ಕೆಲಗೇರಿ ಕೆರೆಯ ನೀರಿಗೆ ನಿರಂತರವಾಗಿ ಕೊಳಚೆ ನೀರು ಸೇರುತ್ತಿರುವ ಹಿನ್ನೆಲೆಯಲ್ಲಿ ಕೆರೆ ತುಂಬ ಪಾಚಿ ಬೆಳೆದಿದೆ. ಕಾವಲುಗಾರರು ಇಲ್ಲದ ಹಿನ್ನೆಲೆಯಲ್ಲಿ ದೇವರ ಹೆಸರಿನಲ್ಲಿ ಬುದ್ಧಿಗೇಡಿ ಜನರು ಫೋಟೋ, ತೆಂಗಿನಕಾಯಿ, ಲಿಂಬೆಹಣ್ಣು, ಬಟ್ಟೆ ಅಂತಹ ವಸ್ತುಗಳನ್ನು ಕೆರೆಗೆ ನಿರಾತಂಕವಾಗಿ ಎಸೆಯುತ್ತಿದ್ದಾರೆ.
ಬಸವರಾಜ ಹಿರೇಮಠ
ಧಾರವಾಡ:ಕೋಟಿ ಕೋಟಿ ವೆಚ್ಚದಲ್ಲಿ ಈಗಾಗಲೇ ಎರಡು ಬಾರಿ ಕಾಯಕಲ್ಪ ಕಂಡು, ಸರಿಯಾದ ನಿರ್ವಹಣೆ ಇಲ್ಲದೇ ಮತ್ತದೇ ಹಾಳು ರೂಪಕ್ಕೆ ಹೋಗಿರುವ ಇಲ್ಲಿಯ ಐತಿಹಾಸಿಕ ಕೆಲಗೇರಿ ಕೆರೆಗೆ ಇದೀಗ ಮತ್ತೊಮ್ಮೆ ಅಭಿವೃದ್ಧಿ ಭಾಗ್ಯ ದೊರೆಯುವ ಲಕ್ಷಣಗಳು ಗೋಚರಿಸುತ್ತಿವೆ.
ಈ ಕೆರೆಯ ನೀರಿಗೆ ನಿರಂತರವಾಗಿ ಕೊಳಚೆ ನೀರು ಸೇರುತ್ತಿರುವ ಹಿನ್ನೆಲೆಯಲ್ಲಿ ಕೆರೆ ತುಂಬ ಪಾಚಿ ಬೆಳೆದಿದೆ. ಕಾವಲುಗಾರರು ಇಲ್ಲದ ಹಿನ್ನೆಲೆಯಲ್ಲಿ ದೇವರ ಹೆಸರಿನಲ್ಲಿ ಬುದ್ಧಿಗೇಡಿ ಜನರು ಫೋಟೋ, ತೆಂಗಿನಕಾಯಿ, ಲಿಂಬೆಹಣ್ಣು, ಬಟ್ಟೆ ಅಂತಹ ವಸ್ತುಗಳನ್ನು ಕೆರೆಗೆ ನಿರಾತಂಕವಾಗಿ ಎಸೆಯುತ್ತಿದ್ದಾರೆ. ಇದ್ದ ವಿದ್ಯುತ್ ದೀಪಗಳು ಒಡೆದು ಹೋಗಿದ್ದು, ರಾತ್ರಿ ಗುಂಪು-ಗುಂಪಾಗಿ ಕೆರೆ ದಂಡೆಯ ಮೇಲೆ ಕೂತು ಮದ್ಯ ಸೇವನೆ ಅಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿರುತ್ತವೆ. ಫುಟ್‌ಪಾತ್ ಬಳಿ ಗಿಡ-ಮರಗಳು ಬೆಳೆದು ನಿಂತಿವೆ. ಒಟ್ಟಾರೆ ಕೆಲಗೇರಿ ಕೆರೆಯು ದೊಡ್ಡ ಮಟ್ಟದ ಕೊಳಚೆ ಸಂಗ್ರಹದ ಸ್ಥಳವಾಗಿದೆ. ವಿಚಿತ್ರ ಎಂದರೆ ಒಂದು ವರ್ಷದ ಹಿಂದಷ್ಟೇ ದಂಡೆಯ ಮೇಲೆ ಅಳವಡಿಸಿದ್ದ ಓಪನ್ ಜಿಮ್‌ನ ಭಾಗಗಳು ಅಲುಗಾಡುತ್ತಿವೆ.ಧಾರವಾಡ ನಗರದಲ್ಲಿರುವ 115 ವರ್ಷಗಳ ಇತಿಹಾಸ ಹೊಂದಿರುವ, ಸರ್.ಎಂ. ವಿಶ್ವೇಶ್ವರಯ್ಯನವರು ನಿರ್ಮಿಸಿದ ಈ ಕೆರೆ ಉಳಿಸಲು ಸ್ಥಳೀಯ ಪರಿಸರವಾದಿಗಳು, ಗ್ರಾಮಸ್ಥರು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ. ಕೆರೆ ಒಳ ಹಾಗೂ ಹೊರ ಆವರಣವನ್ನು ಸ್ವಯಂ ಪ್ರೇರಣೆಯಿಂದ ಆಗಾಗ ಸ್ವಚ್ಛ ಸಹ ಮಾಡಿದ್ದಾರೆ. ಕೆರೆಯಲ್ಲಿ ನಿತ್ಯ ಈಜುವ ಜನರು ಗುಂಪು ಕಟ್ಟಿಕೊಂಡು ಆದಷ್ಟು ಕೆರೆ ಸ್ವಚ್ಛತೆ ಬಗ್ಗೆ ಜನರಿಗೆ ತಿಳಿ ಹೇಳಿದರೂ ಕಸ ಸುರಿಯುವಿಕೆ ಮತ್ತು ಮಾಲಿನ್ಯವು ನಿರಂತರವಾಗಿ ಮುಂದುವರಿದಿದೆ.
ಸಮಗ್ರ ಯೋಜನೆಯ ಯೋಚನೆ:ವರ್ಷದ ಹಿಂದಷ್ಟೇ ಕೆಲಗೇರಿ ಕೆರೆಗೆ ಭೇಟಿ ನೀಡಿ ಅಲ್ಲಿಯ ದುಸ್ಥಿತಿ, ನಿರ್ಲಕ್ಷ್ಯದ ಬಗ್ಗೆ ಉಪಲೋಕಾಯುಕ್ತ ಪಿ.ಎಚ್. ಫಣೀಂದ್ರ ಅವರು ಕೆರೆ ನೀರು ಬಳಸುವ ಕೃಷಿ ವಿವಿ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ತದ ನಂತರ ನಗರಾಭಿವೃದ್ಧಿ ಇಲಾಖೆ, ಮಹಾನಗರ ಪಾಲಿಕೆ ಮತ್ತು ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಈ ಜಲಮೂಲವನ್ನು ಪುನರುಜ್ಜೀವನಗೊಳಿಸಲು ಸಮಗ್ರ ಯೋಜನೆಗೆ ಯೋಚಿಸುತ್ತಿವೆ.
ಎರಡ್ಮೂರು ದಿನಗಳ ಹಿಂದಷ್ಟೇ ಶಾಸಕರಾದ ಅರವಿಂದ ಬೆಲ್ಲದ, ಎನ್.ಎಚ್. ಕೋನರಡ್ಡಿ ಹಾಗೂ ಮೇಯರ್ ಜ್ಯೋತಿ ಪಾಟೀಲ ಕೆರೆಯ ಆವರಣಕ್ಕೆ ಭೇಟಿ ನೀಡಿ, ₹ 25 ಕೋಟಿ ವೆಚ್ಚದಲ್ಲಿ ಕೆರೆಯನ್ನು ಪುನರುಜ್ಜೀವನಗೊಳಿಸಲು ಸಭೆ ನಡೆಸಿದ್ದು, ಇನ್ನಾದರೂ ಕೆರೆಗೆ ಕಾಯಕಲ್ಪ ಸಿಗುವುದೇ ಕಾದು ನೋಡಬೇಕಿದೆ.₹ 25 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ:
ಮೊದಲ ಹಂತದಲ್ಲಿ ₹ 25 ಕೋಟಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುವ ಚಿಂತನೆ ಹೊಂದಲಾಗಿದೆ. ಈ ಬಗ್ಗೆ ವಿವರವಾದ ಯೋಜನಾ ವರದಿ (ಡಿಪಿಆರ್) ಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಶಾಸಕ ಅರವಿಂದ ಬೆಲ್ಲದ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ನಗರಾಭಿವೃದ್ಧಿ ಇಲಾಖೆಯಿಂದ ₹ 10 ಕೋಟಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಅನುಮೋದನೆ ಪಡೆಯುವ ಸಾಧ್ಯತೆಯಿದೆ. ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಯೋಜನೆ ಅಡಿ ₹ 10 ಕೋಟಿ ಸಂಗ್ರಹಿಸುವುದು ಹಾಗೂ ಉಳಿದ ₹ 5 ಕೋಟಿ ಮಹಾನಗರ ಪಾಲಿಕೆ ಮತ್ತು ಹುಡಾ ಹಂಚಿಕೊಳ್ಳಲಿವೆ ಎಂದು ತಿಳಿಸಿದರು.ಈ ವಿಚಾರವಾಗಿ ಮಾಹಿತಿ ನೀಡಿದ ಹುಡಾ ಆಯುಕ್ತ ಸಂತೋಷ ಬಿರಾದಾರ, ₹ 25 ಕೋಟಿ ವೆಚ್ಚದಲ್ಲಿ ಉಳಿದಿರುವ ವಾಕಿಂಗ್ ಟ್ರ್ಯಾಕ್ ಅಭಿವೃದ್ಧಿ, ಪಾರ್ಕಿಂಗ್ ಸೌಲಭ್ಯ, ಕೆರೆಯ ಸೌಂದರ್ಯೀಕರಣ, ವಿದ್ಯುತ್ ಅಲಂಕಾರ ಮತ್ತು ಕೆರೆಯ ಸುತ್ತಲೂ ಆಸನ ವ್ಯವಸ್ಥೆ ಮಾಡಲಾಗುವುದು. ಆವರಣದಲ್ಲಿರುವ ತೆರೆದ ಜಿಮ್‌ಗೆ ಮತ್ತಷ್ಟು ಹೊಸ ಉಪಕರಣ ಸೇರ್ಪಡೆ ಮಾಡಲಾಗುವುದು. ಇನ್ನು, ಕೆರೆಯ ಮೇಲಿನ ಪ್ರದೇಶದಿಂದ ಬರುವ ಕೊಳಚೆ ನೀರು ಒಂದು ಗಟಾರು ಮೂಲಕ ಹರಿದು ಹೋಗುವಂತೆ ಮತ್ತಷ್ಟು ವೈಜ್ಞಾನಿಕವಾಗಿ ಯೋಜನೆ ರೂಪಿಸಲಾಗುವುದು. ಜತೆಗೆ ಈಗಿರುವ ನೀರಿನ ಗುಣಮಟ್ಟ ಸುಧಾರಿಸಲು ₹ 2 ಕೋಟಿ ವೆಚ್ಚದಲ್ಲಿ ನ್ಯಾನೊ-ಬಬಲ್ ತಂತ್ರಜ್ಞಾನ ಅಳವಡಿಸಲಾಗುವುದು. ನ್ಯಾನೊ-ಬಬಲ್ ಸಂಸ್ಕರಣೆಯು ಆಮ್ಲಜನಕ ಹೆಚ್ಚಿಸಲು, ಪಾಚಿ, ವಾಸನೆ ಮತ್ತು ರೋಗಕಾರಕಗಳಂತಹ ಮಾಲಿನ್ಯಕಾರಕ ತೆಗೆದುಹಾಕಲು ಮತ್ತು ಒಟ್ಟಾರೆ ನೀರಿನ ಗುಣಮಟ್ಟ ಸುಧಾರಿಸಲು ಸಹಕಾರಿ ಆಗಲಿದೆ ಎಂದು ಬಿರಾದಾರ ತಿಳಿಸಿದರು. ಕೆರೆ ಅಭಿವೃದ್ಧಿಗೆ ಶ್ರಮ..
ಕೆಲಗೇರಿ ಕೆರೆ ಸುತ್ತಲು ಬೆಳೆದು ಆಡಿದವಳು ನಾನು. ಮೊದಲಿನ ಕೆರೆಯ ಸೌಂದರ್ಯಕ್ಕೂ ಈಗಿನ ಕೆರೆಯ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದ್ದು ಬೇಸರ ತಂದಿದೆ. ಶಾಸಕ ಅರವಿಂದ ಬೆಲ್ಲದ ಅವರ ಮಾರ್ಗದರ್ಶನದಲ್ಲಿ ಕೆರೆಯ ಸಮಗ್ರ ಅಭಿವೃದ್ಧಿಗೆ ಶ್ರಮ ವಹಿಸುವೆ.ಜ್ಯೋತಿ ಪಾಟೀಲ, ಮಹಾನಗರ ಪಾಲಿಕೆ ಮೇಯರ್