ಅಂಜಲಿ ಹಂತಕನ ವಿರುದ್ಧ ಮತ್ತೊಂದು ಕೇಸ್‌ ದಾಖಲು

| Published : May 19 2024, 01:51 AM IST / Updated: May 19 2024, 12:28 PM IST

Hubballi Anjali murder Case

ಸಾರಾಂಶ

ಹುಬ್ಬಳ್ಳಿ ನಗರದ ವೀರಾಪುರ ಓಣಿಯ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದ ಆರೋಪಿ ಗಿರೀಶ್‌ ಸಾವಂತ್‌ ವಿರುದ್ಧ ಇಲ್ಲಿನ ಬೆಂಡಿಗೇರಿ ಪೊಲೀಸ್‌ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

 ಹುಬ್ಬಳ್ಳಿ :  ನಗರದ ವೀರಾಪುರ ಓಣಿಯ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದ ಆರೋಪಿ ಗಿರೀಶ್‌ ಸಾವಂತ್‌ ವಿರುದ್ಧ ಇಲ್ಲಿನ ಬೆಂಡಿಗೇರಿ ಪೊಲೀಸ್‌ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

ತನ್ನ ಮಗಳಿಂದ ಆರೋಪಿ ಗಿರೀಶ್‌ ₹3.30 ಲಕ್ಷ ಮೌಲ್ಯದ ಚಿನ್ನಾಭರಣ, ₹8 ಸಾವಿರ ನಗದು ಪಡೆದುಕೊಂಡು ಮರಳಿ ನೀಡದೆ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ವೀರಾಪುರ ಓಣಿಯ ವಿಜಯಲಕ್ಷ್ಮಿ ಮಡಿವಾಳರ ಎಂಬವರು ದೂರು ಸಲ್ಲಿಸಿದ್ದಾರೆ.

ಆರು ತಿಂಗಳ ಹಿಂದೆ ನನ್ನ ಮಗಳು ಟ್ಯೂಷನ್‌ಗೆ ಹೋಗುತ್ತಿದ್ದಾಗ ಗಿರೀಶ್‌ ನನ್ನ ಮಗಳಿಗೆ ಪರಿಚಯವಾಗಿದ್ದ. ಆಕೆಯೊಂದಿಗೆ ಸಲುಗೆ ಬೆಳೆಸಿದ್ದ ಆತ ತನಗೆ ಹಣದ ಅವಶ್ಯಕತೆಯಿದೆ ಎಂದು ಹೇಳಿ ₹ 8 ಸಾವಿರ ಪಡೆದಿದ್ದ. ಅದಾದ ನಂತರ ಮತ್ತೆ ₹ 90 ಸಾವಿರ ಮೌಲ್ಯದ 15 ಗ್ರಾಂ ತೂಕದ ನೆಕ್ಲೆಸ್, ₹60 ಸಾವಿರ ಮೌಲ್ಯದ 2 ಉಂಗುರ, ₹ 60 ಸಾವಿರ ಮೌಲ್ಯದ 10 ಗ್ರಾಂ‌ ತೂಕದ ಜೀರಾಮಣಿ, ₹30 ಸಾವಿರ ಮೌಲ್ಯದ 5 ಗ್ರಾಂ ತೂಕದ ಗೋರಮಾಳ ಸರ, ₹ 30 ಸಾವಿರ ಮೌಲ್ಯದ 5 ಗ್ರಾಂ ತೂಕದ ಎರಡು ಜುಮಕಿ, ₹30 ಸಾವಿರ ಮೌಲ್ಯದ 5 ಗ್ರಾಂ ತೂಕದ ಜಪ್ತಾ, ₹ 30 ಸಾವಿರ ಮೌಲ್ಯದ 5 ಗ್ರಾಂ ತೂಕದ ಪದಕ ಸೇರಿ ₹ 3.30 ಲಕ್ಷ ಮೌಲ್ಯದ ಚಿನ್ನಾಭರಣ ಪಡೆದಿದ್ದ. ಅದನ್ನು ವಾಪಸ್ ಕೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.