ವೈದ್ಯಾಧಿಕಾರಿ ಅರುಣಕುಮಾರ ಪರ ನಿಂತ ಸಾರ್ವಜನಿಕರು

ಕನ್ನಡಪ್ರಭ ವಾರ್ತೆ ಭಟ್ಕಳ


ಇಲ್ಲಿಯ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಮತ್ತು ಸರ್ಜನ್ ಡಾ. ಅರುಣ್ ಕುಮಾರ್ ವಿರುದ್ಧ ಅನಾಮಧೇಯ ವ್ಯಕ್ತಿಯೊಬ್ಬರು ರಾಜ್ಯ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಗೆ ದೂರು ನೀಡಿರುವ ಹಿನ್ನೆಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ರಮೇಶ ರಾವ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದೂರಿನಲ್ಲಿ ಉಲ್ಲೇಖಿಸಿರುವ ಆರೋಪಗಳ ಕುರಿತು ಆಸ್ಪತ್ರೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಮಾಹಿತಿ ಪಡೆದ ಡಿಎಂಒ, ಆಸ್ಪತ್ರೆಯ ಆಡಳಿತ ವ್ಯವಸ್ಥೆ, ವೈದ್ಯಕೀಯ ಸೇವೆ ಹಾಗೂ ದೂರು ಸಂಬಂಧಿತ ದಾಖಲೆಗಳ ಬಗ್ಗೆ ಪರಿಶೀಲನೆ ನಡೆಸಿದರು. ದೂರಿನಲ್ಲಿ ಅಂಶಗಳ ಸತ್ಯಾಸತ್ಯತೆ ಪರಿಶೀಲಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಂದ ಮಾಹಿತಿ ಕಲೆಹಾಕಿದರು. ಡಿಎಂಒ ಆಸ್ಪತ್ರೆಗೆ ಆಗಮಿಸಿರುವ ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕರು ಹಾಗೂ ರೋಗಿಗಳ ಕುಟುಂಬಸ್ಥರು ಆಸ್ಪತ್ರೆ ಆವರಣದಲ್ಲಿ ಸೇರಿದರು.

ಈ ವೇಳೆ ಹಲವರು ಡಾ. ಅರುಣ್ ಕುಮಾರ್ ಪರವಾಗಿ ಮಾತನಾಡಿ, ವೈದ್ಯರು ರೋಗಿಗಳಿಗೆ ಸ್ಪಂದಿಸುವ ಮೂಲಕ ಕರ್ತವ್ಯ ನಿರ್ವಹಿಸುತ್ತಿದ್ದು, ಆಸ್ಪತ್ರೆಯ ಸೇವೆ ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿನ ಸರ್ಕಾರಿ ವೈದ್ಯಕೀಯ ಸೇವೆಯಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಹೆಚ್ಚಿನ ಅನುಕೂಲವಾಗುತ್ತಿದೆ. ಸ್ಥಳೀಯವಾಗಿಯೇ ಚಿಕಿತ್ಸೆ ಲಭ್ಯವಾಗುತ್ತಿರುವುದರಿಂದ ಹೊರ ಜಿಲ್ಲೆಗಳ ಖಾಸಗಿ ಆಸ್ಪತ್ರೆಗಳಿಗೆ ತೆರಳುವ ಅಗತ್ಯ ಕಡಿಮೆಯಾಗಿದೆ. ಇದರಿಂದ ರೋಗಿಗಳ ಸಮಯ, ಪ್ರಯಾಣದ ವೆಚ್ಚವೂ ಉಳಿತಾಯವಾಗುತ್ತಿದೆ ಎಂದು ಸಾರ್ವಜನಿಕರು ತಿಳಿಸಿದರು.

ಅನಾಮಧೇಯ ದೂರಿನಲ್ಲಿ ಮಾಡಲಾಗಿರುವ ಆರೋಪಗಳು ನಿಜವೇ ಎಂಬುದನ್ನು ದಾಖಲೆಗಳು ಮತ್ತು ವಾಸ್ತವಾಂಶಗಳ ಆಧಾರದ ಮೇಲೆ ಸಮಗ್ರವಾಗಿ ಪರಿಶೀಲಿಸಬೇಕು ಎಂದು ಸಾರ್ವಜನಿಕರು ಅಧಿಕಾರಿಗೆ ಮನವಿ ಮಾಡಿದ್ದಲ್ಲದೇ ಯಾರ ವಿರುದ್ಧವಾದರೂ ದೂರು ಬಂದಾಗ ಆರೋಪಗಳನ್ನು ಆಧಾರವಾಗಿಸಿಕೊಂಡು ತಕ್ಷಣ ತೀರ್ಮಾನಕ್ಕೆ ಬರುವ ಬದಲು ಸಂಬಂಧಿಸಿದ ಎಲ್ಲ ದಾಖಲೆಗಳು, ಸಿಬ್ಬಂದಿಯ ಹೇಳಿಕೆ ಹಾಗೂ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಬೇಕು. ಆರೋಪಗಳಿಗೆ ಆಧಾರವಿಲ್ಲದಿದ್ದರೆ ದೂರು ಸಲ್ಲಿಸಿರುವ ವ್ಯಕ್ತಿಯ ಉದ್ದೇಶದ ಬಗ್ಗೆಯೂ ಪರಿಶೀಲನೆ ಅಗತ್ಯ ಎಂದು ಹೇಳಿದರು.

ವೈದ್ಯಾಧಿಕಾರಿ ವಿರುದ್ಧದ ದೂರಿನ ತನಿಖೆಯ ಜತೆಗೆ ತಾಲೂಕು ಆಸ್ಪತ್ರೆಯಲ್ಲಿರುವ ವೈದ್ಯರು, ಸಿಬ್ಬಂದಿ ಹಾಗೂ ಮೂಲಸೌಕರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನೂ ಇಲಾಖೆ ಪರಿಶೀಲಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು. ಡಾ. ಅರುಣ್ ಕುಮಾರ್ ವಿರುದ್ಧದ ದೂರಿನ ಹಿಂದೆ ವೈಯಕ್ತಿಕ ಕಾರಣಗಳಿವೆಯೇ ಎಂಬುದೂ ತನಿಖೆಯಿಂದ ಸ್ಪಷ್ಟವಾಗಬೇಕು. ಯಾವುದೇ ಪೂರ್ವಾಗ್ರಹವಿಲ್ಲದೆ ಪಾರದರ್ಶಕ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು. ದೂರು ವಿಚಾರಣೆಯ ಕಾರಣದಿಂದ ಆಸ್ಪತ್ರೆಯ ಆಡಳಿತ ಅಥವಾ ವೈದ್ಯಕೀಯ ಸೇವೆಗೆ ಯಾವುದೇ ಧಕ್ಕೆ ಉಂಟಾಗದಂತೆ ಇಲಾಖೆ ಕ್ರಮವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.

ಈ ಸಂದರ್ಭ ಆಟೋ ಚಾಲಕ-ಮಾಲಕರ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ, ನಾರಾಯಣ ಖಾರ್ವಿ, ಬಾಬು ನಾಯ್ಕ, ಶಂಕರ್ ನಾಯ್ಕ, ಶ್ರೀಧರ್ ನಾಯ್ಕ, ಅಪ್ಪು ನಾಯ್ಕ ಸೇರಿದಂತೆ ಹಲವು ಸಾರ್ವಜನಿಕರು ಹಾಗೂ ಆಸ್ಪತ್ರೆಯ ಒಳ ಮತ್ತು ಹೊರರೋಗಿಗಳ ಕುಟುಂಬಸ್ಥರು ಉಪಸ್ಥಿತರಿದ್ದರು.