ಸಾರಾಂಶ
ಶಿರಸಿ: ಅತಿಥಿ ಶಿಕ್ಷಕರ ಪ್ರಮುಖ ಬೇಡಿಕೆ ಈಡೇರಿಕೆ ಆಗ್ರಹಿಸಿ ಅ. 5ರಂದು ಬೆಳಗ್ಗೆ 10 ಗಂಟೆಯಿಂದ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಅತಿಥಿ ಶಿಕ್ಷಕರ ವಾರ್ಷಿಕ ಜಿಲ್ಲಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಶಿರಸಿ ಶೈಕ್ಷಣಿಕ ಜಿಲ್ಲಾ ಅತಿಥಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ರೇಹನಾ ಶೇಖ್ ತಿಳಿಸಿದರು.
ನಗರದಲ್ಲಿ ಶನಿವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತಿಥಿ ಶಿಕ್ಷಕರು ಬಹಳ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರಮುಖ 12 ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಆಶ್ರಯದಲ್ಲಿ ಜಿಲ್ಲಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಸಮ್ಮೇಳವನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಉದ್ಘಾಟಿಸಲಿದ್ದು, ಶಾಸಕ ಭೀಮಣ್ಣ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಶಿರಸಿ ಶೈಕ್ಷಣಿಕ ಜಿಲ್ಲಾ ಉಪನಿರ್ದೇಶಕ ಡಿ.ಆರ್. ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ, ಕ.ರಾ.ಸ.ಪ್ರಾ. ಮತ್ತು ಪ್ರೌಢ ಶಾಲಾ ಅತಿಥಿ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷೆ ಚಿತ್ರಲೇಖಾ, ಗೌರವಾಧ್ಯಕ್ಷ ನಾರಾಯಣ ನಾಯಕ ಸೂರ್ವೆ, ಜಿಲ್ಲಾಧ್ಯಕ್ಷೆ ರೇಹನಾ ಶೇಖ್, ಜಿಲ್ಲಾ ಉಪಾಧ್ಯಕ್ಷ ಮನೋಹರ ಇಂಗಳಕಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಾರೂಖ ಮುಲ್ಲಾ, ಗೌರವಾಧ್ಯಕ್ಷ ಡಿ.ಎಸ್. ರಾಜಗೋಪಾಲ, ಹೈಕೋರ್ಟ್ ವಕೀಲ ಅನಂತ ನಾಯ್ಕ ಎನ್. ಮತ್ತಿತರರು ಉಪಸ್ಥಿತರಿರಲಿದ್ದಾರೆ ಎಂದರು.ಅತಿಥಿ ಶಿಕ್ಷಕ ದರ್ಶನ ಮರಾಠಿ ಮಾತನಾಡಿ, ಪ್ರತಿ ವರ್ಷ ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಮೆರಿಟ್ ಪದ್ಧತಿ ಕೈಬಿಟ್ಟು ಮೊದಲು ಕಾರ್ಯ ನಿರ್ವಹಿಸಿದವರಿಗೆ ಆದ್ಯತೆ ನೀಡಬೇಕು. ಅತಿಥಿ ಶಿಕ್ಷಕ, ಶಿಕ್ಷಕಿಯರಿಗೆ ಸೇವಾಭದ್ರತೆ ಒದಗಿಸಬೇಕು. ಸರ್ಕಾರಿ ಶಿಕ್ಷಕರಂತೆ ಬೇಸಿಗೆಯ ರಜೆಯನ್ನು ಸೇರಿ 12 ತಿಂಗಳು ವೇತನ ನೀಡುವ ಜತೆಗೆ ಸೇವೆ ಮುಂದುವರಿಸಿ ನೇಮಕಾತಿಯಲ್ಲಿ ಪ್ರತಿ ವರ್ಷ ಶೇ. 5ರಷ್ಟು ಕೃಪಾಂಕ ನೀಡಬೇಕು. ವೇತನ ಹೆಚ್ಚಿಸುವುದು, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಅತಿಥಿ ಶಿಕ್ಷಕರನ್ನು ಕಾಯಂಗೊಳಿಸಬೇಕು. ಪ್ರತಿ ವರ್ಷ ಸೇವೆ ಸಲ್ಲಿಸಿದ ಶಾಲೆಗಳಲ್ಲಿ ಪ್ರತಿವರ್ಷ ಸೇವಾ ಪ್ರಮಾಣಪತ್ರ ನೀಡಬೇಕು. ಸರ್ಕಾರಿ ಶಿಕ್ಷಕರಂತೆ ಅತಿಥಿ ಶಿಕ್ಷಕಿಯರಿಗೆ ಸೌಲಭ್ಯಗಳು ದೊರಕಬೇಕು. ಪ್ರತಿ ತಿಂಗಳ ಅತಿಥಿ ಶಿಕ್ಷಕರಿಗೆ ವೇತನವನ್ನು ನೇರವಾಗಿ ಅತಿಥಿ ಶಿಕ್ಷಕರ ಖಾತೆಗೆ ಜಮಾ ಮಾಡಬೇಕು. ಅತಿಥಿ ಶಿಕ್ಷಕ ಎಂಬ ಪದವನ್ನು ತೆಗೆದುಹಾಕಿ ಗೌರವ ಅರೆಕಾಲಿಕ ಶಿಕ್ಷಕ ಎಂದು ನಮೂದಿಸಬೇಕು. ಜೀವ ವಿಮೆ ಸೌಲಭ್ಯ ಒದಗಿಸಬೇಕು. ಹೆಚ್ಚುವರಿ ಶಿಕ್ಷಕರು ಬಂದಾಗ ಅತಿಥಿ ಶಿಕ್ಷಕರನ್ನು ಕೈ ಬಿಡದೆ ಬದಲಿ ವ್ಯವಸ್ಥೆ ಮಾಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಶೈನಾಜ್ ಶೇಖ ಇದ್ದರು.