ಸಾರಾಂಶ
ನಮ್ಮ ನಾಡಿನ ಪರಂಪರೆ ಮತ್ತು ಇತಿಹಾಸದ ಭಾಗವಾಗಿರುವ ಧಾರ್ಮಿಕ ಆಚರಣೆಯು ಗ್ರಾಮದಲ್ಲಿನ ಎಲ್ಲ ಸಮುದಾಯದವರನ್ನು ಒಗ್ಗೂಡಿಸಿ ಪರಸ್ಪರ ಸಾಮರಸ್ಯ ಮತ್ತು ಸ್ನೇಹ ಭಾವನೆ ಮೂಡಿಸಲು ಉತ್ತಮ ವೇದಿಕೆಯಾಗಿದೆ ಎಂದು ಶ್ರೀ ಅಂಬಾ ಭವಾನಿದೇವಿ ಸೇವಾ ಸಮಿತಿ ಟ್ರಸ್ಟಿನ ಪದಾಧಿಕಾರಿಗಳು ತಿಳಿಸಿದರು.
ಗೌರಿಬಿದನೂರು: ನಮ್ಮ ನಾಡಿನ ಪರಂಪರೆ ಮತ್ತು ಇತಿಹಾಸದ ಭಾಗವಾಗಿರುವ ಧಾರ್ಮಿಕ ಆಚರಣೆಯು ಗ್ರಾಮದಲ್ಲಿನ ಎಲ್ಲ ಸಮುದಾಯದವರನ್ನು ಒಗ್ಗೂಡಿಸಿ ಪರಸ್ಪರ ಸಾಮರಸ್ಯ ಮತ್ತು ಸ್ನೇಹ ಭಾವನೆ ಮೂಡಿಸಲು ಉತ್ತಮ ವೇದಿಕೆಯಾಗಿದೆ ಎಂದು ಶ್ರೀ ಅಂಬಾ ಭವಾನಿದೇವಿ ಸೇವಾ ಸಮಿತಿ ಟ್ರಸ್ಟಿನ ಪದಾಧಿಕಾರಿಗಳು ತಿಳಿಸಿದರು.
ತಾಲೂಕಿನ ತೊಂಡೇಬಾವಿ ಹೋಬಳಿಯ ತರಿಧಾಳು ಗ್ರಾಪಂ ವ್ಯಾಪ್ತಿಯ ದ್ಯಾವಸಂದ್ರ ಗ್ರಾಮದ ಶ್ರೀಅಂಬಾ ಭವಾನಿ ದೇವಿ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಶ್ರೀ ಅಂಬಾ ಭವಾನಿ ದೇವಸ್ಥಾನದ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಿದ್ದ ಧ್ವಜಸ್ತಂಭ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಎಂತಹ ಕಷ್ಟ, ನೋವು ಎದುರಾದರೂ ಸ್ವಲ್ಪ ಸಮಯ ದೇವಸ್ಥಾನಕ್ಕೆ ತೆರಳಿ ಶ್ರದ್ಧೆ, ಭಕ್ತಿಯಿಂದ ದೇವರನ್ನು ಪ್ರಾರ್ಥಿಸಿ ಪೂಜೆ ಸಲ್ಲಿಸಿದರೆ ಸಿಗುವ ಆನಂದಕ್ಕೆ ಪಾರವೇ ಇಲ್ಲ ಎಂದರು.ಮನುಷ್ಯನ ಸರ್ವಾಂಗೀಣ ಪ್ರಗತಿಗೆ ದೇವರ ಅನುಗ್ರಹ ಮುಖ್ಯವಾಗಿದೆ. ಅಧಿಕಾರ, ಅಂತಸ್ತು ಎಷ್ಟೇ ಇದ್ದರೂ ಮನುಷ್ಯ ದೇವರ ಅನುಗ್ರಹವಿರದಿದ್ದರೆ ಏನನ್ನು ಸಾಧಿಸಲಾಗುವುದಿಲ್ಲ. ಎಲ್ಲ ಧರ್ಮಗಳ ಸಾರ ಒಂದೇಯಾಗಿದ್ದು, ಮೇಲು- ಕೀಳು ಎಂಬ ಪರಿಕಲ್ಪನೆಯನ್ನು ದೂರ ಮಾಡಿ ಪರಸ್ಪರ ಪ್ರೀತಿ, ವಿಶ್ವಾಸ, ಬಾಂಧವ್ಯ, ಸಹೋದರತ್ವದಿಂದ ಬಾಳುವುದೇ ನಮ್ಮೆಲ್ಲರ ಗುರಿಯಾಗಬೇಕಾಗಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಕಳಸ ಸ್ಥಾಪನೆ, ಗಂಗೆ ಪೂಜೆ, ಹೋಮ, ಅಮ್ಮನವರಿಗೆ ಅಭಿಷೇಕ, ಅಲಂಕಾರ ಪೂಜೆ, ಗಣಪತಿ ಹೋಮ, ಧ್ವಜಸ್ತಂಬ ಪ್ರತಿಷ್ಠಾಪನೆ, ದುರ್ಗಾ ಹೋಮ, ಪೂಜೆ, ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗವನ್ನು ಏರ್ಪಡಿಸಲಾಗಿತ್ತು. ಸಂಜೆ ಊರಿನ ರಾಜಬೀದಿಯಲ್ಲಿ ಶ್ರೀ ಅಂಬಾ ಭವಾನಿ ದೇವಿಯ ಮೆರೆವಣಿಗೆಯನ್ನು ಜಾನಪದ ಕಲಾತಂಡಗಳ ಪ್ರದರ್ಶನದೊಂದಿಗೆ ಹಮ್ಮಿಕೊಳ್ಳಲಾಗಿತ್ತು.ಶ್ರೀ ಅಂಬಾಭವಾನಿ ದೇವಿ ಸೇವಾ ಸಮಿತಿ ಟ್ರಸ್ಟಿನ ಎಲ್ಲಾ ಪದಾಧಿಕಾರಿಗಳು, ಶ್ರೀ ಛತ್ರಪತಿ ಶಿವಾಜಿ ಯುವಕರ ಸಂಘ, ದ್ಯಾವಸಂದ್ರ ಹಾಗೂ ಅಕ್ಕ ಪಕ್ಕದ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡು ಭಕ್ತಿ ಭಾವದಲ್ಲಿ ಮಿಂದೆದ್ದರು.