ಸಾರಾಂಶ
ನರಗುಂದ: ಇಲ್ಲಿಯ ಹಗೇದಕಟ್ಟಿ ಓಣಿಯ ಯುವತಿಯೋರ್ವಳು ಶಂಕಾಸ್ಪದವಾಗಿ ಮೃತಳಾಗಿದ್ದು, ಆಕೆಯ ಪತಿ, ಅತ್ತೆ -ಮಾವ ಮಾನಸಿಕ ಹಿಂಸೆ ನೀಡಿ ವರದಕ್ಷಿಣೆ ತರುವಂತೆ ದೈಹಿಕ ಹಲ್ಲೆ ನಡೆಸಿ ನೇಣಿಗೆ ಹಾಕಿ ಕೊಲೆ ಮಾಡಿದ್ದಾರೆ ಎಂದು ಯುವತಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪವಿತ್ರಾ ಹರೀಶ ಕಲಕುಟ್ಕರ್ (22) ಮೃತಳಾದ ದುರ್ದೈವಿ.ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಹರೀಶ ಕಲಕುಟ್ಕರ್, ಅತ್ತೆ ಸೋಮವ್ವ, ಮಾವ ಮೂಕಪ್ಪನನ್ನು ನರಗುಂದ ಪೊಲೀಸರು ಬಂಧಿಸಿದ್ದಾರೆ. ಹರೀಶ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಒಂದೂವರೆ ವರ್ಷದ ಹಿಂದೆ ಹರೀಶ ಮತ್ತು ಧಾರವಾಡದ ಪವಿತ್ರಾ ವಿವಾಹ ನಡೆದಿತ್ತು. ಅವರಿಗೆ ಐದು ತಿಂಗಳ ಗಂಡು ಮಗು ಸಹ ಇದೆ.ತಮ್ಮ ಮಗಳಿಗೆ ಮದುವೆ ಆದಾಗಿನಿಂದಲೂ ಪತಿ, ಅತ್ತೆ, ಮಾವ ಕಿರುಕುಳ ನೀಡುತ್ತ ಬಂದಿದ್ದಾರೆ. ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದಾರೆ. ವಿನಾಕಾರಣ ಅನೈತಿಕ ಸಂಬಂಧದ ಆರೋಪ ಹೊರಿಸಿ ಮಾನಸಿಕವಾಗಿಯೂ ಹಿಂಸಿಸುತ್ತಿದ್ದರು. ಇದರಿಂದ ನೊಂದು ಅವಳು ಹಲವಾರು ಬಾರಿ ಧಾರವಾಡಕ್ಕೆ ಬಂದಿದ್ದು, ತಾವು ಹಿರಿಯರೊಂದಿಗೆ ರಾಜಿ ಪಂಚಾಯ್ತಿ ಮಾಡಿಸಿದ್ದರು. ಇತ್ತೀಚಿಗೆ ಐದು ದಿನದ ಹಿಂದಷ್ಟೇ ಅವಳು ಧಾರವಾಡದ ತವರು ಮನೆಯಿಂದ ಪತಿಯ ಮನೆಗೆ ತೆರಳಿದ್ದಳು. ಅಷ್ಟರಲ್ಲಿಯೇ ಮತ್ತೆ ಕಿರುಕುಳ ನೀಡಿ ಅತ್ತೆ, ಮಾವ ನೇಣು ಹಾಕಿ ಹತ್ಯೆ ಮಾಡಿದ್ದಾರೆ ಎಂದು ಪವಿತ್ರಾಳ ತಂದೆ ನಾಗರಾಜ ಕೊಟಬಾಗಿ ಮೂವರ ಮೇಲೆ ನರಗುಂದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮೂಕಪ್ಪ ಕಲಕುಟ್ಕರ ಮಾಜಿ ಸೈನಿಕನಾಗಿದ್ದು, ಅವರ ಮೂವರು ಗಂಡು ಮಕ್ಕಳು ಸೇನೆಯಲ್ಲಿದ್ದಾರೆ.ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ ತನಿಖೆ ಕೈಗೊಂಡಿರುತ್ತಾರೆ.