ಸರ್ಕಾರವು ಕೈಗಾರಿಕೆ ಪ್ರಾರಂಭಿಸುವ ನೆಪದಲ್ಲಿ ಫಲವತ್ತಾದ ಕೃಷಿ ಭೂಮಿ ವಶಪಡಿಸಿಕೊಳ್ಳಲು ಮುಂದಾಗಿದೆ. ಹೀಗಾಗಿ ನಾವು ರಕ್ತ ಕೊಟ್ಟೇವು ನಮ್ಮ ಕೃಷಿ ಭೂಮಿ ಕೊಡುವುದಿಲ್ಲ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕೀಕರಣಕ್ಕಾಗಿ ಕೆಐಎಡಿಬಿಯು 2,332 ಎಕರೆ ಭೂಸ್ವಾಧೀನಕ್ಕೆ ಹೊರಡಿಸಿರುವ ಅಂತಿಮ ಅಧಿಸೂಚನೆ ಅಧಿಸೂಚನೆ ವಾಪಸ್ ಪಡೆಯಬೇಕು. ಯಾವ ಕಾರಣಕ್ಕೂ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳಬಾರದು ಎಂದು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಸಂಘ ಸೇರಿ ವಿವಿಧ ಸಂಘಟನೆಗಳು ಪ್ರತಿಭಟನಾ ಧರಣಿ ಪ್ರಾರಂಭಿಸಿ ಗುರುವಾರವಾದ ಇಂದು 19ನೇ ದಿನಕ್ಕೆ ಕಾಲಿಟ್ಟಿದೆ.

ಧರಣಿಯಲ್ಲಿ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಕನ್ನಡಪರ ಸಂಘಟನೆಗಳು, ಮಾನವ ಹಕ್ಕುಗಳ ಸಂಘಟನೆಗಳು ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು ಪಾಲ್ಗೊಂಡಿವೆ.

ಸರ್ಕಾರವು ಕೈಗಾರಿಕೆ ಪ್ರಾರಂಭಿಸುವ ನೆಪದಲ್ಲಿ ಫಲವತ್ತಾದ ಕೃಷಿ ಭೂಮಿ ವಶಪಡಿಸಿಕೊಳ್ಳಲು ಮುಂದಾಗಿದೆ. ಹೀಗಾಗಿ ನಾವು ರಕ್ತ ಕೊಟ್ಟೇವು ನಮ್ಮ ಕೃಷಿ ಭೂಮಿ ಕೊಡುವುದಿಲ್ಲ. ಕೃಷಿ ಭೂಮಿ ನಮ್ಮ ಹಕ್ಕು ಎಂಬ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಸರ್ಕಾರ ಬಲವಂತದ ಭೂಮಿ ವಶಕ್ಕೆ ಮುಂದಾದರೆ ಪರಿಸ್ಥಿತಿ ಬೇರೆ ಆಗಲಿದೆ ಎಂದು ಜಿಲ್ಲಾಡಳಿತಕ್ಕೆ ರೈತರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯ ವೇದಿಕೆಯಲ್ಲಿ ನಾಮಫಲಕಗಳನ್ನು ಹಿಡಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಯಾವುದೇ ಕಾರಣಕ್ಕೂ ಕೃಷಿ ಭೂಮಿಯನ್ನು ಕೊಡುವುದಿಲ್ಲ. ಸ್ವಾಧೀನ ಪ್ರಕ್ರಿಯೆ ಕೈ ಬಿಡಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.

ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ಒಟ್ಟು 2,332 ಎಕರೆ ಭೂ ಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ. ನಾವು ಜಮೀನು ನೀಡುವುದಿಲ್ಲ ಎಂದು ಸಾಗುವಳಿ ನಾಡುವ ರೈತರು ಹೇಳಿದರೂ ಬಲವಂತದಿಂದ ಜಮೀನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಜಮೀನು ನೀಡುವುದಿಲ್ಲ ಎಂದು ದೂರಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಪಿ ರಾಮನಾಥರೆಡ್ಡಿ, ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಸಿ.ಎಂ. ಬೈರೇಗೌಡ, ದಲಿತ ಸಂಘರ್ಷ ಸಮಿತಿ ಮುಖಂಡ ಕೆ.ಸಿ.ರಾಜಾಕಾಂತ್, ಪರಿಸರವಾದಿ ಚೌಡಪ್ಪ,ನೆಲಮಾಕನಹಳ್ಳಿ ಗೋಪಾಲ್, ಕರವೇ ರಾಮೇಗೌಡ, ನಾರಾಯಣಸ್ವಾಮಿ,ಪೈ ಪಾಳ್ಯ ರವಿ, ದಸಂಸ ತಾಲೂಕು ಅಧ್ಯಕ್ಷ ಪರಮೇಶ್, ಜಿಲ್ಲಾ ಸಂಚಾಲಕ ಸಿ.ಜಿ.ಗಂಗಪ್ಪ, ಜಿಲ್ಲಾ ಸಂಘಟನಾ ಸಂಚಾಲಕ ಎನ್.ವೆಂಕಟೇಶ್ ಇದ್ದರು.

ಸಿಕೆಬಿ-3 ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಡಿ ಎಂದು ಜಂಗಮಕೋಟೆ ಹೋಬಳಿ ರೈತ ಸಂಘಟನೆ ಅಡಿಯಲ್ಲಿ ರೈತ ಸಂಘ ಸೇರಿ ವಿವಿಧ ಸಂಘಟನೆಗಳ ಅನಿರ್ದಿಷ್ಟಾವಧಿ ಧರಣಿ 19ನೇ ದಿನಕ್ಕೆ ಕಾಲಿಟ್ಟಿತು