ಸಾರಾಂಶ
ಚಂಡೀಗಢ: ಅರ್ಜುನ ಪ್ರಶಸ್ತಿ ವಿಜೇತೆ, ಮಾಜಿ ಬಾಕ್ಸಿಂಗ್ ವಿಶ್ವ ಚಾಂಪಿಯನ್ ಸವೀಟಿ ಬೋರಾ ತಮ್ಮ ಪತಿ, ಏಷ್ಯನ್ ಗೇಮ್ಸ್ ಕಂಚು ವಿಜೇತ ತಾರಾ ಕಬಡ್ಡಿ ಪಟು ದೀಪಕ್ ಹೂಡಾ ಹಾಗೂ ಅವರ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದು, ಎಫ್‌ಐಆರ್ ಆಗಿದೆ.
ದೀಪಕ್ ಮತ್ತು ಸವೀಟಿ 2022ರಲ್ಲಿ ವಿವಾಹವಾಗಿದ್ದರು. ಫೆ.25ರಂದು ಸವೀಟಿ, ತಮ್ಮ ಪತಿ ವಿರುದ್ಧ ದೂರು ದಾಖಲಿಸಿದ್ದು, ಲಕ್ಷುರಿ ಕಾರು, ವರದಕ್ಷಿಣೆಗೆ ಬೇಡಿಕೆಯಿಟ್ಟಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೇ ದೈಹಿಕ ಹಲ್ಲೆ ಆರೋಪವೂ ಕೇಳಿ ಬಂದಿದೆ.
ದೀಪಕ್‌ಗೆ ಪೊಲೀಸರು 2-3 ಸಲ ನೋಟಿಸ್ ನೀಡಿದ್ದರೂ ವಿಚಾರಣೆಗೆ ಹಾಜರಾಗಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ದೀಪಕ್ ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿದ್ದು, ‘ಆರೋಗ್ಯದ ಸಮಸ್ಯೆಯಿಂದ ಠಾಣೆಗೆ ಹೋಗುವುದಕ್ಕೆ ಆಗಲಿಲ್ಲ. ಈ ಬಗ್ಗೆ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಲಾಗಿದೆ. ಪತ್ನಿ ಬಗ್ಗೆ ನಕಾರಾತ್ಮಕ ಕಾಮೆಂಟ್ ಮಾಡಲ್ಲ. ಅಕೆಯನ್ನು ಭೇಟಿಯಾಗುವುದಕ್ಕೆ ಅವಕಾಶ ಸಿಗಲಿಲ್ಲ’ ಎಂದಿದ್ದಾರೆ. ಆದರೆ ಸವೀಟಿ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.