ಸಾರಾಂಶ
ಅಂಶಿ ಪ್ರಸನ್ನಕುಮಾರ್
ಮೈಸೂರು : ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಂದೆ ಸಿದ್ದರಾಮಯ್ಯ ಅವರಿಗೆ ವರುಣ ಕ್ಷೇತ್ರ ತ್ಯಾಗ ಮಾಡಿದ್ದ ಪುತ್ರ ಡಾ.ಎಸ್. ಯತೀಂದ್ರ ಅವರಿಗೆ ಮೇಲ್ಮನೆ ಪ್ರವೇಶಕ್ಕೆ ರಹದಾರಿ ಸಿಕ್ಕಿದೆ.
ಕಾಂಗ್ರೆಸ್ ಹೈಕಮಾಂಡ್ ಪ್ರಕಟಿಸಿರುವ ಪಕ್ಷಗಳ ಅಭ್ಯರ್ಥಿಗಳ ಯಾದಿಯಲ್ಲಿ ಯತೀಂದ್ರ ಅವರ ಹೆಸರು ಇದೆ.
ಸಿದ್ದರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್ 2008 ರಿಂದಲೂ ವರುಣ ಕ್ಷೇತ್ರದಲ್ಲಿ ಅಪ್ಪನ ಪ್ರಚಾರ ಮಾಡುತ್ತಾ, ಭವಿಷ್ಯದ ಉತ್ತರಾಧಿಕಾರಿಯಾಗಲು ಬಯಸಿದ್ದರು.ಸಿದ್ದರಾಮಯ್ಯ ಅವರು ಆಸೆ ಕೂಡ ಅದೇ ಆಗಿತ್ತು. ಆದರೆ ರಾಕೇಶ್ ಏಳು ವರ್ಷಗಳ ಹಿಂದೆ ವಿದೇಶಕ್ಕೆ ಹೋದಾಗ ನಿಧನರಾದರು. ಇದಾದ ನಂತರವೇ ಯತೀಂದ್ರ ರಾಜಕೀಯ ಪ್ರವೇಶ ಮಾಡಿದ್ದು.
ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದಿದ್ದ ಯತೀಂದ್ರ ಎಂಬಿಬಿಎಸ್ ಓದಿ ಡಾಕ್ಟರ್ ಆಗಿದ್ದರು. ರಾಕೇಶ್ ನಿಧನಾನಂತರ ತಾಯಿ ಪಾರ್ವತಿ ಅವರ ಒತ್ತಾಸೆಯ ಮೇರೆಗೆ ಯತೀಂದ್ರ ರಾಜಕಾರಣ ಪ್ರವೇಶ ಮಾಡಿದರು.
ಇದರಿಂದಾಗಿಯೇ ಸಿದ್ದರಾಮಯ್ಯ ಅವರು 2018 ರಲ್ಲಿ ವರುಣದಿಂದ ಯತೀಂದ್ರ ಅವರಿಗೆ ಅವಕಾಶ ನೀಡಿ, ತಾವು ಹಳೆಯ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಆ ಚುನಾವಣೆಯಲ್ಲಿ ಯತೀಂದ್ರ ಗೆದ್ದರೆ ಸಿದ್ದರಾಮಯ್ಯ ಅವರು ಜೆಡಿಎಸ್‌ನ ಜಿ.ಟಿ. ದೇವೇಗೌಡರ ಎದುರು 36 ಸಾವಿರ ಮತಗಳ ಅಂತರದಿಂದ ಸೋತರು. ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ಪದಿಂದಲೂ ಕಣಕ್ಕಿಳಿದಿದ್ದ ಸಿದ್ದರಾಮಯ್ಯ ಅಲ್ಲಿ ಅಲ್ಪ ಮತಗಳ ಅಂತರದಿಂದ ಗೆದ್ದು, ರಾಜಕೀಯವಾಗಿ ಬಚಾವ್ ಆಗಿದ್ದರು.
2024ರ ವಿಧಾನಸಭಾ ಚುನಾವಣೆ ಬಂದಾಗ ವರುಣದಲ್ಲಿ ಯತೀಂದ್ರಗೆ ತೊಂದರೆ ಮಾಡುವುದು ಬೇಡ ಎಂದು ಸಿದ್ದರಾಮಯ್ಯ ಕೋಲಾರದಿಂದ ಕಣಕ್ಕಿಳಿಯಲು ಬಯಸಿದ್ದರು. ಆದರೆ ಹೈಕಮಾಂಡ್ ಅದು ಸುರಕ್ಷಿತವಲ್ಲ, ವರುಣದಿಂದಲೇ ಸ್ಪರ್ಧಿಸಿ ಎಂದು ಸೂಚಿಸಿತ್ತು. ಹೀಗಾಗಿ ಹಾಲಿ ಶಾಸಕರಾಗಿದ್ದ ಯತೀಂದ್ರ ಅವರು ತಂದೆ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ತ್ಯಾಗ ಮಾಡಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಅವರು ಎರಡನೇ ಬಾರಿ ಸಿಎಂ ಆದರು. ಯತೀಂದ್ರ ಅವರನ್ನು ಆಶ್ರಯ ಸಮಿತಿ ಅಧ್ಯಕ್ಷರಾಗಿ ನೇಮಿಸಲಾಗಿತ್ತು.
ಯತೀಂದ್ರ ಅವರನ್ನು ಮೈಸೂರಿನಿಂದ ಲೋಕಸಭೆಗೂ ಕಾಂಗ್ರೆಸ್ ಅಭ್ಯರ್ಥಿ ಮಾಡುವ ಮಾತುಗಳು ಕೇಳಿ ಬಂದಿದ್ದವು. ಆದರೆ ಬಿಜೆಪಿ- ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡ ನಂತರ ಸೋತರೆ ಕಷ್ಟ ಎಂಬ ಕಾರಣದಿಂದ ಸಿದ್ದರಾಮಯ್ಯ ಅವರೇ ಸ್ಪರ್ಧೆ ಬೇಡಿ ಎಂದು ಸೂಚಿಸಿದ್ದರು.
ಇದೀಗ ಯತೀಂದ್ರ ಅವರಿಗೆ ಮೇಲ್ಮನೆಗೆ ಆಯ್ಕೆಯಾಗುವ ಅವಕಾಶ ದೊರೆತಿದೆ. ಒಂದು ವೇಳೆ ಸಿದ್ದರಾಮಯ್ಯ ಅವರು ಎರಡೂವರೆ ವರ್ಷಗಳ ನಂತರ ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ. ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕಾದ ಪರಿಸ್ಥಿತಿ ಬಂದಲ್ಲಿ ಆಗ ಯತೀಂದ್ರ ಅವರನ್ನು ಮಂತ್ರಿಯಾಗಿ ಮಾಡುವ ಉದ್ದೇಶದಿಂದ ಈ ಕ್ರಮ ಎನ್ನಲಾಗಿದೆ.
ಯತೀಂದ್ರ ವಿಧಾನ ಪರಿಷತ್‌ಗೆ ಆಯ್ಕೆಯಾಗುವುದರೊಂದಿಗೆ ಜಿಲ್ಲೆಗೆ ಮತ್ತೊಂದು ಸ್ಥಾನ ದೊರೆತಂತೆ ಆಗಿದೆ. ಹಾಲಿ ಮೇಲ್ಮನೆಯಲ್ಲಿರುವ ಜಿಲ್ಲೆಯ ಪ್ರತಿನಿಧಿಗಳು
ಡಾ.ಡಿ.ತಿಮ್ಮಯ್ಯ(ಕಾಂಗ್ರೆಸ್)- ಸ್ಥಳೀಯ ಸಂಸ್ಥೆಗಳ ಕ್ಷೇತ್ರ
ಸಿ.ಎನ್. ಮಂಜೇಗೌಡ(ಜೆಡಿಎಸ್)- ಸ್ಥಳೀಯ ಸಂಸ್ಥೆಗಳ ಕ್ಷೇತ್ರ
ಮಧು ಜಿ. ಮಾದೇಗೌಡ([ಕಾಂಗ್ರೆಸ್)- ದಕ್ಷಿಣ ಪದವೀಧರ ಕ್ಷೇತ್ರ
ಎಚ್. ವಿಶ್ವನಾಥ್ (ಬಿಜೆಪಿ)- ಸಾಹಿತ್ಯ ಕೋಟಾದಲ್ಲಿ ನಾಮನಿರ್ದೇಶನ
ದಕ್ಷಿಣ ಶಿಕ್ಷಕರ ಕ್ಷೇತ್ರ- ಚುನಾವಣೆ ಫಲಿತಾಂಶ ಬರಬೇಕಿದೆ (ಮರಿತಿಬ್ಬೇಗೌಡ ಪುನಾರಾಯ್ಕೆಯಾದರೆ ಕಾಂಗ್ರೆಸ್‌ಗೆ ಕೆ. ವಿವೇಕಾನಂದ ಗೆದ್ದರೆ ಜೆಡಿಎಸ್‌ಗೆ ಒಂದು ಸ್ಥಾನ).
ಹಿಂದೆ ಆಯ್ಕೆಯಾದವರು
ಕಾಂಗ್ರೆಸ್ ಸರ್ಕಾರ ಇದ್ದಾಗ ಜವರಾಯಿಶೆಟ್ಟಿ, ರಾಣಿ ಸತೀಶ್, ಮುಕ್ರಾರುನ್ನೀಸಾ ಬೇಗಂ, ಡಿ. ಮಾದೇಗೌಡ, ರಿಜ್ವಾನ್ ಅರ್ಷದ್, ಬಿಜೆಪಿ ಸರ್ಕಾರ ಇದ್ದಾಗ ತೋಂಟದಾರ್ಯ, ಸಿದ್ದರಾಜು, ಸಿ.ಎಚ್. ವಿಜಯಶಂಕರ್, ಜೆಡಿಎಸ್ ಸರ್ಕಾರ ಇದ್ದಾಗ ಎಸ್. ಚಿಕ್ಕಮಾದು ಮೊದಲಾದವರು ಆಯ್ಕೆಯಾಗಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))