ಮಹರ್ಷಿ ವಾಲ್ಮೀಕಿ ನಿಗಮದ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಹಣ ಸಾಗಣೆ ಜಾಲವನ್ನು ಶೋಧಿಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ಈಗ ಬಾರ್‌ಗಳು ಹಾಗೂ ಚಿನ್ನಾಭರಣ ಮಳಿಗೆಗಳ ಖಾತೆಗಳು ಸೇರಿದಂತೆ 193 ಬ್ಯಾಂಕ್‌ ಖಾತೆಗಳಿಂದ 10 ಕೋಟಿ ರು.ಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಹರ್ಷಿ ವಾಲ್ಮೀಕಿ ನಿಗಮದ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಹಣ ಸಾಗಣೆ ಜಾಲವನ್ನು ಶೋಧಿಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ಈಗ ಬಾರ್‌ಗಳು ಹಾಗೂ ಚಿನ್ನಾಭರಣ ಮಳಿಗೆಗಳ ಖಾತೆಗಳು ಸೇರಿದಂತೆ 193 ಬ್ಯಾಂಕ್‌ ಖಾತೆಗಳಿಂದ 10 ಕೋಟಿ ರು.ಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಈ ಪ್ರಕರಣ ಸಂಬಂಧ ಇದುವರೆಗೆ ಆರೋಪಿಗಳಿಂದ 14 ಕೋಟಿ ನಗದು, ಬ್ಯಾಂಕ್‌ನಲ್ಲಿ 10 ಕೋಟಿ ರು. ಠೇವಣಿ ಹಾಗೂ 4 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ವಾಹನಗಳು ಸೇರಿದಂತೆ ಒಟ್ಟು 28 ಕೋಟಿ ರು. ಅನ್ನು ಎಸ್‌ಐಟಿ ಜಪ್ತಿ ಮಾಡಿದಂತಾಗಿದೆ.

ಈಗಿನ ಹಣ ಎಲ್ಲಿಂದ ಜಪ್ತಿ?:

ವಾಲ್ಮೀಕಿ ನಿಗಮದಿಂದ ತಮ್ಮ ಸಹಕಾರಿ ಬ್ಯಾಂಕ್‌ಗೆ ಹಣವನ್ನು ವರ್ಗಾಯಿಸಿದ್ದ ಹೈದರಾಬಾದ್ ಗ್ಯಾಂಗ್‌, ಬಳಿಕ ಆ ಸಹಕಾರಿ ಬ್ಯಾಂಕ್‌ನಿಂದ ಬಾರ್‌ಗಳು, ಚಿನ್ನಾಭರಣ ಮಾರಾಟ ಮಳಿಗೆಗಳು, ಕೆಲ ಐಟಿ ಕಂಪನಿಗಳು ಹಾಗೂ ಹೋಟೆಲ್‌ಗಳ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಿಕೊಂಡು ನಗದು ಮಾಡಿಕೊಂಡಿತ್ತು. ಹೀಗೆ ಹೈದರಾಬಾದ್‌ ಗ್ಯಾಂಗ್‌ನಿಂದ ವರ್ಗಾವಣೆಯಾಗಿದ್ದ ಹಣದಲ್ಲಿ 10 ಕೋಟಿ ರು.ಗಳನ್ನು 193ಕ್ಕೂ ಹೆಚ್ಚು ವಿವಿಧ ಬ್ಯಾಂಕ್‌ ಖಾತೆಗಳಿಂದ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಎಸ್‌ಐಟಿ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಈ ಹಣ ವರ್ಗಾವಣೆ ಕುರಿತು ಹೈದರಾಬಾದ್‌ನ ಫಸ್ಟ್ ಫೈನಾನ್ಸ್‌ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸತ್ಯನಾರಾಯಣ್‌, ಮಧ್ಯವರ್ತಿಗಳಾದ ಸತ್ಯನಾರಾಯಣ್ ವರ್ಮಾ, ಚಂದ್ರಮೋಹನ್ ಹಾಗೂ ಜಗದೀಶ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದರು. ಈ ವಾಲ್ಮೀಕಿ ನಿಗಮದ ಖಾತೆಯಿಂದ ಫಸ್ಟ್‌ ಫೈನಾನ್ಸ್ ಸಹಕಾರಿ ಬ್ಯಾಂಕ್‌ನ ನಕಲಿ 18 ಖಾತೆಗಳಿಗೆ 94 ಕೋಟಿ ರು. ಹಣ ವರ್ಗಾವಣೆಯಾಗಿತ್ತು. ಈ ಆರೋಪಿಗಳ ಮಾಹಿತಿ ಆಧರಿಸಿ ಸಹಕಾರಿ ಬ್ಯಾಂಕ್ ಖಾತೆಯಿಂದ ವರ್ಗಾವಣೆಯಾಗಿದ್ದ ನೂರಾರು ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಾಯಿತು ಎಂದು ಎಸ್‌ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಂತೆಯೇ ಬಾರ್‌ಗಳು, ಹೋಟೆಲ್‌ಗಳು, ಬಾರ್ ಅಂಡ್ ರೆಸ್ಟೋರೆಂಟ್‌, ಚಿನ್ನಾಭರಣ ಮಳಿಗೆಗಳು ಹಾಗೂ ಕೆಲ ಐಟಿ ಕಂಪನಿಗಳ ಸುಮಾರು 193 ಖಾತೆಗಳಿಗೆ 5, 10 ಹಾಗೂ 20 ಲಕ್ಷ ರು.ಗಳನ್ನು ಹೈದರಾಬಾದ್ ಗ್ಯಾಂಗ್ ವರ್ಗಾಯಿಸಿತ್ತು. ಈ ವರ್ಗಾವಣೆಯಾಗಿದ್ದ ಹಣದಲ್ಲಿ 20 ಕೋಟಿ ರು.ಗೂ ಅಧಿಕ ಹಣವನ್ನು ನಗದು ರೂಪದಲ್ಲಿ ಆರೋಪಿಗಳು ಪಡೆದಿದ್ದರು. ಆದರೆ ತನಿಖೆ ಶುರುವಾದ ಬಳಿಕ ನಗದೀಕರಣಕ್ಕೆ ಆರೋಪಿಗಳಿಗೆ ಸಾಧ್ಯವಾಗಿಲ್ಲ. ಅಷ್ಟರಲ್ಲಿ ಬ್ಯಾಂಕ್‌ಗಳಿಗೆ ಮಾಹಿತಿ ನೀಡಿ 10 ಕೋಟಿ ರು. ಮುಟ್ಟುಗೋಲು ಹಾಕಿದ್ದೇವೆ. ಶೋಧ ಮುಂದುವರೆದಿದ್ದು, ಮುಂದೆ ಮತ್ತಷ್ಟು ಖಾತೆಗಳಲ್ಲಿ ಹಣ ಜಪ್ತಿಯಾಗಲಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಚೆಕ್‌ ತಲುಪಿಸಿದ್ದು ಸಾಯಿತೇಜ:ನಿಗಮದಿಂದ ಯೂನಿಯನ್‌ ಬ್ಯಾಂಕ್‌ಗೆ ಹಣ ವರ್ಗಾವಣೆ ಸಂಬಂಧ ಚೆಕ್‌ಗಳನ್ನು ಶಿವಕುಮಾರ್ ಹೆಸರಿನಲ್ಲಿ ಆರೋಪಿ ಸಾಯಿತೇಜ ತಲುಪಿಸಿದ್ದ. ಈತನ ಚಲನವನಗಳು ಬ್ಯಾಂಕ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ತನ್ನ ಗುರುತಿನ ಬಗ್ಗೆ ಸುಳ್ಳು ಮಾಹಿತಿ ನೀಡಿ ನಿಗಮದ ಅಧಿಕಾರಿಗಳ ಜತೆ ಆತ ಡೀಲ್ ನಡೆಸಿದ್ದ ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದ್ದಾರೆ.

-ಬಾಕ್ಸ್‌-

ಛತ್ತೀಸಗಢದಲ್ಲೂ 14 ಕೋಟಿ ರು. ವಂಚನೆ

ಮೂರು ವರ್ಷಗಳ ಹಿಂದೆ ವಾಲ್ಮೀಕಿ ನಿಗಮದ ಮಾದರಿಯಲ್ಲೇ ಛತ್ತೀಸ್‌ಗಢ ರಾಜ್ಯದ ಕೃಷಿ ಮಂಡಳಿಯಲ್ಲಿ 14 ಕೋಟಿ ರು ಹಣವನ್ನು ಹೈದರಾಬಾದ್‌ ಗ್ಯಾಂಗ್ ಲಪಟಾಟಿಸಿತ್ತು. ಅಲ್ಲಿ ಯಶಸ್ಸು ಕಂಡ ಬಳಿಕ ರಾಜ್ಯದ ವಾಲ್ಮೀಕಿ ನಿಗಮದಲ್ಲಿ ದೊಡ್ಡ ಮೊತ್ತವನ್ನು ಆರೋಪಿಗಳು ದೋಚಿದ್ದರು ಎಂದು ಮೂಲಗಳು ಹೇಳಿವೆ.

ಈ ಹೈದರಾಬಾದ್‌ ಗ್ಯಾಂಗ್‌ಗೆ ಸತ್ಯನಾರಾಯಣ್ ವರ್ಮಾನೇ ಕಿಂಗ್ ಪಿನ್. ಆತ ವೃತ್ತಿಪರ ಕ್ರಿಮಿನಲ್ ಆಗಿದ್ದು, ಹಲವು ವರ್ಷಗಳಿಂದ ಆರ್ಥಿಕ ವಂಚನೆ ಕೃತ್ಯಗಳಲ್ಲಿ ನಿರತನಾಗಿದ್ದಾನೆ. ಈತನ ಮೇಲೆ ಕರ್ನಾಟಕ, ಛತ್ತೀಸ್‌ಗಢ, ತೆಲಂಗಾಣ ಹಾಗೂ ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

---

ಇತರೆ 45 ಕೋಟಿ ರು.ಗೆ ನಿರ್ಬಂಧ

ಇದುವರೆಗೆ ವಾಲ್ಮೀಕಿ ನಿಗಮದಿಂದ ಅಕ್ರಮವಾಗಿ ವರ್ಗಾವಣೆಯಾಗಿದ್ದ 94 ಕೋಟಿ ರು. ಹಣದ ಪೈಕಿ ಹೈದರಾಬಾದ್‌ ಗ್ಯಾಂಗ್‌ನಿಂದ 28 ಕೋಟಿ ರು. ಜಪ್ತಿಯಾಗಿದೆ. ಇನ್ನುಳಿದ ಹಣದ ಕುರಿತು ತನಿಖೆ ಮುಂದುವರೆಸಲಾಗಿದೆ. ಇನ್ನೊಂದೆಡೆ ಇದೇ ಪ್ರಕರಣದ ಪ್ರಮುಖ ಆರೋಪಿ ಹೈದರಾಬಾದ್‌ನ ಫಸ್ಟ್‌ ಫೈನಾನ್ಸ್ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಸತ್ಯನಾರಾಯಣ್‌ ಸೇರಿದ ಬ್ಯಾಂಕ್ ಖಾತೆಗಳಿಂದ 45 ಕೋಟಿ ರು. ಹಣವನ್ನು ಪೂರ್ವಾನುಮತಿ ಇಲ್ಲದೆ ಬಳಸದಂತೆ ನಿರ್ಬಂಧಿಸಲಾಗಿದೆ. ನಿಗಮದ ಹಗರಣದ ತನಿಖೆ ಮುಗಿದ ಬಳಿಕ ಆ ನಿರ್ಬಂಧ ತೆರವುಗೊಳಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

---

ವಾಲ್ಮೀಕಿ ಹಗರಣ: ಮತ್ತೊಬ್ಬನ ಬಂಧನ

ಬೆಂಗಳೂರು: ವಾಲ್ಮೀಕಿ ನಿಗಮ ಹಗರಣ ಸಂಬಂಧ ಮತ್ತೊಬ್ಬ ಆರೋಪಿಯನ್ನು ಹೈದರಾಬಾದ್‌ನಲ್ಲಿ ಎಸ್‌ಐಟಿ ಬಂಧಿಸಿದೆ. ಹೈದರಾಬಾದ್‌ನ ಮಧ್ಯವರ್ತಿ ಶ್ರೀನಿವಾಸ್ ಬಂಧಿತನಾಗಿದ್ದು, ಹಣ ವರ್ಗಾವಣೆಯಲ್ಲಿ ಆತನ ಪ್ರಮುಖ ಪಾತ್ರವಹಿಸಿದ್ದ.

ಈಗ ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದ್ದು, ಹೈದರಾಬಾದ್‌ ಗ್ಯಾಂಗ್‌ನ ಮತ್ತೊಬ್ಬ ಪ್ರಮುಖ ಆರೋಪಿ ಕಾರ್ತಿ ಶ್ರೀನಿವಾಸ್ ಪತ್ತೆಗೆ ಎಸ್‌ಐಟಿ ಬೇಟೆ ಮುಂದುವರೆಸಿದೆ.

ಇದೇ ವೇಳೆ ನಾಲ್ಕು ದಿನಗಳ ಹಿಂದೆ ಬಂಧಿಸಲಾಗಿದ್ದ ಸಾಯಿತೇಜ ಹಾಗೂ ತೇಜ ತಮ್ಮಯ್ಯನನ್ನು ವಿಚಾರಣೆಗೆ ಎಸ್‌ಐಟಿ ವಶಕ್ಕೆ ಪಡೆದಿದೆ.