ಪೊಲೀಸರ ವಾರ್ಷಿಕ ಆರೋಗ್ಯ ತಪಾಸಣೆ: ಬೋರಲಿಂಗಯ್ಯ

| Published : Apr 04 2024, 01:07 AM IST

ಸಾರಾಂಶ

2023-24ನೇ ಸಾಲಿನಲ್ಲಿ ನಿವೃತ್ತರಾದ 52 ಪೊಲೀಸರನ್ನು ಸನ್ಮಾನಿಸಲಾಯಿತು. ನಿವೃತ್ತ ಪೊಲೀಸ್ ನಿರೀಕ್ಷಕ ಮಧುಸೂದನ್ ಎನ್. ರಾವ್ ಗೌರವ ವಂದನೆ ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ನಿರ್ದೇಶನದಂತೆ ಎಲ್ಲ ಪೊಲೀಸರ ವಾರ್ಷಿಕ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಬೇಕು ಎಂದು ಪಶ್ಚಿಮ ವಲಯದ ಪೊಲೀಸ್ ಉಪ ಮಹಾನಿರ್ದೇಶಕ ಎಂ.ಬಿ. ಬೋರಲಿಂಗಯ್ಯ ಹೇಳಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮಿಷನರೆಟ್, ಜಿಲ್ಲಾ ಪೊಲೀಸ್ ಮತ್ತು ಮಂಗಳೂರು ಘಟಕದ ಕೆಎಸ್‌ಆರ್‌ಪಿ 7ನೇ ಪಡೆಯ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಗರದ ಡಿ.ಎ.ಆರ್. ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ರಾಜ್ಯ ಪೊಲೀಸ್ ಧ್ವಜ ಮತ್ತು ಕಲ್ಯಾಣ ದಿನಾಚರಣೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪೊಲೀಸರು ಕರ್ತವ್ಯದ ನಡುವೆ ಆರೋಗ್ಯ ರಕ್ಷಣೆ ಮರೆಯಬಾರದು. ತರಬೇತಿ ಅವಧಿಯಲ್ಲಿ ಮಾಡುವ ವ್ಯಾಯಾಮಗಳನ್ನು ವಾರದಲ್ಲಿ ನಾಲ್ಕು ದಿನಗಳಾದರೂ ಮಾಡಬೇಕು. ವರ್ಷದಲ್ಲಿ ಎರಡು ಬಾರಿಯಾದರೂ ಕುಟುಂಬದ ಜತೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಮನಸ್ಸನ್ನು ಹಗುರಗೊಳಿಸಬೇಕು ಎಂದು ಕಿವಿಮಾತು ಹೇಳಿದರು.

ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಮಾತನಾಡಿ, ಕೆಲಸದ ಒತ್ತಡದಿಂದ ಕುಟುಂಬದ ಜತೆ ಸಮಯ ಕಳೆಯಲು ಸಾಧ್ಯವಾಗದ ಸ್ಥಿತಿ ಇದೆ. ಇದಕ್ಕಾಗಿ ಇಲಾಖೆ ಕೆಲವೊಂದು ಕ್ರಮಗಳನ್ನು ಕೈಗೊಂಡಿದೆ. ಪ್ರತಿಯೊಬ್ಬರೂ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ವಹಿಸುವ ಅಗತ್ಯ ಇದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ, 2023-24ನೇ ಸಾಲಿನಲ್ಲಿ ಪೊಲೀಸ್ ಧ್ವಜ ಮಾರಾಟದಲ್ಲಿ ಸಂಗ್ರಹವಾದ ಮೊತ್ತವನ್ನು ಪೊಲೀಸರ ಮಕ್ಕಳ ವಿದ್ಯಾಭ್ಯಾಸ, ಕನ್ನಡಕ ಖರೀದಿಗೆ, ನಿವೃತ್ತರಿಗೆ ಆರೋಗ್ಯ ವೆಚ್ಚ ಮೊದಲಾದವುಗಳಿಗೆ ವಿನಿಯೋಗಿಸಲಾಗಿದೆ ಎಂದರು.

ಇದೇ ಸಂದರ್ಭ 2023-24ನೇ ಸಾಲಿನಲ್ಲಿ ನಿವೃತ್ತರಾದ 52 ಪೊಲೀಸರನ್ನು ಸನ್ಮಾನಿಸಲಾಯಿತು. ನಿವೃತ್ತ ಪೊಲೀಸ್ ನಿರೀಕ್ಷಕ ಮಧುಸೂದನ್ ಎನ್. ರಾವ್ ಗೌರವ ವಂದನೆ ಸ್ವೀಕರಿಸಿದರು. ಕೋಸ್ಟ್ ಗಾರ್ಡ್ ಡಿಐಜಿ ಪ್ರವೀಣ್ ಕುಮಾರ್ ಮಿಶ್ರಾ, ಕೆಎಸ್‌ಆರ್‌ಪಿ 7ನೇ ಪಡೆಯ ಬಿ.ಎಂ.ಪ್ರಸಾದ್ ಇದ್ದರು.