ಸಂತಮೇರಿ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕ ದಿನಾಚರಣೆ ನಡೆಯಿತು. ಶಾಲಾ ಆಡಳಿತ ವರದಿ ಶಾಲೆಯ ಬಹುಮುಖ ಅಭಿವೃದ್ಧಿ ಮತ್ತು ಚಟುವಟಿಕೆಗಳನ್ನು ಪ್ರತಿಪಾದಿಸಿದೆ ಎಂದು ಗಣ್ಯರು ಹೇಳಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಯಾವುದೇ ಜಾತಿ, ಭಾಷೆ ಧರ್ಮಗಳಿಗೆ ಸೇರಿದರೂ ಮೊದಲು ನಾವು ಭಾರತೀಯರು ಎಂಬುದು ಮನಸ್ಸಿನಲ್ಲಿಟ್ಟು, ತುಂಡು ತುಂಡಾಗಿರುವ ಸಮಾಜವನ್ನು ಒಗ್ಗೂಡಿಸಿ ವಸುದೈವ ಕುಟುಂಬಕಮ್ ಎಂಬ ಭಾವನೆಯಿಂದ ಸಮಾಜ ಕಟ್ಟಬೇಕಾಗಿದೆ ಎಂದು ಮೈಸೂರಿನ ಧರ್ಮಾಧ್ಯಕ್ಷರಾದ ವಂ. ಗುರು ಡಾ. ಫ್ರಾನ್ಸಿಸ್ ಸೇರಾವೊ ಹೇಳಿದರು. ಮಂಗಳವಾರ ಸಂತಮೇರಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ವಾರ್ಷಿಕ ದಿನಾಚರಣೆಯಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು ಜಾತಿ, ಭಾಷೆ ಪಂಗಡ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ಆಗುತ್ತಿರುವುದು ವಿಷಾದನೀಯ ಎಂದು ತಿಳಿಸಿದರು. ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿದ್ದ ಎಂಡಿಇಎಸ್ ಕಾರ್ಯದರ್ಶಿ ರೇ.ಫಾ.ಎಡ್ವರ್ಡ್ ವಿಲಿಯಂ ಸಾಲ್ಡಾನಾ ಮಾತನಾಡಿ, ಏನಾದರೂ ಆಗು ಮೊದಲು ಮಾನವನಾಗು ಎಂಬುದನ್ನು ನಾವು ಹೇಳಿಕೊಳ್ಳುತ್ತೇವೆ. ಹಕ್ಕಿಗಳಂತೆ ಆಕಾಶದಲ್ಲಿ ಹಾರಡುತ್ತೇವೆ, ಮೀನುಗಳಂತೆ ನೀರಿನಲ್ಲಿ ಈಜುತ್ತೇವೆ. ಆದರೆ ಮನುಷ್ಯ ನೆಲದ ಮೇಲೆ ಮಾನವೀಯತೆಯಿಂದ ನಡೆಯುವುದನ್ನು ಕಲಿತಿಲ್ಲ ಎಂದು ವಿಷಾದಿಸಿದ ಅವರು ನನ್ನ ನೋವು ನನಗೆ ಅರ್ಥವಾದರೆ ನಾನು ಜೀವಂತವಾಗಿದ್ದೇನೆಂದು ಅರ್ಥ, ಪರರ ನೋವು ನನಗೆ ಅರ್ಥವಾದರೆ ನಾನು ಮನುಷ್ಯನಾಗಿದ್ದೇನೆ ಎಂದು ಮಾರ್ಮಿಕವಾಗಿ ನುಡಿದರು. ಜೀವನದಲ್ಲಿ ತಂದೆ ತಾಯಿಯರ ಪಾತ್ರ ಬಹುಮುಖ್ಯ ಮಕ್ಕಳು ಹೇಗೆ ಬೆಳೆಯುತ್ತಾರೆ ಎಂಬುದು ತಂದೆ ತಾಯಿಯರ ಜೀವನದ ಪ್ರತಿಬಿಂಬವಾಗಿರುತ್ತಾರೆ. ಈ ಹಿನ್ನಲೆಯಲ್ಲಿ ಮಕ್ಕಳು ಮನೆಯೇ ಮೊದಲ ಪಾಠ ಶಾಲೆ ಎಂಬುದನ್ನು ನಾವು ಮರೆಯಬಾರದು ಎಂದು ಅವರು ಕರೆ ನೀಡಿದರು. ಮಹಾನಟಿ ರಿಯಾಲಿಟಿ ಶೋನ ಸ್ಪರ್ಧಿ ಸಿಂಚನ ಆರ್ ಮಾತನಾಡಿ, ನಾವು ಇನ್ನೊಬ್ಬರನ್ನು ಅನುಕರಿಸುವುದನ್ನು ಬಿಡಬೇಕು ಪ್ರತಿಯೊಬ್ಬರೂ ವೈದ್ಯರು ಇಂಜಿನೀಯರ್ ಆಗುವುದು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಕೆಲಸ ಮಾಡಿ ಸಮಾಜದಲ್ಲಿ ಗೌರವದಿಂದ ಬಾಳಬೇಕು ಎಂದು ಕರೆ ನೀಡಿದರು.ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜ್ ಮಾತನಾಡಿ, ಶಾಲಾ ಆಡಳಿತ ವರದಿ ಶಾಲೆಯ ಬಹುಮುಖ ಅಭಿವೃದ್ಧಿ ಮತ್ತು ಚಟುವಟಿಕೆಗಳನ್ನು ಪರಿಚಯಿಸಿದೆ ಎಂದು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಮಾತನಾಡಿ, ಬದುಕಿನಲ್ಲಿ ಗುರಿ ಸಾಧನೆಗೆ ಆಸಕ್ತಿ ಶ್ರಮ ಮತ್ತು ಶ್ರದ್ಧೆ ಇದ್ದಾಗ ಸಾಧನೆಯಾಗುತ್ತದೆ ಎಂದು ಅವರು ಹೇಳಿದರು. ಶಿಕ್ಷಣ ಸಂಸ್ಥೆಯು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ್ದು ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಶಿಕ್ಷಕ ಬಂಧುಗಳು ಪೋಷಕ ವರ್ಗವನ್ನು ಅಭಿನಂದಿಸುವುದಾಗಿ ಅವರು ಹೇಳಿದರು.

ವಿರಾಜಪೇಟೆ ಜೇಮ್ಸ್ ಡೊಮಿನಿಕ್ ಸಂತ ಅನ್ನಮ್ಮನವರ ದೇವಾಲಯ ಹಾಗು ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕರು, ವಿರಾಜಪೇಟೆ ಸಂತ ಅನ್ನಮ್ಮನವರ ಕಾಲೇಜು ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕರಾದ ರೇ.ಫಾ.ಮದಲೈ ಮುತ್ತು, ಮಡಿಕೇರಿ ಸಂತ ಮೈಕಲರ ದೇವಾಲಯ ಧರ್ಮಗುರುಗಳಾದ ರೇ.ಫಾ.ಜಾರ್ಜ್ ದೀಪಕ್, ಹಟ್ಟಿಹೊಳೆ ಪವಿತ್ರ ಜಪಮಾಲೆ ಮಾತೆಯ ದೇವಾಲಯದ ಧರ್ಮಗುರುಗಳಾದ ರೇ.ಫಾ. ಗಿಲ್ಬರ್ಟ್ ಡಿಸಿಲ್ವ, ಪೊನ್ನಂಪೇಟೆ ದೇವಾಲಯದ ಧರ್ಮಗುರುಗಳಾದ ರೇ.ಫಾ. ಮಾನ್ಯುಯಲ್ ಡಿ ಸೋಜಾ, ಮೈಸೂರು ಧರ್ಮಕೇಂದ್ರದ ಗುರುಗಳಾದ ನವೀನ್ ಕುಮಾರ್, ಸೋಮವಾರಪೇಟೆ ಸಂತ ಜೋಸೆಪರ ವಿದ್ಯಾಸಂಸ್ಥೆ ವ್ಯವಸ್ಥಾಪಕರಾದ ರೇ.ಫಾ.ಅವಿನಾಶ್, ಸಂತಮೇರಿ ಆಂಗ್ಲ ಮಾದ್ಯಮ ಶಾಲೆಯ ವ್ಯವಸ್ಥಾಪಕರಾದ ರೇ.ಫಾ.ವಿಜಯಕುಮಾರ್, ಜಿ.ಪಂ.ಮಾಜಿ ಸದಸ್ಯ ಪಿ.ಎಂ.ಲತೀಫ್ ಸಂತ ಮೇರಿ ವಿದ್ಯಾಸಂಸ್ಥೆಯ ಪ್ರಾಚಾರ್ಯರಾದ ಸೇಲ್ವರಾಜ್ ಮತ್ತಿತರರು ಇದ್ದರು.

ವಿದ್ಯುತ್ ದೀಪಾಲಂಕೃತ ಭವ್ಯ ವೇದಿಕೆಯಲ್ಲಿ ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮವು ಜನಮನ ಸೂರೆಗೊಳಿಸಿತು.