ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್‌ ಸೋರಿಕೆಯಿಂದ ಆತಂಕ ಸೃಷ್ಟಿ

| Published : Aug 15 2024, 01:48 AM IST

ಸಾರಾಂಶ

ಬೆಳಗ್ಗೆ 11ರ ಸುಮಾರಿಗೆ ಜಿಲ್ಲಾಸ್ಪತ್ರೆಯಲ್ಲಿ ಒಮ್ಮೇಲೆ ಸ್ಫೋಟದ ಸದ್ದು ಕೇಳಿಬಂದಿದೆ. ಜತೆಗೆ, ಆಕ್ಸಿಜನ್‌ ಸೋರಿಕೆಯಾಗಿದೆ. ಇದರಿಂದ ಭಯಭೀತಗೊಂಡ ಜನರು ಚಿಕಿತ್ಸೆ ಪಡೆಯುವುದನ್ನು ಬಿಟ್ಟು ಹೊರಗೆ ಓಡಿ ಬಂದಿದ್ದಾರೆ.

ಹಾವೇರಿ: ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಆಕ್ಸಿಜನ್‌ ಸಿಲಿಂಡರ್‌ ಸೋರಿಕೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಬುಧವಾರ ನಡೆಯಿತು.

ಬೆಳಗ್ಗೆ 11ರ ಸುಮಾರಿಗೆ ಜಿಲ್ಲಾಸ್ಪತ್ರೆಯಲ್ಲಿ ಒಮ್ಮೇಲೆ ಸ್ಫೋಟದ ಸದ್ದು ಕೇಳಿಬಂದಿದೆ. ಜತೆಗೆ, ಆಕ್ಸಿಜನ್‌ ಸೋರಿಕೆಯಾಗಿದೆ. ಇದರಿಂದ ಭಯಭೀತಗೊಂಡ ಜನರು ಚಿಕಿತ್ಸೆ ಪಡೆಯುವುದನ್ನು ಬಿಟ್ಟು ಹೊರಗೆ ಓಡಿ ಬಂದಿದ್ದಾರೆ. ಕೆಲ ಮಹಿಳೆಯರು ಹಸುಗೂಸುಗಳನ್ನು ಎತ್ತಿಕೊಂಡೇ ಏಳುತ್ತ ಬೀಳುತ್ತ ಆತಂಕದಲ್ಲೇ ಹೊರಕ್ಕೆ ಓಡಿದ್ದಾರೆ. ಬೆಡ್‌ ಮೇಲೆ ಮಲಗಿದ್ದ ಬಾಣಂತಿಯರನ್ನು ಕುಟುಂಬದವರು ಹೊರಗೆ ಕರೆತಂದಿದ್ದಾರೆ. ಆಸ್ಪತ್ರೆ ಹಾಸಿಗೆ ಮೇಲೆ ಮಲಗಿದ್ದ ಕೆಲವರು ಕೈಯಲ್ಲಿ ಸಲೈನ್‌ ಬಾಟಲಿ ಹಿಡಿದುಕೊಂಡೇ ಓಡಿದ್ದಾರೆ. ಇದರಿಂದ ಕೆಲ ಹೊತ್ತು ಜಿಲ್ಲಾಸ್ಪತ್ರೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಏನಾಗಿದೆ ಎಂಬುದೇ ಗೊತ್ತಿಲ್ಲದೇ ಕೆಲವರು ಓಡಿದ್ದಾರೆ. ಆಕ್ಸಿಜನ್‌ ಸೋರಿಕೆಯಿಂದ ಸದ್ದು ಕೇಳಿಬಂದಿದ್ದು, ಯಾವುದೇ ಅಪಾಯವಿಲ್ಲ ಎಂಬುದು ಅರಿತು ರೋಗಿಗಳಲ್ಲಿ ನಿರ್ಮಾಣವಾಗಿದ್ದ ಆತಂಕ ನಿವಾರಣೆಯಾಯಿತು. ಬಳಿಕ ಆಸ್ಪತ್ರೆ ಒಳಗೆ ತೆರಳಿದರು.

ಆಕ್ಸಿಜನ್‌ ಸಿಲಿಂಡರ್‌ ಮುಚ್ಚಳ ಓಪನ್‌ ಆಗಿ ಸೋರಿಕೆಯಾಗಿದೆ. ಸಿಲಿಂಡರ್‌ ಸ್ಫೋಟಗೊಂಡಿಲ್ಲ. ಓಪನ್‌ ಆಗಿದ್ದ ಶಬ್ಧ ಕೇಳಿ ಜನರು ಗಾಭರಿಯಾಗಿದ್ದಾರೆ. ಯಾರಿಗೂ ಯಾವುದೇ ಅಪಾಯವಾಗಿಲ್ಲ ಎಂದು ಜಿಲ್ಲಾಸ್ಪತ್ರೆ ಸರ್ಜನ್‌

ಡಾ. ಪಿ.ಆರ್‌. ಹಾವನೂರ ತಿಳಿಸಿದ್ದಾರೆ.