ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಾನು ಯಾವುದೇ ನಿರ್ದಿಷ್ಟ ಖಾತೆಗಾಗಿ ಬೇಡಿಕೆ ಇಟ್ಟಿಲ್ಲ. ಹಿಂದೆ ಕೊಟ್ಟಿದ್ದ ಇಲಾಖೆಯಲ್ಲೂ ಪ್ರಾಮಾಣಿಕವಾಗಿ ಮೂರು ವರ್ಷ ಕೆಲಸ ಮಾಡಿದ್ದೇನೆ. ಸರ್ಕಾರ ಯಾವ ಖಾತೆ ನೀಡಿದರೂ ಜವಾಬ್ದಾರಿಯಿಂದ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಂಪುಟ ಸಭೆಯಲ್ಲಿ ನಿರ್ದೇಶನ ನೀಡಿದ್ದಾರೆ. ಜಿಲ್ಲೆಗಳಲ್ಲಿ ಬರ ಹಾಗೂ ಅತಿವೃಷ್ಟಿ ಪರಿಶೀಲನೆಗೆ ಆದ್ಯತೆ ನೀಡುತ್ತಿದ್ದೇನೆ. ಈಗಾಗಲೇ ಶಿವಮೊಗ್ಗ ಗ್ರಾಮಾಂತರ, ಸಿಟಿ ಹಾಗೂ ಶಿಕಾರಿಪುರ ಪ್ರವಾಸ ಮುಗಿಸಿದ್ದೇನೆ. ಮುಂದಿನ ಹಂತದಲ್ಲಿ ತೀರ್ಥಹಳ್ಳಿ ಸೇರಿದಂತೆ ಇತರ ತಾಲೂಕುಗಳಿಗೆ ಭೇಟಿ ನೀಡುತ್ತೇನೆ ಎಂದು ತಿಳಿಸಿದರು.

ಕೆಲ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವರಿಷ್ಠರ ನಿರ್ಧಾರಕ್ಕೆ ನಾನು ಬದ್ಧರಾಗಿರುತ್ತೇವೆ. ಪಕ್ಷ ಹಾಗೂ ವರಿಷ್ಠರ ತೀರ್ಮಾನವೇ ಅಂತಿಮ. ನಾಯಕರ ಆಯ್ಕೆ ಮತ್ತು ಬೇಡಿಕೆಗಳ ಕುರಿತು ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಬಿಜೆಪಿ ಸರ್ಕಾರದ ಜೊತೆ ಹೋಲಿಕೆ ಬೇಡ. ಯಡಿಯೂರಪ್ಪ ಸಿಎಂ ಆಗಿದ್ದಾಗ ಎಷ್ಟೋ ದಿನಗಳ ಕಾಲ ಸರ್ಕಾರದಲ್ಲಿ ವಿಳಂಬವಾಗಿತ್ತು. ಆದರೆ, ನಾನು ನಮ್ಮ ಸರ್ಕಾರವನ್ನು ಅವರ ಜೊತೆ ಹೋಲಿಸಲು ಹೋಗುವುದಿಲ್ಲ ಎಂದರು.

ಶಿಕ್ಷಣ ಇಲಾಖೆ ಕೆಲಸಗಳು ಮುಂದುವರಲಿವೆ. ತಾವು ಶಿಕ್ಷಣ ಸಚಿವರಾಗಿದ್ದಾಗ ಕೈಗೆತ್ತಿಕೊಂಡಿದ್ದ ಅಭಿವೃದ್ಧಿ ಕೆಲಸಗಳು ಈ ಸರ್ಕಾರದಲ್ಲೂ ನಿರಂತರವಾಗಿ ಮುಂದುವರಿಯಲಿವೆ. ಮುಖ್ಯಮಂತ್ರಿಗಳಿಂದಲೂ ಶಿಕ್ಷಣಕ್ಕೆ ಆದ್ಯತೆ ಸಿಗುತ್ತಿದೆ. ಸ್ವತಃ ಮುಖ್ಯಮಂತ್ರಿಗಳೇ ಶಿಕ್ಷಣ ಕ್ಷೇತ್ರದ ಬಗ್ಗೆ ವಿಶೇಷ ಕಾಳಜಿ ಮತ್ತು ಆಸಕ್ತಿ ಹೊಂದಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


ಜಿಲ್ಲೆಯಲ್ಲಿ ​ಕುಡಿಯುವ ನೀರಿನ ಅಭಾವವಿಲ್ಲ. ಜಿಲ್ಲೆಯ ಪ್ರವಾಸದ ವೇಳೆ ಪರಿಶೀಲಿಸಿದಂತೆ ಸದ್ಯಕ್ಕೆ ಕುಡಿಯುವ ನೀರಿನ ಅಭಾವ ಅಥವಾ ಟ್ಯಾಂಕರ್ ನೀರಿನ ಕೊರತೆ ಎದ್ದು ಕಾಣುತ್ತಿಲ್ಲ. ಮಳೆ ಅಭಾವದ ಕುರಿತು ಆಗಸ್ಟ್ ತಿಂಗಳ ಕೊನೆಯಲ್ಲಿ ಪರಿಪೂರ್ಣ ಮತ್ತು ಸ್ಪಷ್ಟ ಚಿತ್ರಣ ಸಿಗಲಿದೆ ಎಂದರು.

​ಕಾಂಗ್ರೆಸ್ ಕಚೇರಿ ಗೊಂದಲ ಬಗೆಹರಿಯುತ್ತದೆ. ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಗಲಾಟೆ ವಿಚಾರ ಸಂಬಂಧಿಸಿದಂತೆ, ನಾಲ್ಕು ಗೋಡೆಗಳ ಮಧ್ಯೆ ಕುಳಿತು ಪ್ರೀತಿಯಿಂದ ಎಲ್ಲವನ್ನೂ ಸರಿಪಡಿಸಿಕೊಳ್ತೇವೆ. ಜಿಲ್ಲಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಎಲ್ಲ ಸರಿಪಡಿಸಿಕೊಳ್ತೇವೆ. ಶಕ್ತಿ ಜಾಸ್ತಿ ಇದ್ದಾಗ ಈ ರೀತಿ ಆಗ್ತಾವೆ ಎಂದು ಪ್ರತಿಕ್ರಿಯಿಸಿದರು.

ಹೈಕಮಾಂಡ್‌ಗೆ ಕೃತಜ್ಞತೆ

ಸಚಿವ ಸ್ಥಾನ ಸಿಕ್ಕಿದ್ದಕ್ಕೆ ಮೊದಲು ನಾನು ಹೈಕಮಾಂಡ್‌ಗೆ ಕೃತಜ್ಞತೆ ಸಲ್ಲಿಸುತ್ತೇನೆ. ಹಾಗೆ ಶಿವಮೊಗ್ಗದ ನಾಯಕರು ಹಾಗೂ ಸೊರಬ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಜನ ನನ್ನ ಶಾಸಕರಾಗಿ ಆಯ್ಕೆ ಮಾಡಿದ್ದಕ್ಕೆ ಈ ಸಚಿವ ಸ್ಥಾನ ಒಲಿದಿದ್ದು, ಸಚಿವರಾಗಿ ಮತ್ತೆ ಕೆಲಸ ಮಾಡಲು ಅವಕಾಶ ನೀಡಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಡಿ.ಕೆ.ಶಿವಕುಮಾರ್ ಅವರು ನಮಗೆ ಅಣ್ಣನ ಸಮಾನ. ಬಂಗಾರಪ್ಪ ಅವರ ಕಾಲದಿಂದಲೂ ನಮ್ಮ ಹಾಗೂ ಅವರ ಕುಟುಂಬದ ನಡುವೆ ಆತ್ಮೀಯ ಬಾಂಧವ್ಯವಿದೆ. ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಸಿಎಂ ಡಿ.ಕೆ.ಶಿವಕುಮಾರ್‌ಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಸಂಪುಟ ಪುನರ್ ಮತ್ತು ಗೊಂದಲಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಧ್ಯಮದಲ್ಲಿ ನೋಡಿದ್ದೇನೆ. ಸೋಮವಾರದ ವೇಳೆಗೆ ಖಾತೆ ಹಂಚಿಕೆ ಆಗಬಹುದು. ಬೇಳೂರು ಗೋಪಾಲಕೃಷ್ಣ ಹಾಗೂ ಬಿ.ಕೆ. ಸಂಗಮೇಶ್ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಸಚಿವ ಸ್ಥಾನ ದೊರಕಿಲ್ಲ. ಇದರಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರನ್ನು ಇನ್ನು ಭೇಟಿ ಆಗಿ ಅವರೊಂದಿಗೆ ಮಾತನಾಡುತ್ತೇನೆ ಎಂದರು.

ಮಧು ಬಂಗಾರಪ್ಪ ಸಚಿವ ಸ್ಥಾನ ಸಿಕ್ಕಿರುವುದು ಸಂತೋಷವಾಗಿದೆ ಎಂಬ ಮಾಜಿ ಸಚಿವ, ಸಹೋದರ ಕುಮಾರ್ ಬಂಗಾರಪ್ಪ ಹೇಳಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದರು.

ಪಟಾಕಿ ಸಿಡಿಸಿ ಸಂಭ್ರಮ

2ನೇ ಬಾರಿ ಸಚಿವರಾದ ಬಳಿಕ ಮಧು ಬಂಗಾರಪ್ಪ ಮೊದಲ ಬಾರಿಗೆ ಶಿವಮೊಗ್ಗ ನಗರಕ್ಕೆ ಆಗಮಿಸಿದ ಹಿನ್ನೆಲೆ ನಗರದಲ್ಲಿ ಮುಖಂಡರು- ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು. ನಗರದ ಉಷಾ ಸರ್ಕಲ್ ಬಳಿ ಎಂ.ಶ್ರೀಕಾಂತ್ ಅಭಿಮಾನಿ ಬಳಗದಿಂದ ಸಚಿವ ಮಧುಬಂಗಾರಪ್ಪ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಈ ಸಂದರ್ಭ ಕಾರ್ಯಕರ್ತರು ಪಟಾಕಿ ಸಿಡಿಸಿ, ಹೂವಿನ ಹಾರ ಹಾಕಿ, ಘೋಷಣೆ ಕೂಗಿದರು.

ಬಳಿಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲೂ ಸಚಿವರಿಗೆ ಹೂಗುಚ್ಛ ನೀಡಿ, ಜೈಕಾರ ಹಾಕಿ ಮುಖಂಡರು, ಕಾರ್ಯಕರ್ತರು ಸ್ವಾಗತಿಸಿದರು.