ಮೀನುಗಾರರಿಗೆ ಪರಿಹಾರ ಮೊತ್ತ ಹೆಚ್ಚಳ ಬಿಟ್ಟರೆ ಉಳಿದ ಯೋಜನೆ ಪ್ರಗತಿಗೆ ಸೀಮಿತ

| Published : Mar 07 2025, 12:51 AM IST

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲೆಗೆ ಕಳೆದ ಬಾರಿಯ ರಾಜ್ಯ ಬಜೆಟ್‌ನಲ್ಲಿ ಆರು ಕೊಡುಗೆಗಳನ್ನು ನೀಡಲಾಗಿತ್ತು. ಈ ಪೈಕಿ ಮೀನುಗಾರರಿಗೆ ಪರಿಹಾರ ಮೊತ್ತ ಹೆಚ್ಚಳ ಮಾತ್ರ ಈಡೇರಿದ್ದು ಬಿಟ್ಟರೆ ಉಳಿದ ಯೋಜನೆಗಳು ಪ್ರಗತಿಯಲ್ಲಿ ಮಾತ್ರ ಉಳಿದುಕೊಂಡಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕಳೆದ ಬಾರಿಯ ರಾಜ್ಯ ಬಜೆಟ್‌ನಲ್ಲಿ ದ.ಕ.ಜಿಲ್ಲೆಗೆ ಆರು ಕೊಡುಗೆಗಳನ್ನು ನೀಡಲಾಗಿತ್ತು. ಈ ಪೈಕಿ ಮೀನುಗಾರರಿಗೆ ಪರಿಹಾರ ಮೊತ್ತ ಹೆಚ್ಚಳ ಮಾತ್ರ ಈಡೇರಿದ್ದು ಬಿಟ್ಟರೆ ಉಳಿದ ಯೋಜನೆಗಳು ಪ್ರಗತಿಯಲ್ಲಿ ಮಾತ್ರ ಉಳಿದುಕೊಂಡಿದೆ.

ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಮೀನುಗಾರರಿಗೆ ನೀಡುತ್ತಿರುವ ಪರಿಹಾರ ಮೊತ್ತವನ್ನು 1,500 ರು.ನಿಂದ 2 ಸಾವಿರ ರು.ಗೆ ಏರಿಕೆ ಮಾಡುವುದಾಗಿ ಬಜೆಟ್‌ನಲ್ಲಿ ಪ್ರಕಟಿಸಲಾಗಿತ್ತು. ಮೀನುಗಾರಿಕೆ ನಿಷೇಧ ಅವಧಿ ಈ ಹಿಂದೆ ಮೂರು ತಿಂಗಳು ಇದ್ದರೆ, ಈಗ ಎರಡೇ ತಿಂಗಳಿಗೆ ಕಡಿತಗೊಳಿಸಲಾಗಿದೆ. ಹಾಗಾಗಿ ಮೀನುಗಾರರಿಗೆ ಎರಡೇ ತಿಂಗಳು ಈ ಮೊತ್ತದ ಪ್ರಯೋಜನ ಸಿಗುತ್ತದೆ. ಇದಕ್ಕಾಗಿ ಮೀನುಗಾರ ಫಲಾನುಭವಿಗಳು ಪ್ರತಿ ತಿಂಗಳು 165 ರು. ನಂತೆ ಒಂಭತ್ತು ಪಾವತಿಸಬೇಕು. ಫಲಾನುಭವಿಗಳ ಮೊತ್ತ 1,500 ರು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪಾಲು ತಲಾ 1,500 ರು. ಸೇರಿ ಒಟ್ಟು 4,500 ರು. ಪಾವತಿಯಾಗುತ್ತಿತ್ತು. ಈ ಬಾರಿಯಿಂದ ಈ ಮೊತ್ತ ಹೆಚ್ಚುವರಿಯಾಗಿ 1,500 ರು. ಪಾವತಿಯಾಗುತ್ತಿದ್ದು, ಒಟ್ಟು 6 ಸಾವಿರ ರು. ಮೊತ್ತ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ ಎಂದು ಮೀನುಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.

ಪಶು ವೈದ್ಯಕೀಯ ಕಾಲೇಜು ಆಗಸ್ಟ್‌ಗೆ ಶುರು:

ಪುತ್ತೂರಿನ ಕೊಯ್ಲ ಪಶು ಸಂಗೋಪನಾ ಕ್ಷೇತ್ರದಲ್ಲಿ ಪಶು ವೈದ್ಯಕೀಯ ಕಾಲೇಜು ಆರಂಭದ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿತ್ತು. ಇದೀಗ ಮೊದಲ ಹಂತದ ಕಾಮಗಾರಿ ಮುಕ್ತಾಗೊಂಡಿದ್ದು, ಆಗಸ್ಟ್‌ ವೇಳೆಗೆ ಕಾಲೇಜು ಆರಂಭಿಸಲು ಭರದ ಸಿದ್ಧತೆ ನಡೆಯುತ್ತಿದೆ.

ಆರಂಭಿಕ ಹಂತದಲ್ಲಿ ಕಾಲೇಜು ಕಟ್ಟಡ, ಆಸ್ಪತ್ರೆ, ಬಾಲಕ, ಬಾಲಕಿಯರ ಹಾಸ್ಟೆಲ್‌, ಅತಿಥಿ ಗೃಹವನ್ನು 135 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಎರಡನೇ ಹಂತದಲ್ಲಿ 164 ಕೋಟಿ ರು.ಗಳ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಇದನ್ನೇ ಎರಡು ಹಂತದಲ್ಲಿ 99 ಕೋಟಿ ರು. ಹಾಗೂ 44 ಕೋಟಿ ರು. ನೀಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಅದರಲ್ಲೂ 9.77 ಕೋಟಿ ರು. ಬಿಡುಗಡೆ ಮಾಡಿದ್ದು, 2.73 ಕೋಟಿ ರು. ಮಂಜೂರುಗೊಂಡಿದೆ. ಇನ್ನು ದನ, ಕುರಿ, ಕೋಳಿ ಪ್ರಾಣಿಗಳಿಗೆ ಫಾರ್ಮ್‌ ರಚನೆಯಾಗಬೇಕು. ಒಟ್ಟು 247 ಎಕರೆ ವಿಶಾಲ ಪ್ರದೇಶದಲ್ಲಿ ಈ ಪಶು ವೈದ್ಯಕೀಯ ಕಾಲೇಜು ತಲೆ ಎತ್ತಿದೆ.

ಪ್ರಸಕ್ತ ಆಡಳಿತ ಸಿಬ್ಬಂದಿ, ಉಪನ್ಯಾಸಕರ ನೇಮಕಾತಿಗೆ 23 ಕೋಟಿ ರು.ಗಳ ಪ್ರತ್ಯೇಕ ಪ್ರಸ್ತಾವನೆ ಕಳುಹಿಸಿದ್ದು, ಒಪ್ಪಿಗೆ ಹಂತದಲ್ಲಿದೆ. ಇದರಲ್ಲಿ ಪ್ರಯೋಗಾಲಯ, ಒಳಚರಂಡಿ ವ್ಯವಸ್ಥೆ ಇತ್ಯಾದಿ ಮೂಲಸೌಕರ್ಯಗಳಿಗೆ ವಿನಿಯೋಗವಾಗಲಿದೆ. ಈ ಮೊತ್ತ ಬಿಡುಗಡೆಯಾದರೆ ಐದೂವರೆ ವರ್ಷದ ಬಿವಿಎಸ್‌ಸಿ ಮತ್ತು ಎಎಚ್‌ ಕೋರ್ಸ್‌ ಆರಂಭವಾಗಲಿದೆ.

ಪ್ರಾಜೆಕ್ಟ್‌ ವರದಿ ಸಿದ್ಧ:

ಮಂಗಳೂರಿನ ನೆಲ್ಲಿಕಾಯಿ ರಸ್ತೆಯ ಮಾರ್ಕೆಟ್‌ನಲ್ಲಿ ಅತ್ಯಾಧುನಿಕ ಕೃಷಿ ಸಂಕೀರ್ಣ ನಿರ್ಮಾಣವಾಗಿಲ್ಲ. ಕೃಷ್ಯುತ್ಪನ್ನ ಮಾರುಕಟ್ಟೆ ಸಮಿತಿಯು ಕೃಷಿ ಸಂಕೀರ್ಣ ನಿರ್ಮಿಸಲು 35 ಕೋಟಿ ರು.ಗಳ ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿದೆ. ಅಲ್ಲಿಂದ ಆರ್ಥಿಕ ಅನುಮತಿ ಇನ್ನೂ ಬಂದಿಲ್ಲ.

ಹಜ್‌ ಭವನಕ್ಕೆ ಜಾಗ ಸಿಕ್ತು:

ಮಂಗಳೂರಿನಲ್ಲಿ ಬಹುಕಾಲದ ಉದ್ದೇಶಿತ ಹಜ್‌ ಭವನ ಜಾಗದ ಕೊರತೆಯಿಂದ ಕಾರ್ಯಗತಗೊಂಡಿರಲಿಲ್ಲ. ಇದಕ್ಕಾಗಿ ಪ್ರತಿ ವರ್ಷ 10 ಕೋಟಿ ರು.ಗಳನ್ನು ಸರ್ಕಾರ ಕಾದಿರಿಸುತ್ತಿದ್ದು, ಈ ಬಾರಿ ಬಜಪೆಯಲ್ಲಿ ಒಂದೂವರೆ ಎಕರೆ ಜಾಗವನ್ನು ಗುರುತಿಸಲಾಗಿದೆ. ಈ ಜಾಗ ಹಜ್‌ ಸಮಿತಿಗೆ ಹಸ್ತಾಂತರಗೊಳ್ಳಲು ಬಾಕಿ ಇದೆ. ಬಳಿಕವೇ ಹಜ್‌ ಭವನ ನಿರ್ಮಾಣಕ್ಕೆ ಚಾಲನೆ ಸಿಗಲಿದೆ. ಹಲವು ಬಜೆಟ್‌ಗಳಲ್ಲಿ ಪ್ರತಿ ಬಾರಿಯೂ ಹಜ್‌ ಭವನ ನಿರ್ಮಾಣ ಪ್ರಸ್ತಾಪವಾಗುತ್ತಲೇ ಇದೆಯೇ ವಿನಃ ಕಾರ್ಯಗತಗೊಳ್ಳುತ್ತಿರಲಿಲ್ಲ.

ಪ್ರಗತಿಯೇ ಕಂಡಿಲ್ಲ:

ಮಂಗಳೂರು ಬಂದರಿನಿಂದ ಬೆಂಗಳೂರಿಗೆ ಆರ್ಥಿಕ ಕಾರಿಡಾರ್‌ ನಿರ್ಮಾಣ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ ಅದರ ಪ್ರಾಥಮಿಕ ಸಂಗತಿಗಳೇ ಶುರುವಾಗಿಲ್ಲ. ಆರ್ಥಿಕ ಕಾರಿಡಾರ್‌ ರೂಪುಗೊಳ್ಳಬೇಕಾದರೆ ಮೊದಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಾಗಬೇಕು. ಆದರೆ ಹಳೆ ಯೋಜನೆಗಳೇ ಮುಂದುವರಿಯುತ್ತಿದೆಯೇ ವಿನಃ ಹೊಸದಾಗಿ ಕಾರಿಡಾರ್‌ಗೆ ಹಣಕಾಸು ವಿನಿಯೋಗ ನಡೆದಿಲ್ಲ. ಈ ಬಾರಿಯಾದರೂ ಹಣಕಾಸು ನೆರವು ಒದಗಿಸುವಂತೆ ಸಂಸದರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ಹಳೆ ಮಂಗಳೂರು ಬಂದರಿನಲ್ಲಿ ಆಧುನಿಕ ಹಡಗು ನಿರ್ಮಾಣ ಚಟುವಟಿಕೆ ಆರಂಭದ ಬಗ್ಗೆ ಪ್ರಸ್ತಾಪಿಸಿದರೂ ಯಾವುದೇ ಪ್ರಗತಿ ಕಂಡಿಲ್ಲ. ಈಗಾಗಲೇ ಈ ಪ್ರದೇಶದಲ್ಲಿ ಚೌಗಲೆ ಪ್ರೈವೇಟ್‌ ಲಿಮಿಟೆಡ್‌ನ ಖಾಸಗಿ ಶಿಪ್‌ ಯಾರ್ಡ್‌ ನಿರ್ಮಾಣವಾಗುತ್ತಿದೆ. ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಕ್ಕೂ ಇದಕ್ಕೆ ಸಂಬಂಧ ಇಲ್ಲ ಎನ್ನುತ್ತಾರೆ ಬಂದರು ಅಧಿಕಾರಿಗಳು.

ಇದಲ್ಲದೆ ಮಹಾತ್ಮಾಗಾಂಧಿ ನಗರ ವಿಕಾಸ್‌ ಯೋಜನೆಯಡಿ ಮಂಗಳೂರು ಮಹಾನಗರ ಪಾಲಿಕೆಗೆ 200 ಕೋಟಿ ರು. ಘೋಷಣೆಯಾಗಿತ್ತು. ಇದರ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆಯಾದರೂ ಹಣಕಾಸು ಬಿಡುಗಡೆ ಆಗಲಿಲ್ಲ.

ಮೀನುಗಾರರಿಗೆ ಪ್ರತಿದಿನ ಒಂದು ಬೋಟ್‌ಗೆ 2 ಕಿಲೋ ಲೀಟರ್‌ ಡೀಸೆಲ್‌ ಸಬ್ಸಿಡಿ ಬಗ್ಗೆ ಸರ್ಕಾರವೇ ಹೇಳಿತ್ತು. ಆದರೆ ಇದು ಸಮರ್ಪಕವಾಗಿ ಈಡೇರಿಲ್ಲ. ಮೀನುಗಾರ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯದ ಬಗ್ಗೆ ಘೋಷಣೆ ಆಗಿದ್ದರೂ ಕಾರ್ಯಗತವಾಗಿಲ್ಲ. ಮಂಗಳೂರು ಬಂದರಿನ ಮೂರನೇ ಹಂತದ ಕಾಮಗಾರಿಗೆ 49.5 ಕೋಟಿ ರು. ಕಾದಿರಿಸಿದರೂ ಇನ್ನೂ ಅನುಷ್ಠಾನ ಸಾಧ್ಯವಾಗಿಲ್ಲ.

-ಸಮುದ್ರ ಆ್ಯಂಬುಲೆನ್ಸ್‌ ಬಗ್ಗೆ ಘೋಷಣೆಯಾಗಿದ್ದರೂ ಕಾರ್ಯಗತವಾಗಿಲ್ಲ. ಸಮುದ್ರದಲ್ಲಿ ಅನಾರೋಗ್ಯ ಪೀಡಿತರ ನೆರವಿಗೆ ಧಾವಿಸುವ ಆ್ಯಂಬುಲೆನ್ಸ್‌ ಇದು. ಇದಕ್ಕಾಗಿ 3 ಕೋಟಿ ರು. ಘೋಷಿಸಿದರೂ ಅದೀಗ 1 ಕೋಟಿ ರು. ಮರು ನಿಗದಿಯಾಗುತ್ತಿದೆ.

..............

ಈ ವರ್ಷದ ಬಜೆಟ್‌ ನಿರೀಕ್ಷೆ(2025-26)

-ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಬಜೆಟ್‌ನಲ್ಲಿ ಮಂಗಳೂರು-ಉಡುಪಿ ನಡುವೆ ಮೆಟ್ರೋ ರೈಲು ಸಂಚಾರ ಬಗ್ಗೆ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸುವಂತೆ ಪ್ರಸ್ತಾಪಿಸಲಾಗಿತ್ತು. ಈಗ ಕಾರ್ಯಸಾಧ್ಯತೆ ಕುರಿತು ಬೆಂಗಳೂರಿನ ನಮ್ಮ ಮೆಟ್ರೋ ತಾಂತ್ರಿಕ ವರ್ಗಕ್ಕೆ ಪರಿಶೀಲನೆ ನಡೆಸುವಂತೆ ಸರ್ಕಾರ ಸೂಚನೆ ನೀಡಿದೆ. ಈ ಬಗ್ಗೆ ದ.ಕ. ಹಾಗೂ ಉಡುಪಿ ಜಿಲ್ಲಾಡಳಿತಕ್ಕೆ ಪತ್ರವೂ ರವಾನೆಯಾಗಿದೆ. ಆದರೆ ಇದಕ್ಕೆ ಅಗತ್ಯ ಹಣಕಾಸಿನ ನೆರವು ಮೀಸಲಿರಿಸಬೇಕಾಗಿದೆ.

-ದ.ಕ.ಜಿಲ್ಲೆಗೆ ಸರ್ಕಾರಿ ಮೆಡಿಕಲ್‌ ಕಾಲೇಜು ಕೆಲವು ವರ್ಷಗಳ ಬೇಡಿಕೆ. ಈ ಬಾರಿ ಅದನ್ನು ಬಜೆಟ್‌ನಲ್ಲಿ ಸರ್ಕಾರ ಘೋಷಣೆ ಮಾಡುತ್ತದೆ, ಅದು ಕೂಡ ಪುತ್ತೂರಿಗೆ ಮಂಜೂರುಗೊಳ್ಳಬೇಕು ಎಂಬ ಪ್ರಬಲ ಒತ್ತಾಯ ಪುತ್ತೂರಿನ ಶಾಸಕರದ್ದು.

-ಮಂಗಳೂರಿನ ವೆನ್ಲಾಕ್‌ ಸರ್ಕಾರಿ ಆಸ್ಪತ್ರೆಗೆ ಪ್ರಾದೇಶಿಕ ಸ್ಥಾನಮಾನ ಬೇಡಿಕೆ

-ಕರಾವಳಿಯಲ್ಲಿ ಅಡಕೆ ಬೆಳೆಗೆ ತಗಲಿರುವ ಎಲೆಚುಕ್ಕಿ ರೋಗ, ಹಳದಿ ಎಲೆರೋಗ ಹತೋಟಿಗೆ ಕ್ರಮ ಹಾಗೂ ಬೆಳೆಗಾರರಿಗೆ ಆರ್ಥಿಕ ಪರಿಹಾರ.

-ಕರಾವಳಿಯಲ್ಲಿ ಕುದ್ರು ಪ್ರವಾಸೋದ್ಯಮ ಸೇರಿದಂತೆ ಜಲ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು.

-ಬಹುವರ್ಷದ ಬೇಡಿಕೆಯಾದ ಜಿಲ್ಲಾ ರಂಗಮಂದಿರಕ್ಕೆ ನೆರವು, ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣ.

-ಪಿಲಿಕುಳ ಜೈವಿಕ ಉದ್ಯಾನವನ ಪ್ರಾಧಿಕಾರವಾಗಿ ರಚನೆಯಾಗಿದ್ದು, ಇದರ ಅಭಿವೃದ್ಧಿಗೆ ನೆರವು.