ಸಾರಾಂಶ
ಬೆಂಗಳೂರು : ಬಸವಣ್ಣ ಅವರು ‘ದಯವೇ ಧರ್ಮದ ಮೂಲವಯ್ಯ’ ಎಂದಿದ್ದರು. ಆದರೆ, ಈಚೆಗೆ ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಆತಂಕ ಮೂಡಿಸಲಾಗುತ್ತಿದ್ದು, ಶಾಂತಿ, ಪ್ರೀತಿ, ವಿಶ್ವಾಸ ಮರೆಯಾಗುತ್ತಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಬುಧವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ‘ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ. ಧರ್ಮ ಅಂದರೆ, ಸತ್ಯ, ನ್ಯಾಯ, ತಂದೆ–ತಾಯಿಯ ಸೇವೆ, ಪ್ರಕೃತಿಯ ರಕ್ಷಣೆಯಾಗಿದೆ. ಬಸವಣ್ಣನವರು ‘ದಯವೇ ಧರ್ಮದ ಮೂಲವಯ್ಯ’ ಎಂದು ಧರ್ಮದ ವ್ಯಾಖ್ಯಾನ ಮಾಡಿದ್ದರು. ಆದರೆ, ಇತ್ತೀಚೆಗೆ ನಾವು ಇದನ್ನು ಮರೆಯುತ್ತಿದ್ದೇವೆ ಎಂದರು.
ವೀರಶೈವ–ಲಿಂಗಾಯತ ಮಠಗಳು ಧರ್ಮ ಪ್ರಚಾರದ ಜತೆಗೆ ಸಾಮಾಜಿಕ ಕಳಕಳಿ ಮೆರೆಯುತ್ತಿವೆ. ಶಿಕ್ಷಣ, ಆಶ್ರಯ, ಆರೋಗ್ಯವನ್ನು ಎಲ್ಲ ಸಮುದಾಯಗಳಿಗೆ ಒದಗಿಸುತ್ತಿವೆ. ಮಠಾಧೀಶರು ಧರ್ಮ ಜಾಗೃತಿಗೆ ದೇಶದಾದ್ಯಂತ ಸಂಚರಿಸುತ್ತಿದ್ದಾರೆ. ಕಾಲಕಾಲಕ್ಕೆ ಸಮಾಜವನ್ನು ಸರಿದಾರಿಗೆ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಕರ್ನಾಟಕ ವೀರಶೈವ–ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ₹500 ಕೋಟಿ ಅನುದಾನ ನೀಡಬೇಕೆಂಬ ಬೇಡಿಕೆಯಿದೆ. ಈ ವರ್ಷ ಹೆಚ್ಚಿನ ಅನುದಾನ ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಕೋರಲಾಗುವುದು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ವೀರಶೈವ ಧರ್ಮಕ್ಕೆ ಜೀವ ನೀಡಿದ ಮಹಾನ್ ವ್ಯಕ್ತಿ ರೇಣುಕಾಚಾರ್ಯರು. ಜಾತಿಬೇಧವನ್ನು ತೋರದೆ ಎಲ್ಲರಿಗೂ ಲಿಂಗದೀಕ್ಷೆಯನ್ನು ನೀಡುವ ಮೂಲಕ ವೀರಶೈವ ತತ್ವ ಬೋಧಿಸಿದರು. ಪ್ರಮುಖವಾಗಿ ಹೆಣ್ಣುಮಕ್ಕಳಿಗೂ ಲಿಂಗದೀಕ್ಷೆ ನೀಡಿ, ಧರ್ಮಗುರುವಿನ ಪೀಠದಲ್ಲಿ ಕೂರಿಸುವ ಬಹುದೊಡ್ಡ ನಿರ್ಧಾರವನ್ನು ಅವರು ಮಾಡಿದ್ದರು ಎಂದರು.
ಕರ್ನಾಟಕ ವೀರಶೈವ–ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಎಸ್. ಕಾಶಪ್ಪನವರ್ ಮಾತನಾಡಿ, ನಿಗಮಕ್ಕೆ 2023–24ನೇ ಸಾಲಿನಲ್ಲಿ ₹60 ಕೋಟಿ ಅನುದಾನ ನೀಡಲಾಗಿತ್ತು. ಈ ಸಾಲಿಗೆ ₹224 ಕೋಟಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ವೀರಶೈವ–ಲಿಂಗಾಯತ ಭವನ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಎಡೆಯೂರಿನ ರೇಣುಕಾ ಶಿವಾಚಾರ್ಯಾ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಇತ್ತೀಚೆಗೆ ಒಡಕನ್ನು ನೋಡುತ್ತಿದ್ದೇವೆ. ಸಮಸ್ತ ವೀರಶೈವ–ಲಿಂಗಾಯತರು ಒಂದೆ. ಒಗ್ಗಟ್ಟಾಗಿ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಮರೆಯಬಾರದ ಎಂದು ಎಚ್ಚರಿಸಿದರು.
ಎಸ್.ಜೆ.ಆರ್.ಸಿ. ಮಹಿಳಾ ಕಾಲೇಜಿನ ಪ್ರಾಚಾರ್ಯೆ ಪ್ರೇಮಾ ಸಿದ್ಧರಾಜು ಅವರು ರೇಣುಕಾಚಾರ್ಯರ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಮುದಾಯದ ಮುಖಂಡರು ಇದ್ದರು.