ಸಾರಾಂಶ
ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಇಷ್ಟು ದಿನ ಕರೆ ಮಾಡಿ ಒಟಿಪಿ ಕೇಳುವ ಮೂಲಕ ವಂಚಿಸುತ್ತಿದ್ದ ವಂಚಕರ ಜಾಲದ ಬಗ್ಗೆ ಜನರು ಎಚ್ಚೆತ್ತುಕೊಂಡು, ಒಟಿಪಿ ಹೇಳುವುದನ್ನು ಬಂದ್ ಮಾಡಿದ್ದಾರೆ. ಆದರೆ, ಮತ್ತೆ ಒಂದು ಹೆಜ್ಜೆ ಮುಂದೆ ಹೋಗಿರುವ ಈ ವಂಚಕರು ಅಮಾಯಕರ ಸಂಖ್ಯೆಗಳನ್ನು ಹ್ಯಾಕ್ ಮಾಡಿ, ಅವರ ಮೊಬೈಲ್‌ನಲ್ಲಿರುವ ಸಂಖ್ಯೆಗಳು ಹಾಗೂ ವಾಟ್ಸಾಪ್ ಗ್ರೂಪ್‌ಗಳ ಮೂಲಕ ಫೇಕ್ ಸಂದೇಶಗಳನ್ನು ಕಳುಹಿಸಿ ವಂಚಿಸಲು ಶುರು ಮಾಡಿದ್ದಾರೆ.
ಹೇಗೆ ಹ್ಯಾಕ್ ಮಾಡ್ತಾರೆ?:ಮೊದಲಿಗೆ ಒಂದಿಷ್ಟು ನಂಬರ್‌ಗಳಿಗೆ ನಿಮಗೊಂದು ಗಿಫ್ಟ್ ಬಂದಿದೆ, ಬಹುಮಾನ ಬಂದಿದೆ, ಇದರ ಮೇಲೆ ಕ್ಲಿಕ್ ಮಾಡಿ ಎಂದು ಸಂದೇಶ ಕಳುಹಿಸುತ್ತಾರೆ. ಅವರು ಆ ಮೆಸೇಜ್ ಟಚ್ ಮಾಡಿದ ತಕ್ಷಣ ಮೊಬೈಲ್ ಬಳಕೆದಾರರಿಗೆ ಗೊತ್ತಾಗದಂತೆ ಅವರ ಮೊಬೈಲ್‌ನಲ್ಲಿ ಒಂದು ಎಪಿಕೆ ಫೈಲ್ ಡೌನಲೋಡ್ ಮಾಡಿ ಅವರ ಇಡಿ ಮೊಬೈಲ್ ತಮ್ಮ ಹಿಡಿತಕ್ಕೆ ತೆಗೆದುಕೊಳ್ತಾರೆ. ಬಳಿಕ ಅವರ ಮೊಬೈಲ್‌ನಲ್ಲಿರುವ ಸಂಪರ್ಕ ಸಂಖ್ಯೆಗಳು ಹಾಗೂ ಗ್ರೂಪ್‌ಗಳಿಗೆ ಸುಳ್ಳು ಸುಳ್ಳು ಮೆಸೇಜ್ ಕಳಿಸಿ ಅವರು ಅದನ್ನು ಒತ್ತಿದ ತಕ್ಷಣ ಅಮಾಯಕರಿಗೆ ಮೋಸ ಮಾಡುತ್ತಾರೆ.ವಿಜಯಪುರ ಜಿಲ್ಲೆಯಾದ್ಯಂತ ಮೊಬೈಲ್ ಬಳಕೆದಾರರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಎಪಿಕೆ ಫೈಲ್‌ಗಳುಳ್ಳ ಸಂದೇಶಗಳು ಬರುತ್ತಿವೆ. ಯಾವುದೋ ಅಪರಿಚಿತರು ಅಥವಾ ತಮ್ಮ ಪರಿಚಯಸ್ಥರಿಂದರ ಮೊಬೈಲ್ ಸಂಖ್ಯೆಯಿಂದಲೇ ಕೆಲವು ಸಂದೇಶಗಳು ಬರುತ್ತಿವೆ. ಅದನ್ನು ಕ್ಲಿಕ್ ಮಾಡಿದರೆ ಮಾಡಿದವರ ಮೊಬೈಲ್‌ಗಳು ಸಹ ಹ್ಯಾಕ್ ಆಗುತ್ತಿವೆ.ಬರುವ ಸಂದೇಶಗಳೇನು?:
ಪ್ರಿಯ ಗ್ರಾಹಕರೇ, ನಿಮ್ಮ ಎಸ್‌ಬಿಐ ಬ್ಯಾಂಕ್ ಖಾತೆಯ ವಹಿವಾಟನ್ನು ತಡೆಹಿಡಿಯಲಾಗಿದೆ. ಖಾತೆಯಲ್ಲಿ ಆಧಾರ್ ಸಂಖ್ಯೆ ನವೀಕರಿಸದ ಕಾರಣ ಇಂದು ರಾತ್ರಿ ಖಾತೆಯನ್ನು ಶಾಶ್ವತವಾಗಿ ನಿರ್ಬಂಧಿಸಲಾಗುತ್ತದೆ. ದಯವಿಟ್ಟು ಈಗಲೇ ನವೀಕರಿಸಿ ಕೆವೈಸಿ ನವೀಕರಣಕ್ಕಾಗಿ ಎಸ್‌ಬಿಐ ಆಧಾರ್ ನವೀಕರಣ ಅಪ್ಲಿಕೇಶನ್ ಅನ್ನು ಸ್ಥಾಪಿಸಿ. ಎಂದು ಎಪಿಕೆ ಫೈಲ್ ಒಂದನ್ನು ಕಳುಹಿಸಲಾಗುತ್ತಿದೆ. ಅದನ್ನು ಕ್ಲಿಕ್ ಮಾಡಿದರೆ ತಕ್ಷಣವೇ ಎಪಿಕೆ ಫೈಲ್ ಡೌನ್‌ಲೋಡ್ ಆಗಿ ಅವರ ಮೊಬೈಲ್ ಹ್ಯಾಕ್ ಮಾಡಲಾಗುತ್ತಿದೆ. ಇದು ಕೇವಲ ಒಂದು ಉದಾಹರಣೆ ಅಷ್ಟೆ. ಇದರಂತೆ ಕೆನರಾ ಬ್ಯಾಂಕ್‌ನಿಂದ, ಪಿಎಂ ಕಿಸಾನ್ ಇ-ಕೆವೈಸಿ ಮಾಡಿಸಬೇಕು, ಸಿಎಸ್‌ಪಿ ಸರ್ವಿಸ್, ಹೀಗೆ ಬೇರೆ ಬೇರೆ ಸಂಸ್ಥೆಗಳು ಹಾಗೂ ಯೋಜನೆಗಳ ಹೆಸರಿನಲ್ಲಿ ಎಪಿಕೆ ಫೈಲ್ ಕಳಿಸಿ ವಂಚಿಸಲಾಗುತ್ತಿದೆ. ಎಕ್ಸಿಸ್ ಬ್ಯಾಂಕ್‌ನಿಂದಲೂ 10 ಸೆಕೆಂಡ್‌ನಲ್ಲಿ 5ಲಕ್ಷ ಲೋನ್ ಕೊಡುತ್ತೇವೆ ಅಪ್ಲೈ ಮಾಡಿ ಎಂದು ಸಂದೇಶ ಕಳುಹಿಸಲಾಗುತ್ತಿದೆ.ವಿಜಯಪುರದಲ್ಲೂ ಹೆಚ್ಚಾದ ಎಪಿಕೆ ಹಾವಳಿ!ವಿಜಯಪುರದ ಜನತೆ ನಿತ್ಯ ಬೆಳಗ್ಗೆದ್ದು ಮೊಬೈಲ್ ಆನ್ ಮಾಡಿ, ವಾಟ್ಸಾಪ್ ಓಪನ್ ಮಾಡಿದರೆ ಸಾಕು, ಈ ರೀತಿಯಾಗಿ ವಂಚಿಸುವ ಎಪಿಕೆ ಆಪ್ ಗಳ ದಾಂಗುಡಿ ಶುರುವಾಗಿದೆ. ರೈತರ ಗ್ರೂಪ್, ದ್ರಾಕ್ಷಿ ಬೆಳೆಗಾರರ ಗ್ರೂಪ್ ಸೇರಿದಂತೆ ಹಲವು ಅಮಾಯಕರ ಗ್ರೂಪ್ ನಲ್ಲಿ ಇಂತಹ ಮೆಸೇಜ್ ಕಳುಹಿಸುತ್ತಾರೆ. ಅರಿಯದ ಅಮಾಯಕರು ಅಥವಾ ಅವಸರದಲ್ಲಿ ಗೊತ್ತಾಗದೆ ಅದರ ಮೇಲೆ ಬೆರಳಿಟ್ಟರೆ ಸಾಕು, ಮೋಸ ಹೊಗೋದು ಪಕ್ಕಾ. ಆ ಬಳಿಕ ಅವರ ಮೊಬೈಲ್ ನಂಬರ್‌ಗೆ ಲಿಂಕ್ ಆಗಿರುವ ಎಲ್ಲ ಬ್ಯಾಂಕ್ ಖಾತೆಗಳಲ್ಲಿನ ಹಣ ಎಗರಿಸಲಾಗುತ್ತದೆ. ಜೊತೆಗೆ ಅವರ ಗೌಪ್ಯತೆಯ ಅದೆಷ್ಟೋ ಫೋಟೋಗಳ, ವಿಡಿಯೋಗಳನ್ನು, ವಿಚಾರಗಳನ್ನು ಲೀಕ್ ಮಾಡಲಾಗುತ್ತದೆ. ಜಿಲ್ಲಾ ಕ್ರೈಂ ಸ್ಟೇಷನ್‌ನಲ್ಲೂ ಸಹ ನಿತ್ಯ ಒಂದಲ್ಲ ಒಂದು ಇಂತಹದ್ದೇ ಕೇಸ್‌ಗಳು ದಾಖಲಾಗುತ್ತಿವೆ. ಇನ್ನು ಕೆಲಸವರು ಏನು ಮಾಡಬೇಕು ಎಂಬುದು ಗೊತ್ತಾಗದೆ ವಂಚನೆಗೊಳಗಾಗಿ ಸುಮ್ಮನಾಗುತ್ತಿದ್ದಾರೆ.ಗ್ರೂಪ್ ಅಡ್ಮಿನ್‌ಗಳ ಮೇಲೆ ಸೂಕ್ತಕ್ರಮ ಜರುಗಿಸಿ
ನಿತ್ಯ ವಾಟ್ಸಾಪ್ ಗ್ರೂಪ್‌ಗಳಲ್ಲಿ ಈ ರೀತಿ ಸುಳ್ಳು ಸಂದೇಶಗಳನ್ನು ಕಳಿಸುವ ವ್ಯಕ್ತಿಗಳ ಹಾಗೂ ಆ ಗ್ರೂಪ್ ಅಡ್ಮಿನ್‌ಗಳ ಮೇಲೆ ಸೂಕ್ತ ಕ್ರಮ ಜರುಗಿಸುವ ಕೆಲಸ ಆಗಬೇಕಿದೆ. ಈ ಮೂಲಕ ಪೊಲೀಸರು ಗ್ರೂಪ್‌ಗಳಲ್ಲಿ ಫೇಕ್ ಸಂದೇಶದೊಂದಿಗೆ ಎಪಿಕೆ ಫೈಲ್ ಕಳಿಸಿ ವಂಚಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುವುದು ಜನಸಾಮಾನ್ಯರ ಆಗ್ರಹ.ನಿತ್ಯ ಒಂದಲ್ಲ ಒಂದು ಗ್ರೂಪ್‌ಗಳಲ್ಲಿ ಈ ರೀತಿಯಾದ ಫೇಕ್ ಮೆಸೇಜ್‌ಗಳು ಬರುತ್ತಿವೆ. ಅರಿತುಮರೆತು ಅದರ ಮೇಲೆ ಕ್ಲಿಕ್ ಮಾಡಿದರೇ ನಮ್ಮ ಖಾತೆಯನ್ನೇ ಗುಡಿಸಿಗುಂಡಾಂತರ ಮಾಡಿಬಿಡುತ್ತಾರೆ. ವ್ಯಕ್ತಿಯೊಬ್ಬರ ಮೊಬೈಲ್ ನಂಬರ್ ಹ್ಯಾಕ್ ಮಾಡಲಾಗಿದ್ದು, ಅವರ ಸಂಖ್ಯೆಯಿಂದ ಗ್ರೂಪ್‌ಗಳಲ್ಲಿ ಮೆಸೇಜ್ ಬರಲಾರಂಭಿಸಿವೆ. ವಿಜಯಪುರ ಜಿಲ್ಲೆಯ ಜನರು ಎಚ್ಚೆತ್ತುಕೊಳ್ಳಬೇಕಿದೆ.
-ಸಂಜಯ ಪಾಟೀಲ, ಕನಮಡಿ, ಬಿಜೆಪಿ ವಕ್ತಾರ.
ಸುಳ್ಳು ಸಂದೇಶಗಳೊಂದಿಗೆ ಎಪಿಕೆ ಫೈಲ್‌ಗಳನ್ನು ಕಳುಹಿಸಿ, ಅಮಾಯಕನ್ನು ವಂಚಿಸಲಾಗುತ್ತಿದೆ. ತಮ್ಮ ಮೊಬೈಲ್‌ಗಳಿಗೆ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಯಾವುದೇ ಅಪರಿಚಿತರ ಸಂದೇಶ ಹಾಗೂ ಯಾವುದೇ ಎಪಿಕೆ ಫೈಲ್‌ಗಳನ್ನು ಡೌನ್‌ಲೋಡ್ ಮಾಡಬಾರದು. ಈ ಕುರಿತು ಸಾಮಾಜಿಕ ಜಾಲತಾಣಗಳ ಬಳಕೆದಾರರು ಎಚ್ಚರಿಕೆ ವಹಿಸಬೇಕಿದೆ. ಆಕಸ್ಮಿಕವಾಗಿ ಯಾರಾದರೂ ವಂಚನೆಗೊಳಗಾದರೆ ಸೈಬರ್ ಅಪರಾಧ ದೂರು ಸಂಖ್ಯೆ 1930ಗೆ ಕರೆಮಾಡಿ ದೂರು ಸಲ್ಲಿಸಬೇಕು. ಅಥವಾ ತಕ್ಷಣವೇ ಹತ್ತಿರದ ಠಾಣೆಯನ್ನು ಸಂಪರ್ಕಿಸಿ ದೂರು ಸಲ್ಲಿಸಬಹುದಾಗಿದೆ.-ಲಕ್ಷ್ಮಣ ನಿಂಬರಗಿ,
ವಿಜಯಪುರ ಎಸ್ಪಿ.