ಸಾರಾಂಶ
ಕಾರ್ಗಿಲ್ ಯೋಧರಾದ ನಾಯಕ್ ಲೀಲಾಧರ ಕಡಂಬಾಡಿ, ನಾಯಕ್ ನರೇಶ್ ಪೈ, ನಾಯಕ್ ಪ್ರವೀಣ್ ಶೆಟ್ಟಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಭಾರತಕ್ಕೆ ನೆರೆಯ ಚೀನಾ ಹಾಗೂ ಪಾಕಿಸ್ತಾನಕ್ಕಿಂತ ದೇಶದೊಳಗಿದ್ದು ವಿರೋಧಿ ಚಟುವಟಿಕೆ ನಡೆಸುತ್ತಿರುವವರೇ ದೊಡ್ಡ ಶತ್ರುಗಳಾಗಿದ್ದಾರೆ ಎಂದು ಕಾರ್ಗಿಲ್ ವೀರಯೋಧ ನಾಯಕ್ ಪ್ರವೀಣ್ ಶೆಟ್ಟಿ ಹೇಳಿದರು.ಅವರು ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ದ.ಕ.ಜಿಲ್ಲಾ ಬಿಜೆಪಿ ಏರ್ಪಡಿಸಿದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇನ್ನೋರ್ವ ಕಾರ್ಗಿಲ್ ಯೋಧ ನಾಯಕ್ ಲೀಲಾಧರ್ ಕಡಂಬಾಡಿ ಮಾತನಾಡಿ, ಪ್ರಧಾನಿ ವಾಜಪೇಯಿ, ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್‌ರಿಂದ ತೊಡಗಿ ಈಗಿನ ಪ್ರಧಾನಿ ಹಾಗೂ ರಕ್ಷಣಾ ಸಚಿವರು ಸದಾ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ಜೊತೆಗೆ ಸೈನ್ಯಕ್ಕೆ ಆಧುನಿಕ ಶಸ್ತ್ರಾಸ್ತ್ರ ಪೂರೈಸಿದ್ದಾರೆ. ದೇಶದ ರಕ್ಷಣೆಗಾಗಿ ಆದಷ್ಟು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರಬೇಕು. ಶಾಲೆಗಳಲ್ಲಿ ಓದಿನ ಜೊತೆ ದೈಹಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.ಮಾಜಿ ಸಚಿವ ನಾಗರಾಜ ಶೆಟ್ಟಿ ಮಾತನಾಡಿ, ಯೋಧರು ದೇವರ ಸಮಾನವಾಗಿದ್ದು, ಭಾರತದ ಮಿಲಿಟರಿ ಶಕ್ತಿ ಜಗತ್ತಿನಲ್ಲೇ ಅನಾವರಣಗೊಂಡಿದೆ. ಕರಾವಳಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರುವಂತಾಗಬೇಕು ಎಂದು ಆಶಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿ, ಬಿಜೆಪಿ ವತಿಯಿಂದ ಪ್ರತಿ ವರ್ಷ ಕಾರ್ಗಿಲ್ ದಿನಾಚರಣೆ ಆಚರಿಸಲಾಗುವುದು. ಅಲ್ಲದೆ ಜಿಲ್ಲಾ ಕಾರ್ಯಕಾರಿಣಿ ಸಭೆ, ಯುವ ಮೋರ್ಚಾ ಕಾರ್ಯಕ್ರಮಗಳಲ್ಲೂ ಸೈನಿಕರನ್ನು ಸ್ಮರಿಸುವ ಕಾರ್ಯ ನಡೆಯಬೇಕು ಎಂದರು.ಈ ಸಂದರ್ಭ ಕಾರ್ಗಿಲ್ ಯೋಧರಾದ ನಾಯಕ್ ಲೀಲಾಧರ ಕಡಂಬಾಡಿ, ನಾಯಕ್ ನರೇಶ್ ಪೈ, ನಾಯಕ್ ಪ್ರವೀಣ್ ಶೆಟ್ಟಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮೇಯರ್ ಸುಧೀರ್ ಶೆಟ್ಟಿ, ಉಪ ಮೇಯರ್ ಸುನಿತಾ, ಮುಖಂಡರಾದ ಪ್ರೇಮಾನಂದ ಶೆಟ್ಟಿ, ಸತೀಶ್ ಆರ್ವಾರ್, ರಮೇಶ್ ಕಂಡೆಟ್ಟು, ಕಿಶೋರ್ ಕುಮಾರ್ ಬೊಟ್ಯಾಡಿ, ಜಿಲ್ಲಾ ಸೈನಿಕ ಪ್ರಕೋಷ್ಠ ಅಧ್ಯಕ್ಷ ನಾಯಕ್ ನರೇಶ್ ಪೈ ಮತ್ತಿತರರಿದ್ದರು. ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಸ್ವಾಗತಿಸಿದರು. ವಿರೂಪಾಕ್ಷ ಭಟ್ ವಂದಿಸಿದರು. ಇದಕ್ಕೂ ಮೊದಲು ಬಂಟ್ಸ್ ಹಾಸ್ಟೆಲ್‌ನಿಂದ ಪಿವಿಎಸ್ ವರೆಗೆ ತಿರಂಗಾ ಯಾತ್ರೆ ನಡೆಯಿತು.