ಸಂದರ್ಭದಲ್ಲಿ ಸಿಮೆಂಟ್‌ ಪೈಪ್‌ ಬಳಕೆಯಿಂದ ಎಲ್ಲೆಂದರಲ್ಲಿ ಸೋರಿಕೆ ಉಂಟಾಗಿ ನೀರಾವರಿ ಯೋಜನೆ ನನೆಗುದಿಗೆ ಬಿತ್ತು.

ಹೂವಿನಹಡಗಲಿ: ರೈತರ ಖುಷ್ಕಿ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ರೂಪಿತಗೊಂಡ ಕುಡುಗೋಲು ಮಟ್ಟಿ ಏತ ನೀರಾವರಿ ಯೋಜನೆಗೆ ಆರಂಭದಿಂದ ಈವರೆಗೆ ₹16.80 ಕೋಟಿ ಸುರಿದರೂ ಕಾಲುವೆಗಳಿಗೆ ಹನಿ ನೀರು ಹರಿಯುತ್ತಿಲ್ಲ.

ತುಂಗಭದ್ರಾ ನದಿ ತಟದ ಅಂಗೂರು ಬಳಿ 2006-07ರಲ್ಲಿ ಕುಡುಗೋಲು ಮಟ್ಟಿ ಏತ ನೀರಾವರಿ ಯೋಜನೆ ನಿರ್ಮಾಣಕ್ಕೆ ಕ್ರಿಯಾ ಯೋಜನೆ ಸಿದ್ಧವಾಗಿ ₹7.80 ಕೋಟಿಗೆ ಟೆಂಡರ್‌ ಕರೆದು ಅಂದು ಕೆಡಿಎಚ್‌ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಆ ಸಂದರ್ಭದಲ್ಲಿ ಸಿಮೆಂಟ್‌ ಪೈಪ್‌ ಬಳಕೆಯಿಂದ ಎಲ್ಲೆಂದರಲ್ಲಿ ಸೋರಿಕೆ ಉಂಟಾಗಿ ನೀರಾವರಿ ಯೋಜನೆ ನನೆಗುದಿಗೆ ಬಿತ್ತು.

ಈ ಯೋಜನೆಗಾಗಿ 2017ರಲ್ಲಿ ಮತ್ತೆ ₹1 ಕೋಟಿ ಅನುದಾನ ಮಂಜೂರಾಗಿ ಟ್ಯಾಂಕ್‌ ನಿರ್ಮಿಸಿ ಕೆಲವೆಡೆ ಪಿಎಸ್‌ಸಿ ಪೈಪ್‌ ಅಳವಡಿಸಲಾಗಿತ್ತು. ಅದು ಕೂಡ ಕಾಮಗಾರಿ ಅರೆಬರೆಯಾಗಿ ಪೈಪ್‌ಲೈನ್‌ ಕಿತ್ತು ಹೋಗಿತ್ತು. ಈವರೆಗೂ ಯೋಜನೆಗಾಗಿ ₹16.80 ಕೋಟಿ ವೆಚ್ಚ ಮಾಡಿದ್ದರೂ ರೈತರ ಜಮೀನುಗಳಿಗೆ ನೀರುಣಿಸಲು ಆಗಿಲ್ಲ.

ಯೋಜನೆ ವ್ಯಾಪ್ತಿಯಲ್ಲಿ ಅಂಗೂರು, ಬೀರಬ್ಬಿ, ಕೋಟಿಹಾಳು ಗ್ರಾಮಗಳ 1012 ಹೆಕ್ಟೇರ್‌ ಪ್ರದೇಶಕ್ಕೆ, 1ನೇ ಹಂತದಲ್ಲಿ 1.23 ಕಿ.ಮೀ ಉದ್ದ, 2ನೇ ಹಂತದಲ್ಲಿ 3.48 ಕಿ.ಮೀ ಉದ್ದ ಪೈಪ್‌ಲೈನ್‌ ಮೂಲಕ ನೀರುಣಿಸಬೇಕಿತ್ತು. ಈ ಯೋಜನೆಗೆ ಈಗ ಮತ್ತೆ ₹10.70 ಕೋಟಿ ಅಂದಾಜು ಪತ್ರಿಕೆ ಸಿದ್ಧವಾಗಿದೆ. ತಾಂತ್ರಿಕ ಅನುಮೋದನೆಗಾಗಿ ಸಲ್ಲಿಕೆಯಾಗಿದೆ. ನೀರಾವರಿ ತಜ್ಞ ರಂಗರಾಜನ್‌ ಈ ಯೋಜನೆ ಕುರಿತು ಕೆಲ ಮಾರ್ಪಾಡುಗಳನ್ನು ಮಾಡಲು ತಿಳಿಸಿದ್ದಾರೆ. ಆ ಪ್ರಕಾರವಾಗಿ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಈ ಬಾರಿಯಾದರೂ ಯೋಜನೆಗೆ ಅಗತ್ಯ ಅನುದಾನ ನೀಡಿ, ಸಮರ್ಪಕ ರೀತಿಯಲ್ಲಿ ಗುಣಮಟ್ಟದ ಕಾಮಗಾರಿ ಮಾಡಿ ರೈತರ ಜಮೀನುಗಳಿಗೆ ನೀರುಣಿಸಬೇಕೆಂಬ ಆಶಾಭಾವನೆ ರೈತರಲ್ಲಿ ಮೂಡಿದೆ.

ಅಂಗೂರು ಬಳಿಯ ಕುಡುಗೋಲು ಮಟ್ಟಿ ಏತ ನೀರಾವರಿ ಯೋಜನೆಯ ಎಂಎಸ್‌ ಪೈಪ್‌ಲೈನ್‌ ಕಾಮಗಾರಿಗೆ ₹10.70 ಕೋಟಿ ಅಂದಾಜು ಪತ್ರಿಕೆ ಸಿದ್ಧವಾಗಿ ತಾಂತ್ರಿಕ ಅನುಮೋದನೆಗೆ ಸಲ್ಲಿಸಲಾಗಿದೆ. ಚಂದ್ರಕಾಂತ್‌, ಸಹಾಯಕ ಎಂಜಿನಿಯರ್‌, ಸಣ್ಣ ನೀರಾವರಿ- ಅಂತರ್ಜಲ ಇಲಾಖೆ.

ಕುಡುಕೋಲು ಮಟ್ಟಿ ಏತ ನೀರಾವರಿ ನನೆಗುದಿಗೆ ಬಿದ್ದು ಹತ್ತಾರು ವರ್ಷ ಕಳೆದಿದೆ. ಈವರೆಗೂ ರೈತರ ಜಮೀನುಗಳಿಗೆ ಹನಿ ನೀರು ಹರಿಯುತ್ತಿಲ್ಲ. ಸರ್ಕಾರ ಕೂಡಲೇ ಅಗತ್ಯ ಅನುದಾನ ನೀಡಿ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಅಂಗೂರು ಗ್ರಾಮಸ್ಥರು.