ಎಸ್‌ಸಿಡಿಸಿಸಿ ಬ್ಯಾಂಕ್ ಸಾರ್ವಕಾಲಿಕ ಗರಿಷ್ಠ 79.05 ಕೋಟಿ ರು. ಲಾಭ

| Published : Aug 15 2024, 01:52 AM IST

ಸಾರಾಂಶ

ಸದಸ್ಯ ಸಂಘಗಳಿಗೆ ಶೇ.9 ಡಿವಿಡೆಂಡ್‌ನ್ನು ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್‌ ಅವರು ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದ್ದಾರೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್) 2023-24ನೇ ಸಾಲಿನಲ್ಲಿ ಸಾರ್ವಕಾಲಿಕ ಗರಿಷ್ಠ 79.05 ಕೋಟಿ ರು. ಲಾಭ ಗಳಿಸಿ ತನ್ನ ಸದಸ್ಯ ಸಂಘಗಳಿಗೆ ಶೇ.9 ಡಿವಿಡೆಂಡ್‌ನ್ನು ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್‌ ಅವರು ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದ್ದಾರೆ.

ಬುಧವಾರ ಬ್ಯಾಂಕಿನ ಸಭಾಭವನದಲ್ಲಿ ನಡೆದ 110ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೊಸತನದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಳವಡಿಸಿ ಗ್ರಾಹಕರಿಗೆ ಉತ್ಕೃಷ್ಟ ಸೇವೆಯನ್ನು ಬ್ಯಾಂಕ್ ನೀಡುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಇಂಟರ್‌ನೆಟ್, ಕೋರ್ ಬ್ಯಾಂಕಿಂಗ್‌ನಂತಹ ಉನ್ನತ ಸೇವೆಯು ಬ್ಯಾಂಕಿನ 113 ಶಾಖೆಗಳಲ್ಲಿ ದೊರೆಯುತ್ತಿದೆ. ಮೊಬೈಲ್ ಆ್ಯಪ್, ಟ್ಯಾಬ್ ಬ್ಯಾಂಕಿಂಗ್‌ನಂತಹ ವಿನೂತನ ವ್ಯವಸ್ಥೆಯನ್ನು ಬ್ಯಾಂಕ್ ಗ್ರಾಹಕರಿಗೆ ಪರಿಚಯಿಸಿದೆ. ಮುಂದಿನ ದಿನಗಳಲ್ಲಿ “ಇಂಟರ್ ಬ್ಯಾಂಕ್ ಮೊಬೈಲ್ ಪೇಮೆಂಟ್ ಸಿಸ್ಟಮ್” ಹಾಗೂ “ಇಂಟರ್‌ನೆಟ್ ಬ್ಯಾಂಕಿಂಗ್” ಸೇವೆಯನ್ನು ರೂಪಿಸಲು ಬ್ಯಾಂಕ್ ಮುಂದಾಗಿದೆ. ವರದಿ ವರ್ಷದಲ್ಲಿ 10 ಹೊಸ ಶಾಖೆಗಳನ್ನು ತೆರೆಯುವ ಯೋಜನೆಯನ್ನು ಬ್ಯಾಂಕ್ ಹಮ್ಮಿಕೊಂಡಿದೆ ಎಂದು ರಾಜೇಂದ್ರ ಕುಮಾರ್‌ ಹೇಳಿದರು.

ಗುರಿ ಮೀರಿದ ಸಾಧನೆ:

ಬ್ಯಾಂಕ್ ವರದಿ ವರ್ಷದಲ್ಲಿ ಒಟ್ಟು 15544.34 ಕೋಟಿ ರು. ವ್ಯವಹಾರ ಸಾಧಿಸುವ ಮೂಲಕ ಗುರಿ ಮೀರಿದ ಸಾಧನೆಗೈದಿದೆ. ವಾಣಿಜ್ಯ ಬ್ಯಾಂಕುಗಳಲ್ಲಿ ಠೇವಣಾತಿ ಸಂಗ್ರಹಣೆಯಲ್ಲಿ ಪೈಪೋಟಿ ಇದ್ದರೂ ಬ್ಯಾಂಕ್ 113 ಶಾಖೆಗಳ ಮೂಲಕ ಒಟ್ಟು 7224.91 ಕೋಟಿ ರು. ಠೇವಣಿ ಸಂಗ್ರಹಿಸಿ, ಅತಿ ಹೆಚ್ಚು ಠೇವಣಿ ಸಂಗ್ರಹಿಸಿದ ರಾಜ್ಯದ ಪ್ರಥಮ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎನ್ನುವ ಕೀರ್ತಿಗೆ ಪಾತ್ರವಾಗಿದೆ ಎಂದರು.

ಬ್ಯಾಂಕ್ ಆರ್ಥಿಕ ವರ್ಷದಲ್ಲಿ ಸೇವಾ ಬದ್ಧತೆ ಮೆರೆದು 6485.12 ಕೋಟಿ ರು. ಮುಂಗಡ ನೀಡಿದೆ. 1072 ಸಹಕಾರಿ ಸಂಘಗಳು ಬ್ಯಾಂಕಿಗೆ ಸದಸ್ಯರಾಗಿದ್ದು, ಪಾಲು ಬಂಡವಾಳ 403.61 ಕೋಟಿ ರು., ಬ್ಯಾಂಕಿನ ದುಡಿಯುವ ಬಂಡವಾಳ 11418.68 ಕೋಟಿ ರು., 250.09 ಕೋಟಿ ರು. ವಿವಿಧ ನಿಧಿಗಳನ್ನು ಹೊಂದಿರುತ್ತದೆ ಎಂದು ರಾಜೇಂದ್ರ ಕುಮಾರ್‌ ತಿಳಿಸಿದರು.

ರಾಷ್ಟ್ರೀಯ ದಾಖಲೆ:

ಬ್ಯಾಂಕ್ ವರದಿ ವರ್ಷದಲ್ಲಿ ನೀಡಿದ ಎಲ್ಲ ಕೃಷಿ ಸಾಲಗಳು ಶೇ.100ರ ಮರುಪಾವತಿ ಕಂಡಿದೆ. ಇಂತಹ ಸಾಧನೆಯನ್ನು ಬ್ಯಾಂಕ್ ಕಳೆದ 29 ವರ್ಷಗಳಿಂದ ನಿರಂತರವಾಗಿ ಮಾಡಿರುವುದು ರಾಷ್ಟ್ರೀಯ ದಾಖಲೆ ಎಂದು ತಿಳಿಸಿದರು.

ವಿಶೇಷ ಪ್ರಶಸ್ತಿ:

ವರದಿ ವರ್ಷದಲ್ಲಿ 1000 ಕೋಟಿ ರು. ವ್ಯವಹಾರ ನಡೆಸಿದ ರಾಮಕೃಷ್ಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ, 500 ಕೋಟಿ ರು. ಠೇವಣಿ ಸಂಗ್ರಹಿಸಿದ ಮಹಾಲಕ್ಷ್ಮೀ ಕೋ-ಅಪರೇಟಿವ್ ಬ್ಯಾಂಕ್ ಉಡುಪಿ, ಬಡಗಬೆಟ್ಟು ಕೋ-ಅಪರೇಟಿವ್ ಸೊಸೈಟಿ ಉಡುಪಿ, 100 ಕೋಟಿ ರು. ಠೇವಣಿ ಸಂಗ್ರಹಿಸಿದ ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘ, ಮಂದಾರ್ತಿ ಸೇವಾ ಸಹಕಾರಿ ಸಂಘ, ಗಣಪತಿ ಸಹಕಾರಿ ವ್ಯವಸಾಯಿಕ ಸಂಘ, ಉಡುಪಿ, ಹಿರಿಯಡ್ಕ ವ್ಯವಸಾಯ ಸೇವಾ ಸಹಕಾರಿ ಸಂಘ, ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘ, ಇಡ್ಕಿದು ಸೇವಾ ಸಹಕಾರಿ ಸಂಘ, ಬಂಟ್ವಾಳ, ಒಕ್ಕಲಿಗ ಸೇವಾ ಸಹಕಾರಿ ಸಂಘ ಪುತ್ತೂರು - ಇವರಿಗೆ ವಿಶೇಷ ಪುರಸ್ಕಾರದ ಜೊತೆಗೆ ಒಂದು ಪವನ್ ಚಿನ್ನದ ನಾಣ್ಯ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪುರಸ್ಕಾರ:

2023-24ನೇ ಸಾಲಿನಲ್ಲಿ ಶೇ.100ರ ವಸೂಲಾತಿಯಲ್ಲಿ ಸಾಧನೆಗೈದ 13 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಪ್ರಶಸ್ತಿ ಪತ್ರದೊಂದಿಗೆ ಗೌರವಾರ್ಪಣೆ ಮಾಡಲಾಯಿತು. ಲೆಕ್ಕ ಪರಿಶೋಧನಾ “ಅ” ವರ್ಗ ಮತ್ತು “ಬಿ” ವರ್ಗದ ಅತ್ಯುತ್ತಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಆಯ್ದ ತಲಾ 3 ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ 2023-24ನೇ ಸಾಲಿನ ಜಿಲ್ಲಾ ಬ್ಯಾಂಕಿನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಟಿ.ಜಿ. ರಾಜಾರಾಮ್ ಭಟ್, ಭಾಸ್ಕರ್ ಎಸ್. ಕೋಟ್ಯಾನ್, ಎಸ್.ರಾಜು ಪೂಜಾರಿ, ಶಶಿಕುಮಾರ್ ರೈ ಬಿ., ಎಸ್.ಬಿ. ಜಯರಾಮ ರೈ, ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಕೆ.ಹರಿಶ್ಚಂದ್ರ, ಎಂ. ಮಹೇಶ್ ಹೆಗ್ಡೆ, ಬಿ.ಅಶೋಕ್ ಕುಮಾರ್ ಶೆಟ್ಟಿ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ. ಜೈರಾಜ್ ಬಿ. ರೈ, ಕುಶಾಲಪ್ಪ ಗೌಡ ಪಿ., ಎಸ್. ಎನ್. ಮನ್ಮಥ, ಸದಾಶಿವ ಉಳ್ಳಾಲ್, ರಾಜೇಶ್ ರಾವ್, ಉಭಯ ಜಿಲ್ಲೆಗಳ ಸಹಕಾರಿ ಸಂಘಗಳ ಉಪನಿಬಂಧಕರಾದ ಎಚ್.ಎನ್. ರಮೇಶ್, ಲಾವಣ್ಯ, ಉಭಯ ಜಿಲ್ಲೆಗಳ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ್ ಶೆಟ್ಟಿ ಇಂದ್ರಾಳಿ, ಪ್ರಸಾದ್ ಕೌಶಲ್ ಶೆಟ್ಟಿ, ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಗೋಪಾಲಕೃಷ್ಣ ಭಟ್ ಹಾಗೂ ಬ್ಯಾಂಕಿನ ಅಧಿಕಾರಿಗಳು ಇದ್ದರು.

ಬ್ಯಾಂಕಿನ ನಿರ್ದೇಶಕ ಟಿ.ಜಿ. ರಾಜಾರಾಮ್ ಭಟ್ ಸ್ವಾಗತಿಸಿದರು. ಪ್ರಭಾರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಗೋಪಾಲಕೃಷ್ಣ ಭಟ್ ನಿರೂಪಿಸಿ, ವಂದಿಸಿದರು.