ಸಾರಾಂಶ
ಆರಂಭದ ದಿನಗಳಲ್ಲಿ ರಾಜ್ಯ ಸರ್ಕಾರ ಕಾನೂನು ವಿವಿಗೆ 56 ಎಕರೆ ಒದಗಿಸಿದ್ದು ರಾಜ್ಯ ಸರ್ಕಾರ ವಿವಿಗೆ ಇನ್ನೂ 50 ಎಕರೆ ಜಮೀನು ಒದಗಿಸಬೇಕೆಂದು ಮನವಿ ಮಾಡಲಾಗಿದೆ
ಧಾರವಾಡ: ವರ್ಷದಿಂದ ವರ್ಷಕ್ಕೆ ಕಾನೂನು ಪದವಿಗೆ ಬೇಡಿಕೆ ಹೆಚ್ಚುತ್ತಿದ್ದು ಕಾನೂನು ಕಾಲೇಜುಗಳಲ್ಲಿ ಪದವೀಧರರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಗುಣಮಟ್ಟದ ಕಾನೂನು ಶಿಕ್ಷಣ ಒದಗಿಸಲು ಕಾನೂನು ವಿಶ್ವವಿದ್ಯಾಲಯಕ್ಕೆ ಮಾನವ ಹಾಗೂ ಭೌತಿಕ ಸಂಪನ್ಮೂಲ ಒದಗಿಸಲು ಕುಲಪತಿ ಪ್ರೊ. ಸಿ. ಬಸವರಾಜು ಮನವಿ ಮಾಡಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಕ್ಷೇತ್ರದಲ್ಲಿ ತುಂಬಾ ಬದಲಾವಣೆ ಆಗುತ್ತಿದೆ. ಪ್ರತಿಯೊಂದು ವಿಷಯದಲ್ಲೂ ಕಾನೂನು ಪ್ರಮುಖ ಪಾತ್ರ ವಹಿಸುತ್ತಿದ್ದು, ಪ್ರತಿ ವರ್ಷ ಶೇ. 20ರಷ್ಟು ಪದವೀಧರರ ಸಂಖ್ಯೆ ಹೆಚ್ಚುತ್ತಿದೆ. ಜೊತೆಗೆ ಸದ್ಯ ರಾಜ್ಯದಲ್ಲಿ 145 ಕಾಲೇಜುಗಳು ಕಾನೂನು ವಿವಿ ವ್ಯಾಪ್ತಿಯಲ್ಲಿದ್ದು 45 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.
ಆರಂಭದ ದಿನಗಳಲ್ಲಿ ರಾಜ್ಯ ಸರ್ಕಾರ ಕಾನೂನು ವಿವಿಗೆ 56 ಎಕರೆ ಒದಗಿಸಿದ್ದು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಇದು ಸೀಮಿತವಾಗಿದೆ. ವಿಶ್ವವಿದ್ಯಾಲಯಕ್ಕೆ ಸುಸಜ್ಜಿತ ಕ್ರೀಡಾಂಗಣ, ಆಡಿಟೋರಿಯಂ ಇಲ್ಲ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯಗಳು, ಸಂಶೋಧನಾ ಕೇಂದ್ರಗಳು, ಗ್ರಂಥಾಲಯದಂತಹ ಇನ್ನೂ ಸಾಕಷ್ಟು ಬೇಡಿಕೆಗಳಿದ್ದು ರಾಜ್ಯ ಸರ್ಕಾರ ವಿವಿಗೆ ಇನ್ನೂ 50 ಎಕರೆ ಜಮೀನು ಒದಗಿಸಬೇಕು. ಇದಕ್ಕಾಗಿ ಸರ್ಕಾರಕ್ಕೆ ಸದ್ಯದಲ್ಲಿಯೇ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಸದ್ಯ ಪಿಡಬ್ಲ್ಯೂಡಿ ಕಟ್ಟಡದಲ್ಲಿ ವಿವಿ ಆಡಳಿತ ವ್ಯವಸ್ಥೆ ನಡೆಯುತ್ತಿದ್ದು, ಒಂದು ವರ್ಷದಲ್ಲಿ ಪ್ರತ್ಯೇಕ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದ ಅವರು, ಭೌತಿಕ ಸಂಪನ್ಮೂಲ ಮಾತ್ರವಲ್ಲದೇ ಈಗಿರುವ 55 ಬೋಧಕ ಸಿಬ್ಬಂದಿ ಜೊತೆ ಇನ್ನೂ 50 ಸಿಬ್ಬಂದಿ ಅಗತ್ಯವಿದೆ. ಜತೆಗೆ 150 ಬೋಧಕೇತರ ಸಿಬ್ಬಂದಿ ಇದ್ದು ಅವರೆಲ್ಲರೂ ಹೊರ ಗುತ್ತಿಗೆ ಮೇಲೆ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ಕಾಯಂಗೊಳಿಸಲು ವಿವಿ ಮಾಡಬೇಕಾದ ಪ್ರಯತ್ನ ಮಾಡುತ್ತಿದ್ದು, ಬರುವ ದಿನಗಳಲ್ಲಿ ಸರ್ಕಾರ ಅವರನ್ನು ಕಾಯಂಗೊಳಿಸಲಿದೆ ಎಂಬ ಭರವಸೆ ಇದೆ. ವಿವಿಗೆ ಈ ಭೌತಿಕ, ಮಾನವ ಸಂಪನ್ಮೂಲ ನೀಡಿದರೆ ದೇಶದಲ್ಲಿಯೇ ನಮ್ಮ ಕಾನೂನು ವಿವಿ ಮಾದರಿ ಆಗಲಿದೆ ಎಂದು ಹೇಳಿದರು.
ಕಾನೂನು ವಿವಿ ಬರೀ ಪದವಿ ನೀಡುವುದಲ್ಲದೇ ಸಂಶೋಧನೆಯಲ್ಲೂ ಕೆಲಸ ಮಾಡುತ್ತಿದ್ದು, ಹೊರ ದೇಶಗಳೊಂದಿಗೆ ಒಡಂಬಡಿಕೆ ಸಹ ಮಾಡಿಕೊಳ್ಳುತ್ತಿದೆ. ಜತೆಗೆ ಈ ವರ್ಷ ಮೂರು ಹೊಸ ಕಾಯ್ದೆಗಳು ಜಾರಿಯಾಗಿದ್ದು, ಈ ಕುರಿತು ಆಡಳಿತ ಮಂಡಳಿ ಸಭೆ ಕರೆದು ಚರ್ಚಿಸಿ ಮುಂದಿನ ವರ್ಷಕ್ಕೆ ಪಠ್ಯಕ್ರಮದಲ್ಲಿ ಹೊಸ ಕಾನೂನುಗಳನ್ನು ಸೇರಿಸುವ ಕಾರ್ಯ ಮಾಡಲಾಗುವುದು. ಈ ವರ್ಷದ ವಿದ್ಯಾರ್ಥಿಗಳಿಗೆ ಹೊಸ ಕಾನೂನುಗಳ ಕುರಿತು ಕಾರ್ಯಾಗಾರ ಮಾಡಲಾಗುವುದು ಎಂದು ಪ್ರೊ. ಬಸವರಾಜು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.