ಸಾರಾಂಶ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ರಾಜ್ಯದ ಪುರಾತನ ಶಾಸನಗಳು, ನಾಣ್ಯ, ಕಟ್ಟಡ, ಸಾಹಿತ್ಯ ನೋಡಿದರೆ ಹೆಮ್ಮೆಯಾಗುತ್ತದೆ ಎಂದು ತಾಲೂಕು ಪ್ರೌಢ ಶಾಲೆ ಸಹ ಶಿಕ್ಷಕರ ಸಂಘದ ಅಧ್ಯಕ್ಷ ರಾಘವೇಂದ್ರ ತಿಳಿಸಿದರು.ಅವರು ಮಂಗಳವಾರ ಪಟ್ಟಣದ ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆಯಲ್ಲಿ ಮೈಸೂರು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢ ಶಾಲೆಗಳ ಮಕ್ಕಳಿಗಾಗಿ ಏರ್ಪಡಿಸಿದ್ದ ಪ್ರಾಚ್ಯ ಪ್ರಜ್ಞೆ ಸ್ಪರ್ಧಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಭಾರತ ದೇಶದಲ್ಲಿ ಎಲ್ಲಾ ಪುರಾತನ ವಸ್ತುಗಳನ್ನು ಉಳಿಸಿಕೊಂಡು ಬಂದಿದ್ದೇವೆ. ಈ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಬೇಕಾಗಿದೆ. ಹಂಪಿಯಿಂದ ಹಿಡಿದು ಚಿತ್ರದುರ್ಗದವರೆಗೆ ಕಲ್ಲಿನ ಕೆತ್ತನೆಯನ್ನುಕಾಣಬಹುದು. ಹಿಂದೆ ಯಾವುದೇ ಯಂತ್ರ ಇಲ್ಲದಿದ್ದರೂ ಶಿಲ್ಪಿಗಳು ಬರೀ ಕೈಯಲ್ಲೇ ಕೆತ್ತಿ ಸುಂದರ ಕಟ್ಟಡ ಕಟ್ಟುತ್ತಿದ್ದರು. ಮಕ್ಕಳು ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂದರು.ಶಿಕ್ಷಣ ಸಂಯೋಜಕ ರಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನ ಎಲ್ಲಾ ಪ್ರೌಢ ಶಾಲೆಯ ಮಕ್ಕಳಿಗಾಗಿ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ಚಿತ್ರಕಲೆ ಹಾಗೂ ರಸ ಪ್ರಶ್ನೆ ಸ್ಪರ್ಧೆ ನಡೆಸಲಾಗುತ್ತದೆ. ಇದರಲ್ಲಿ ಗೆದ್ದವರು ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸಬಹುದು ಎಂದರು. ಅತಿಥಿಯಾಗಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ನಮ್ಮ ದೇಶದಲ್ಲಿ ಅನೇಕ ಶಾಸನಗಳಿವೆ. ನರಸಿಂಹರಾಜಪುರ ತಾಲೂಕಿನಲ್ಲೂ ಹಲವು ಶಿಲಾ ಶಾಸನಗಳು ಗಿಡ, ಗಂಟಿನಲ್ಲಿ, ಮಣ್ಣಿನಲ್ಲಿ ಮುಚ್ಚಿಹೋಗಿದ್ದು ತಾಲೂಕು ಕ.ಸಾಪ ಅದನ್ನು ತೆಗೆದು ಸ್ವಚ್ಛಗೊಳಿಸುವ ಕಾರ್ಯ ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿದರು.
ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸೇವ್ಯಾನಾಯಕ್ ಉದ್ಘಾಟಿಸಿ ಮಾತನಾಡಿ, ಬೇಲೂರು, ಹಳೇ ಬೀಡುಗಳಲ್ಲಿ ಪುರಾತನವಾದ ಶಿಲೆಗಳಿವೆ. ಇಂತಹ ಪುರಾತನ ಸ್ಮಾರಕಗಳ ರಕ್ಷಣೆ ಎಲ್ಲರ ಹೊಣೆಯಾಗಿದೆ. ಪ್ರತಿ ವರ್ಷ ಶಿಕ್ಷಣ ಇಲಾಖೆಯ ಮೂಲಕ ಮಕ್ಕಳಿಗೆ ಇದರ ಅರಿವು ಮೂಡಿಸುವ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದರು.ಸಭೆಯ ಅಧ್ಯಕ್ಷತೆಯನ್ನು ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಜಾತ ವಹಿಸಿದ್ದರು. ಮಾಗುಂಡಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ರಮೇಶನಾಯ್ಕ್, ಅತಿಥಿಗಳಾಗಿ ನಿವೃತ್ತ ಶಿಕ್ಷಕ ಕೆ.ಎಸ್. ರಾಜಕುಮಾರ್, ಇ.ಸಿ.ಓ ಸಂಗೀತ, ಸಿ.ಆರ್.ಪಿ. ಗೀತಾ ಇದ್ದರು. ಹರ್ಷಿತ ಸ್ವಾಗತಿಸಿದರು. ಗುಣಪಾಲ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಮೇಘಶ್ರೀ ವಂದಿಸಿದರು. ನಂತರ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ, ಚಿತ್ರಕಲೆ, ರಸಪ್ರಶ್ನೆ ಸ್ಪರ್ಧೆಗಳು ನಡೆಯಿತು.