ಕನ್ನಡಪ್ರಭ ವಾರ್ತೆ, ಚಾಮರಾಜನಗರ
ರಾಜ್ಯ ಸರ್ಕಾರ ಮಂಡಿಸಲಿರುವ ಆಯವ್ಯಯದಲ್ಲಿ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಸೇನಾಪಡೆ ವತಿಯಿಂದ ನಗರದಲ್ಲಿ ತಮಟೆ ಚಳವಳಿ ನಡೆಸಲಾಯಿತು.ನಗರದ ಜಿಲ್ಲಾಡಳಿತ ಭವನದ ಗೇಟ್ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾನಿರತರು ಪ್ರತಿಭಟನೆ ನಡೆಸಿ, ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದರು.
ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನೇಕ ಸಲ ಜಿಲ್ಲೆಗೆ ಭೇಟಿ ನೀಡಿ ಚಾಮರಾಜನಗರದ ಬಗ್ಗೆ ವಿಶೇಷ ಅಭಿಮಾನವನ್ನಿಟ್ಟುಕೊಂಡಿದ್ದಾರೆ. ಅವರು ಈ ಸಾಲಿನ ರಾಜ್ಯ ಬಜೆಟ್‌ನಲ್ಲಿ ಚಾಮರಾಜನಗರ ಗಡಿ ಜಿಲ್ಲೆಯಾಗಿದ್ದು, ಇಲ್ಲಿ ಬಡವರು, ಮಧ್ಯಮವರ್ಗದವರು, ಕಾರ್ಮಿಕರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ₹೫ ಸಾವಿರ ಕೋಟಿ ವಿಶೇಷ ಪ್ಯಾಕೇಜ್‌ನ್ನು ನೀಡಬೇಕು ಎಂದು ಆಗ್ರಹಿಸಿದರು.ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ಅಂತರ್ಜಲ ಕುಸಿಯುತಿದ್ದು ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಆಗಾಗಿ ಕೆರೆಗಳಿಗೆ ನೀರು ತುಂಬಿಸುವ ಮೂಲಕ ರೈತರಿಗೆ, ಜನರಿಗೆ ಅನುಕೂಲ ಮಾಡಿಕೊಡಬೇಕು. ಜಿಲ್ಲೆಯ ಪ್ರವಾಸೋದ್ಯಮಕ್ಕೆ ವಿಶೇಷವಾದ ಗಮನಕೊಡಬೇಕು. ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡಬೇಕು. ಚಾಮರಾಜನಗರ ವಿಶ್ವವಿದ್ಯಾನಿಲಯದ ಸಂಪೂರ್ಣ ಅಭಿವೃದ್ಧಿಗಾಗಿ ₹೧೦೦ ಕೋಟಿ ನೀಡಬೇಕು. ಚಾಮರಾಜನಗರ ಪಟ್ಟಣದ ಕುಡಿಯುವ ನೀರಿನ ಯೋಜನೆ ಮಂದಗತಿಯಲ್ಲಿ ಸಾಗುತ್ತಿದೆ. ಇದಕ್ಕೂ ಅನುದಾನ ನೀಡಬೇಕು. ಗಡಿಜಿಲ್ಲೆಯಲ್ಲಿ ಕನ್ನಡದ ಬೆಳವಣಿಗಾಗಿ ಕನ್ನ
ಡ ಭವನವನ್ನು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಮಂಜೂರು ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಪಣ್ಯದ ಹುಂಡಿರಾಜು, ನಿಜಧ್ವನಿಗೋವಿಂದರಾಜು, ಮಹೇಶ್‌ಗೌಡ, ತಾಂಡವಮೂರ್ತಿ, ಸುರೇಶ್‌ಶೆಟ್ಟಿ, ಅಮಚವಾಡಿ ರಾಜು, ಹೊಮ್ಮ ಲೋಕೇಶ್, ಅರುಣ್ ಕುಮಾರ್ ಗೌಡ, ಆಟೋ ಲಿಂಗರಾಜು, ಮಹೇಶ್, ಶಿವಣ್ಣ, ಮುತ್ತುರಾಜು, ಮಡ್ಲುಪುರಪ್ರಕಾಶ್, ಪರ್ವತ್‌ರಾಜು, ನಾಗರಾಜು, ಚಂದ್ರಕುಮಾರ್ ಇತರರು ಭಾಗವಹಿಸಿದ್ದರು.