ಬಸಾಪುರ ಕೆರೆ ಸಮುದಾಯದ ಆಸ್ತಿ. ಅದನ್ನು ಯಾವುದೇ ಸರ್ಕಾರ ಕಟ್ಟಿಲ್ಲ
ಕೊಪ್ಪಳ: ಕೊಪ್ಪಳ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳು ಕಾರ್ಖಾನೆಗಳಿಂದ ಅನುಭವಿಸುತ್ತಿರುವ ತೊಂದರೆ ಕುರಿತಂತೆ ಜ. 22ರ ವಿಶೇಷ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರವನ್ನು ಎಚ್ಚಿಸುವುದಾಗಿ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಭರವಸೆ ನೀಡಿದ್ದಾರೆ.
ಕೊಪ್ಪಳ ಹಾಗೂ ಭಾಗ್ಯನಗರ ಸೇರಿದಂತೆ 20 ಭಾದಿತ ಹಳ್ಳಿಗಳ ಸಮಸ್ಯೆ ಮುಂದಿಟ್ಟುಕೊಂಡು ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನಗರಸಭೆ ಮುಂದೆ ನಡೆಸುತ್ತಿರುವ ಬಲ್ಡೋಟಾ ಹಾಗೂ ಇತರ ವಿಷಕಾರಕ ಕಾರ್ಖಾನೆಗಳ ವಿರೋಧಿ ಅನಿರ್ದಿಷ್ಟಾವಧಿ ಹೋರಾಟದ 78 ನೇ ದಿನವಾದ ಶುಕ್ರವಾರ ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.ಬಸಾಪುರ ಕೆರೆ ಸಮುದಾಯದ ಆಸ್ತಿ. ಅದನ್ನು ಯಾವುದೇ ಸರ್ಕಾರ ಕಟ್ಟಿಲ್ಲ, ಸರ್ಕಾರ ಅದನ್ನು ಮಾರಾಟ ಮಾಡಲು ಬರುವುದಿಲ್ಲ. ಕೂಡಲೇ ಅದನ್ನು ತೆರವುಗೊಳಿಸಬೇಕು. ಈ ಕುರಿತು ಅಧಿವೇಶನದ ನಂತರವೂ ಕೂಡ ಹೋರಾಟ ಮುಂದುವರಿಸುವುದಾಗಿ ಹೇಳಿದರು. ಜನರ ಆರೋಗ್ಯ ಬಹಳ ಮುಖ್ಯ. ಸಿಎಂ ಹಾಗೂ ಸಚಿವರು ಕೇಂದ್ರದತ್ತ ಬೆಟ್ಟು ಮಾಡುತ್ತಿರುವುದು ಸರಿಯಲ್ಲ. ಕೇಂದ್ರದಲ್ಲಿ ಏನಾದರೂ ಇದ್ದರೂ ಅದನ್ನು ನಾವೂ ಗಮನಿಸುತ್ತೇವೆ. ಆದರೆ ಈ ಹೋರಾಟಕ್ಕೆ ನಮ್ಮ ಬೆಂಬಲವಿದೆ ಮತ್ತು ಈಗಾಗಲೇ ಹೋರಾಟ ಮುಂದುವರಿಸಿದ್ದೇವೆ. ಈ ಹೋರಾಟ ತೀವ್ರಗೊಳಿಸುವ ಕೆಲಸ ಬರುವ ದಿನಗಳಲ್ಲಿ ಮಾಡುತ್ತೇವೆ. ಸ್ಥಳೀಯ ನಾಯಕರು ಹೆಚ್ಚಿನ ಮುತುವರ್ಜಿ ವಹಿಸಿ ಜನರ ಜೀವ ಉಳಿಸಬೇಕು ಎಂದು ಆಗ್ರಹಿಸಿದರು.
ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಈ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದೇವೆ. ಜನಪ್ರತಿನಿಧಿಗಳು ಗವಿಮಠದ ಪೂಜ್ಯರಿಗೆ ಅವಮಾನ ಮಾಡಬಾರದು. ಅವರು ಈ ಭಾಗದ ದಿವ್ಯ ಶಕ್ತಿ,ಅವರಿಗೆ ನೋವು ಕೊಡಬೇಡಿ ಎಂದರು.ನಿವೃತ್ತ ಪ್ರಾಚಾರ್ಯ ಬಿ.ಜಿ.ಕರಿಗಾರ, ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ, ಎಸ್.ಬಿ.ರಾಜೂರು, ಶಂಭುಲಿಂಗಪ್ಪ ಹರಗೇರಿ, ಜಿ.ಬಿ. ಪಾಟೀಲ್, ಮಂಜುನಾಥ ಜಿ.ಗೊಂಡಬಾಳ, ರಾಜೇಶ ಸಸಿಮಠ, ಬಿಜೆಪಿ ಮುಖಂಡ ಡಾ.ಬಸವರಾಜ ಕ್ಯಾವಟರ್, ಗಣೇಶ ಹೊರತಟ್ನಾಳ, ಕನಕಪ್ಪ ಚಲುವಾದಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಗ್ಯಾನೇಶ, ಕನಕಮೂರ್ತಿ ಚಲುವಾದಿ, ರವಿ ಕಾಂತನವರ, ಎ.ಎಂ. ಮದರಿ, ಕಾಶಪ್ಪ ಚಲುವಾದಿ, ವಿಜಯಮಹಾಂತೇಶ ಹಟ್ಟಿ, ಕಲ್ಲಮ್ಮ ರ್ಯಾವಣಕಿ, ಶಿವಾನಂದ ಬಡಿಗೇರ, ಶಾಂತಮ್ಮ, ಈರಮ್ಮ ಉಂಡಿ, ಈರಣ್ಣ ವಾಲಿ, ಶಿವಪ್ಪ ಜಲ್ಲಿ, ಮಕ್ಬೂಲ್ ರಾಯಚೂರು ಸೇರಿದಂತೆ ಮೊದಲಾದವರು ಹೋರಾಟದಲ್ಲಿ ಪಾಲ್ಗೊಂಡಿದ್ದರು.