರು. ಅರ್ಥಶಾಸ್ತ್ರ ಉಪನ್ಯಾಸಕರಾದ ವಾಣಿ ವಂದಿಸಿದರು.

ಬಳಿಕ ಕಾಲೇಜು ಸಭಾಂಗಣದಲ್ಲಿ 2ನೇ ಮೊಣ್ಣಂಗೇರಿಯ ಯಕ್ಷಗಾನ ಕಲಾವಿದ ಮಾದವ ಮತ್ತು ತಂಡದವರಿಂದ ‘ಶ್ರೀಕೃಷ್ಣ ಲೀಲೆ ಯಕ್ಷಗಾನ ನಡೆಯಿತು. ಜೊತೆಗೆ ವಿದ್ಯಾರ್ಥಿಗಳಿಂದ ವಿಭಿನ್ನ ಮನೋರಂಜನಾ ಕಾರ್ಯಕ್ರಮ ನಡೆಯಿತು.