ಅಂತರಘಟ್ಟಮ್ಮನ ಹಬ್ಬಕ್ಕೆ ಕುರಿ ಖರೀದಿಗೆ ಮುಗಿ ಬಿದ್ದ ಮಂದಿ

| Published : Feb 20 2024, 01:48 AM IST

ಅಂತರಘಟ್ಟಮ್ಮನ ಹಬ್ಬಕ್ಕೆ ಕುರಿ ಖರೀದಿಗೆ ಮುಗಿ ಬಿದ್ದ ಮಂದಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು ಜಿಲ್ಲೆ ಬಯಲು ಪ್ರದೇಶದ ಬಹುದೊಡ್ಡ ಹಬ್ಬ ಎಂದು ಕರೆಯುವ ಕಡೂರು ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಅಂತರಘಟ್ಟಮ್ಮ ನವರ (ಅಮ್ಮನ ಹಬ್ಬ) ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಗುಂಗಿನಲ್ಲಿರುವ ಜನತೆ ಭರ್ಜರಿ ಸಿದ್ಧತೆ ಆರಂಭಿಸಿದ್ದಾರೆ.

- ಇಂದು ಬಾನಸೇವೆ । ಬಾಗಲಕೋಟೆ -ಕೊಪ್ಪಳ ಮತ್ತಿತರ ಕಡೆಗಳಿಂದ ಸಾವಿರಾರು ಕುರಿಗಳ ಆಗಮನ

--- - ಜನ ಸಾಮಾನ್ಯರಿಗೆ ಕುರಿ ಖರೀದಿ ಬಿಸಿ ತುಪ್ಪ

- ಒಂದೇ ದಿನದಲ್ಲಿ ಕೋಟ್ಯಂತರ ರುಪಾಯಿ ವಹಿವಾಟು

- ಕಡೂರು ಕೃಷ್ಣಮೂರ್ತಿ ಕನ್ನಡಪ್ರಭ ವಾರ್ತೆ, ಕಡೂರು

ಚಿಕ್ಕಮಗಳೂರು ಜಿಲ್ಲೆ ಬಯಲು ಪ್ರದೇಶದ ಬಹುದೊಡ್ಡ ಹಬ್ಬ ಎಂದು ಕರೆಯುವ ಕಡೂರು ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಅಂತರಘಟ್ಟಮ್ಮ ನವರ (ಅಮ್ಮನ ಹಬ್ಬ) ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಗುಂಗಿನಲ್ಲಿರುವ ಜನತೆ ಭರ್ಜರಿ ಸಿದ್ಧತೆ ಆರಂಭಿಸಿದ್ದಾರೆ.

ಚಿಕ್ಕಮಗಳೂರು, ಚಿತ್ರದುರ್ಗದ ಬಹುತೇಕ ಹಾಗೂ ಹಾಸನ ಮತ್ತು ಶಿವಮೊಗ್ಗ ಜಿಲ್ಲೆಯ ಕೆಲ ಗ್ರಾಮಗಳು ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಮಂಗಳವಾರ ಶಕ್ತಿದೇವತೆ ಶ್ರೀ ಅಂತರಘಟ್ಟಮ್ಮನವರ ಜಾತ್ರೆಗೆ ಬಾನ ಸೇವೆ ಮೂಲಕ ಅಮ್ಮನ ಹಬ್ಬಕ್ಕೆ ಅಧಿಕೃತ ಚಾಲನೆ ಸಿಗಲಿದೆ.

ಕಡೂರು ತಾಲೂಕಿನ ಅಂತರಘಟ್ಟೆಯಲ್ಲಿ ಬರುವ ಶುಕ್ರವಾರ ನಡೆಯಲಿರುವ ಶ್ರೀ ಅಂತರಘಟ್ಟಮ್ಮ ನವರ ರಥೋತ್ಸವದ ಹಿನ್ನೆಲೆಯಲ್ಲಿ ಬಾನ ಸೇವೆ ಅತಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಇಲ್ಲಿನ ವಿಶೇಷತೆ ಎಂದರೆ ಶ್ರೀಅಮ್ಮನವರ ಬಾನ ಸೇವೆಗೆ ಸಣ್ಣವರಿಂದ ಹಿಡಿದು ದೊಡ್ಡವರು ಎನ್ನದೆ ಎಲ್ಲರೂ ನೆಂಟರು ಇಷ್ಟರು ಸೇರಿ ಒಟ್ಟಿಗೆ ಊಟ ಮಾಡುವುದು. ಇದಕ್ಕಾಗಿ ಸಾವಿರಾರು ಕುರಿಗಳ ಖರೀದಿ ಭರ್ಜರಿಯಾಗಿ ನಡೆಯಿತು. ಸೋಮವಾರ ಕಡೂರು ಎಪಿಎಂಸಿ ಪ್ರಾಂಗಣದಲ್ಲಿ ನಡೆವ ಕುರಿ ಸಂತೆಯಲ್ಲಿ ಕುರಿ ಖರೀದಿಗೆ ಜನ ಮುಗೆಬಿದ್ದಿದ್ದರು.

ತಾಲೂಕಿನ ಗರ್ಜೆ, ಬಿಳುವಾಲ, ಬಾಸೂರು ಕಡೆಯ ಕುರಿಗಳು ಸೇರಿದಂತೆ ಕೊಪ್ಪಳ, ಬಾಗಲಕೋಟೆಯಿಂದಲೂ ವ್ಯಾಪಾರಸ್ಥರು ಕಡೂರಿನ ಕುರಿ ಸಂತೆಗೆ ಬಂದು ಮಾರಾಟ ಮಾಡಿದರು. 14 ವರ್ಷದ ಹಿಂದೆ ಶಾಸಕರಾಗಿದ್ದ ದಿ. ಕೆ. ಎಂ.ಕೃಷ್ಣಮೂರ್ತಿಯವರು ಕಡೂರು ಎಪಿಎಂಸಿ ಪ್ರಾಂಗಣದಲ್ಲಿ ಕುರಿ ಸಂತೆ ಮತ್ತು ಜಾನುವಾರು ಸಂತೆಗೆ ಚಾಲನೆ ನೀಡಿದ್ದರು. ಅಂದಿನಿಂದ ಕಡೂರಿನಲ್ಲಿ ನಿರಂತರ ಕುರಿ ಸಂತೆ ನಡೆಯುತ್ತಿದೆ.

ಬಯಲು ಪ್ರದೇಶದವರ ರಾಷ್ಟ್ರೀಯ ಹಬ್ಬ ಎಂದು ತಮಾಷೆಯಾಗಿ ಕರೆಯುವ ಅಮ್ಮನ ಹಬ್ಬ ಅದ್ಧೂರಿ ತಯಾರಿ ಜೊತೆಗೆ, ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಸ್ವಲ್ಪ ಮಟ್ಟಿಗೆ ತತ್ತರಿಸಿದಂತೆ ಕಂಡುಬಂತು. ಒಂದು ಕೆ.ಜಿ.ಮಟನ್ 600-650 ರು.ಗೆ ಏರಿಕೆ ಆಗಿದ್ದು ಅಂಗಡಿಗಳಲ್ಲಿ 1ಕೆ.ಜಿ. ಸೆಲಕ್ಷನ್ ಮಟನ್ ಗೆ 700 ರು ತಲುಪಿದೆ. ಈ ವರ್ಷದ ಹಬ್ಬದಲ್ಲಿ ಒಂದು ಕುರಿ ಅಥವಾ ಟಗರಿಗೆ ಕನಿಷ್ಠ 10-25 ಸಾವಿರ ರು.ನಿಂದ - 48 ಸಾವಿರ ರು. ವರೆಗೆ ಮಾರಾಟವಾದವು. ಹಳ್ಳಿಯ ವ್ಯಕ್ತಿಯೋರ್ವರು 32 ಸಾವಿರ ರು.ಗೆ 1 ಟಗರು ಕೊಂಡರೆ, ಕಡೂರು ಪಟ್ಟಣದ ವ್ಯಕ್ತಿ ಯೋರ್ವರು 42 ಸಾವಿರ ನೀಡಿ ದೊಡ್ಡ ಟಗರು ಖರೀದಿಸಿದರು. 18 ಕೆಕೆಡಿಯು1, 1ಎ. ಕಡೂರಿನ ಎಪಿಎಂಸಿ ಪ್ರಾಂಗಣದಲ್ಲಿ ಸೇರಿರುವ ಕುರಿ ಸಂತೆ.

--- ಕೋಟ್‌---- ಕಳೆದ ವರ್ಷ ಅಮ್ಮನ ಹಬ್ಬಕ್ಕೆ ಕುರಿ ಖರೀದಿ ಕನಿಷ್ಠ 10 ರಿಂದ 40 ಸಾವಿರದವರೆಗೆ ಇತ್ತು. ಈ ಬಾರಿ ಸ್ವಲ್ಪ ಮಟ್ಟಿಗೆ ಬೆಲೆ ಪರವಾಗಿಲ್ಲ. ಆದರೆ ಕಟ್ ಮಾಡಿದ ಮಟನ್ ಗೆ 650ರ-700ರೂ ವರೆಗೆ ಮಾರುತ್ತಾರೆ.

- ತಿಮ್ಮೇಗೌಡ, ಗೋವಿಂದಪುರ.