ಹುಬ್ಬಳ್ಳಿ: ಜಿಮ್ ಟ್ರೈನರ್‌ನಿಂದ ಲೈಂಗಿಕ ದೌರ್ಜನ್ಯ ಪ್ರಕರಣ ಎಲ್ಲೆಡೆ ವ್ಯಾಪಕ ಚರ್ಚೆಯಲ್ಲಿರುವ ವೇಳೆಯೇ ಇಂತಹದ್ದೇ ಮತ್ತೊಂದು ಪ್ರಕರಣ ಇಲ್ಲಿನ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಅನ್ಯಕೋಮಿನ ಯುವಕ ಹಿಂದೂ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಶನಿವಾರ ತಡರಾತ್ರಿ ಪ್ರಕರಣ ದಾಖಲಾಗಿದ್ದು, ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಮೂಲತಃ ಧಾರವಾಡದ ಹಾವೇರಿಪೇಟೆಯ ಕುಂಬಾರಗಲ್ಲಿ ನಿವಾಸಿ, ಪ್ರಸ್ತುತ ನಗರದ ಕಮರಿಪೇಟೆ ಗವಿಓಣಿ ಮಸೀದಿ ಹತ್ತಿರದ ನಿವಾಸಿ ಮುಫೀಜ್ ಮಿಯಾನವರ (23) ಎಂಬವನ ಮೇಲೆ ಯುವತಿ ದೂರು ನೀಡಿದ್ದಾಳೆ.
ಸಂತ್ರಸ್ತೆಗೆ ಮುಫೀಜ್ ಕಳೆದ 5 ವರ್ಷದ ಹಿಂದೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಪರಿಚಯವಾಗಿದ್ದಾನೆ. ನಂತರ ಅವಳೊಂದಿಗೆ ಸಲುಗೆ ಬೆಳೆಸಿ ಸುತ್ತಾಡಿದ್ದಾನೆ. ಒಂದು ದಿನ ಅವಳನ್ನು ಗದಗ ರಸ್ತೆ ಮೇಲ್ಸೇತುವೆ ಹತ್ತಿರ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿ, ಫೋಟೋ ಹಾಗೂ ವೀಡಿಯೋ ಮಾಡಿಕೊಂಡಿದ್ದಾನೆ. ಅವುಗಳನ್ನು ಇಟ್ಟುಕೊಂಡು 2025ರ ನವೆಂಬರ್‌ನಲ್ಲಿ ಸಂತ್ರಸ್ತೆಯ ಮನೆಗೆ ಹೊಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವಿಚಾರ ಯಾರಿಗಾದರೂ ಹೇಳಿದರೆ ನಿಮ್ಮ ಪಾಲಕರನ್ನು ಜೀವ ಸಹಿತ ಬಿಡಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಆರೋಪಿ ಬಂಧನ
ಈ ಕುರಿತು ಮಾತನಾಡಿದ ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಶನಿವಾರ ತಡರಾತ್ರಿ ಇಲ್ಲಿನ ಕೇಶ್ವಾಪುರ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಕುರಿತು ಯುವತಿಯೋರ್ವಳು ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಈಗಾಗಲೇ ಬಂಧಿಸಿ ನ್ಯಾಯಾಂಗ ತನಿಖೆಗೆ ಒಳಪಡಿಸಲಾಗಿದೆ. ಜತೆಗೆ ಸಂತ್ರಸ್ತೆ ಹೇಳಿರುವ ಆರೋಪದ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದರು. ಲೈಂಗಿಕ ಕಿರುಕುಳ ಪ್ರಕರಣಕ್ಕೆ ಟ್ವಿಸ್ಟ್: ಸಂಜೆ ವೇಳೆಗೆ ಯುವತಿ ಉಲ್ಟಾ
ಹುಬ್ಬಳ್ಳಿ:ಬೆಳಗ್ಗೆಯಷ್ಟೇ ಅನ್ಯ ಕೋಮಿನ ಯುವಕ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದ ಯುವತಿ ಸಂಜೆ ಉಲ್ಟಾ ಹೊಡೆದಿದ್ದಾಳೆ. ಯುವಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ನನಗೆ ಒತ್ತಾಯಪೂರ್ವಕವಾಗಿ ಹೇಳಿಕೆ ನೀಡುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ. ಹಾಗಾಗಿ, ಈ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಂತಾಗಿದೆ.ಪ್ರಕರಣ ದಾಖಲಿಸಿದ ಸಂದರ್ಭದಲ್ಲಿ ಸ್ವತಃ ಸಂತ್ರಸ್ತೆಯು ಮಾತನಾಡಿದ ವೀಡಿಯೋ ಹೊರಬಿದ್ದಿತ್ತು. ಅದರಲ್ಲಿ ಸಂತ್ರಸ್ತೆಯು ಮಾತನಾಡಿ, ಕಾಲೇಜಿನಲ್ಲಿ ಹುಡುಗಿಯೊಬ್ಬಳು ಈತನನ್ನು ಪರಿಚಯಸಿದ್ದಳು. ಇದಾದ ಬಳಿಕ ಸ್ನೇಹಿತರಾಗಿದ್ದ ನಾವು 2-3 ತಿಂಗಳ ನಂತರ ಪ್ರೀತಿಸಲು ಆರಂಭಿಸಿದೆವು. ಈ ವಿಚಾರ ತಂದೆ-ತಾಯಿಗೆ ತಿಳಿದ ನಂತರ ಅನ್ಯ ಕೋಮಿನ ಸಂಸ್ಕೃತಿ, ಆಚಾರ-ವಿಚಾರದ ಬಗ್ಗೆ ವಿವರಿಸಿದರು. ಆತ ಅನ್ಯಕೋಮಿನ ಯುವಕ ಎಂಬುದು ಗೊತ್ತಿರಲಿಲ್ಲ. ಹೀಗಾಗಿ, ಬ್ರೇಕ್ ಮಾಡಿಕೊಂಡೆ. ಮದುವೆ ರೆಜಿಸ್ಟ್ರೇಷನ್ ರದ್ದುಗೊಳಿಸಲು ಅಫೀಲು ಮಾಡಿದ್ದೇನೆ. ಆದರೆ, ಆತನ ಬಳಿ ಇರುವ ಮೊಬೈಲ್, ಪೆನ್‌ಡ್ರೈವ್, ಲ್ಯಾಪ್‌ಟಾಪ್‌ನಲ್ಲಿ ಆತ ಜತೆಗಿರುವ ಫೋಟೋ, ವೀಡಿಯೋ ಇವೆ. ಹಾಗಾಗಿ, ಪೊಲೀಸರು ಅವುಗಳನ್ನು ನನಗೆ ಕೊಡಿಸಬೇಕು ಎಂದು ಒತ್ತಾಯಿಸಿದ್ದಳು.
ಪ್ರಕರಣಕ್ಕೆ ಟ್ವಿಸ್ಟ್?ಏತನ್ಮಧ್ಯೆ, ಸ್ವತಃ ಯುವತಿಯೇ ಮಾತನಾಡಿರುವ ಮತ್ತೊಂದಿಷ್ಟು ವಿಡಿಯೋಗಳು ಭಾನುವಾರ ಸಂಜೆ ಬಹಿರಂಗೊಂಡಿವೆ. ಅಲ್ಲದೇ, ಯುವಕ ಮತ್ತು ಯುವತಿ ಆತ್ಮಹತ್ಯೆಗೆ ಯತ್ನ ಮಾಡಿರುವ ಫೋಟೋ ಹೊರಬಿದ್ದಿವೆ. ಸಂತ್ರಸ್ತೆಯು ಮತ್ತೊಂದು ವೀಡಿಯೋದಲ್ಲಿ ಹೇಳಿರುವಂತೆ, ಮುಫೀಜ್ ವಿರುದ್ಧ ಪ್ರಕಣ ದಾಖಲಿಸಲು ನನ್ನ ಒಪ್ಪಿಗೆ ಇರಲಿಲ್ಲ. ಕೆಲವರು ಬಲವಂತವಾಗಿ ಪ್ರಕರಣ ದಾಖಲಿಸುವಂತೆ ಮಾಡಿದ್ದಾರೆ. ಮುಫೀಜ್ ಜತೆಗೆ ಸ್ವಯಂ ಪ್ರೇರಣೆಯಿಂದ ಮದುವೆಗೆ ಮುಂದಾಗಿದ್ದೆ. ಆಗ ಆತನ ಕುಟುಂಬಸ್ಥರು ನಮ್ಮ ಮದುವೆಗೆ ನಿರಾಕರಿಸಿದ್ದರು. ನಾವು ಮದುವೆ ಮಾಡದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದೆವು. ಈ ಹಿನ್ನೆಲೆಯಲ್ಲಿ ರಜಿಸ್ಟರ್ಡ್ ಮದುವೆಯಾಗಲು ಅವರು ಒಪ್ಪಿಗೆ ಸೂಚಿಸಿದ್ದರು. ಹಾಗೆಯೇ ನಾನು ಕೂಡ ರಜಿಸ್ಟ್ರಾರ್ ಆಫೀಸ್‌ನಲ್ಲಿ ಮದುವೆಗೆ ಒಪ್ಪಿಗೆ ಸೂಚಿಸಿ ಸಹಿ ಕೂಡ ಮಾಡಿದ್ದೇನೆ. ಇದರಲ್ಲಿ ಅವರ ಕುಟುಂಬದ ಪಾತ್ರವೇನೂ ಇಲ್ಲ ಎಂದು ಹೇಳಿಕೊಂಡಿದ್ದಾಳೆ. ಅಲ್ಲದೇ, ಕೆಲ ಹಿಂದೂ ಪರ ಸಂಘಟನೆ ಮುಖಂಡರ ಹೆಸರು ಪ್ರಸ್ತಾಪಿಸಿ ಅವರು ನನ್ನನ್ನು ಕೌನ್ಸ್‌ಲಿಂಗ್ ನಡೆಸಿ ಡೈವರ್ಟ್ ಮಾಡಿದ್ದಾರೆ ಎಂದು ಸ್ವತಃ ಸಂತ್ರಸ್ತೆಯೇ ಹೇಳಿರುವ ವಿಡಿಯೋಗಳು ಸಹ ವೈರಲ್ ಆಗಿವೆ. ಹೀಗಾಗಿ, ಇಡೀ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ.