ರಾಜ್ಯದಲ್ಲಿ 5,000ಕ್ಕೂ ಹೆಚ್ಚು ಅಕ್ರಮ ಕಸಾಯಿಖಾನೆಗಳಿದ್ದು, ಗೋರಕ್ಷಕರ ವಿರುದ್ಧ 800ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದು

ಹೊಸಪೇಟೆ: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಗೋಹತ್ಯೆ ಹಾಗೂ ಮತಾಂತರ ನಿಷೇಧ ಕಾಯ್ದೆ ಸರ್ಕಾರ ವಾಪಸ್‌ ಪಡೆಯಬಾರದು ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್‌ ಸರ್ಕಾರವನ್ನು ಒತ್ತಾಯಿಸಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ರಾಜ್ಯದಲ್ಲಿ ಗೋಹತ್ಯೆ, ಗೋಕಳ್ಳತನ ಮತ್ತು ಗೋಮಾಂಸ ಸಾಗಾಣಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಗೋ ರಕ್ಷಕರ ಮೇಲೆ ಹಲ್ಲೆ ಆಗುತ್ತಿವೆ. ಜತೆಗೆ ಮತಾಂತರ ನಿಷೇಧ ಕಾಯ್ದೆ ಜಾರಿ ಮಧ್ಯೆಯೂ ಬಲವಂತದ ಮತಾಂತರ ನಡೆ​ಯುತ್ತಿದೆ. ಯಾವುದೋ ಒಂದು ಧರ್ಮಕ್ಕೆ ಅನುಕೂಲ ಮಾಡಿಕೊಡಲು ಮತಾಂತರ ನಿಷೇಧ ಕಾಯ್ದೆ ವಾಪಸ್‌ ಪಡೆಯಬಾರದು ಎಂದು ಒತ್ತಾಯಿಸಿದರು.

ಡಿ.2 ರಿಂದ11 ರವರೆಗೆ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಹಾಗೂ ಮತಾಂತರ ನಿಷೇಧ ಕಾಯ್ದೆ ವಾಪಸ್‌ ಪಡೆಯುವ ಉದ್ದೇಶ ಹೊಂದಿದೆ.ಇದನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಇತ್ತೀಚೆಗೆ ಸ್ಪಷ್ಟಪಡಿಸಿದ್ದಾರೆ ಎಂದರು.

ರಾಜ್ಯದಲ್ಲಿ 5,000ಕ್ಕೂ ಹೆಚ್ಚು ಅಕ್ರಮ ಕಸಾಯಿಖಾನೆಗಳಿದ್ದು, ಗೋರಕ್ಷಕರ ವಿರುದ್ಧ 800ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದು, 38 ಮಂದಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಕೆಲವರು ಇಂದಿಗೂ ಆಸ್ಪತ್ರೆಯಲ್ಲಿದ್ದಾರೆ ಎಂದು ಹೇಳಿದರು.

ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಗಳ ಮೂಲಕ ಸಾಂಸ್ಕೃತಿಕ ಮತ್ತು ಬೌದ್ಧಿಕ ಮತಾಂತರ ನಡೆಯುತ್ತಿದೆ, ಕ್ರಿಸ್‌ಮಸ್ ರಜೆ ರದ್ದುಗೊಳಿಸುವಂತೆ ಒತ್ತಾಯಿಸಿ ಡಿ.7ರಂದು ರಾಜ್ಯಾದ್ಯಂತ ಜಿಲ್ಲಾಧಿಕಾರಿ, ತಹಸೀಲ್ದಾರ್‌, ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಬಹುಸಂಖ್ಯಾತ ಹಿಂದು ವಿದ್ಯಾರ್ಥಿಗಳೇ ಕ್ರಿಶ್ಚನ್‌ ಕಾನ್ವೇಂಟ್‌ ಶಾಲೆಗಳಲ್ಲಿ ಓದುತ್ತಿದ್ದಾರೆ.ಡಿ.25ರ ಕ್ರಿಸ್‌ಮಸ್ ರಜೆಯ ಬದಲು ಕೆಲ ಶಾಲೆಗಳಲ್ಲಿ 10 ದಿನ ರಜೆ ನೀಡುತ್ತಿರುವುದು ಆಕ್ಷೇಪಾರ್ಹವಾಗಿದ್ದು, ದಸರಾ ರಜೆಯಲ್ಲಿ ಕಡಿತಗೊಳಿಸಿ ಕ್ರಿಸ್‌ಮಸ್‌ಗೆ ಹೆಚ್ಚು ರಜೆ ನೀಡುವ ಕ್ರಮ ವಿರೋಧಿಸಿ ರಜೆ ನೀಡುವ ಶಾಲೆಗಳ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸರ್ಕಾರಿ ಶಾಲೆ ಒತ್ತುವರಿ ಆರೋಪ:​ಹೊಸಪೇಟೆಯ ಪ್ರೇಮನಗರ ಸ್ಲಂ ಏರಿಯಾ ವ್ಯಾಪ್ತಿಯಲ್ಲಿರುವ ಪುರಾತನ ಸುಬೇದಾರ್ ಬಾವಿ (ಪುಷ್ಕರಣಿ) ಹಾಗೂ ಅಲ್ಲಿದ್ದ ಸುಮಾರು 40 ವರ್ಷ ಹಳೆಯ ಸರ್ಕಾರಿ ಶಾಲೆ ಮುಚ್ಚಿ ವಕ್ಫ್ ಬೋರ್ಡ್‌ಗೆ ಸೇರಿಸಲಾಗಿದೆ ಎಂದು ಆರೋಪಿಸಿದರು.

ಸುಮಾರು 70 ರಿಂದ 100ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದ ಶಾಲೆ ಮುಚ್ಚಿರುವುದರಿಂದ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರಿದೆ. ಈ ಒತ್ತುವರಿ ಮತ್ತು ಆಸ್ತಿ ವರ್ಗಾವಣೆಗೆ ಜಿಲ್ಲಾಡಳಿತ ಅವಕಾಶ ನೀಡಿರುವುದು ಸರಿಯಲ್ಲ. ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದರು. ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಜಗದೀಶ್ ಕಾಮಟಗಿ, ಶ್ರೀಕಾಂತ್ ಉಪಸ್ಥಿತರಿದ್ದರು.