ಸಾರಾಂಶ
ರೈತರ, ವರ್ತಕರ ಹಾಗೂ ಜನಸಾಮಾನ್ಯರೊಂದಿಗೆ ಸಮಾಲೋಚನೆ ನಡೆಸಿ ಅಭಿಪ್ರಾಯ ಸಂಗ್ರಹಿಸುತ್ತಿದ್ದು, ಎಪಿಎಂಸಿ ಕಾಯ್ದೆಗೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
ಕನ್ನಡಪ್ರಭ ವಾರ್ತೆ ಕಲಬುರಗಿ
ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ-ತಿದ್ದುಪಡಿ ಮತ್ತು ಅಭಿವೃದ್ಧಿ (ತಿದ್ದುಪಡಿ) ವಿಧೇಯಕ-2023 ಕುರಿತು ಸಾಧಕ-ಬಾಧಕಗಳನ್ನು ಅರಿಯಲು ಪರಿಶೀಲನಾ ಸಮಿತಿಯನ್ನು ರೂಪಿಸಿದ್ದು, ಸಮಿತಿ ಸದಸ್ಯರು ಎಲ್ಲೆಡೆ ಸಂಚರಿಸಿ ರೈತರ, ವರ್ತಕರ ಹಾಗೂ ಜನಸಾಮಾನ್ಯರೊಂದಿಗೆ ಸಮಾಲೋಚನೆ ನಡೆಸಿ ಅಭಿಪ್ರಾಯ ಸಂಗ್ರಹಿಸುತ್ತಿದ್ದು, ಎಪಿಎಂಸಿ ಕಾಯ್ದೆಗೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದರು.ಮಂಗಳವಾರ ಕಲಬುರಗಿ ಜಿಲ್ಲೆಯ ಎಪಿಎಂಸಿ ಮಾರುಕಟ್ಟೆ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದ ವಿಧಾನ ಸಭೆಯಿಂದ ಅಂಗೀಕೃತವಾದ ರೂಪದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ದಿ) (ತಿದ್ದುಪಡಿ) ವಿಧೇಯಕ 2023ನ್ನು ಸಮಗ್ರವಾಗಿ ಪರಿಶೀಲಿಸಲು ಪರಿಶೀಲನಾ ಸಮಿತಿ ಆಗಮಿಸಿದೆ ಎಂದು ಹೇಳಿದರು.
ನಮ್ಮ ಎಪಿಎಂಸಿ ವತಿಯಿಂದ ಕೆಲವು ತೂಕದ ಹಿಡಿತಗಳನ್ನ ಎಲ್ಲಾ ಎ.ಪಿ.ಎಂ.ಸಿ. ಆಳವಡಿಸಿ ರೈತರಿಗೆ ಮುಕ್ತವಾಗಿ ತೂಕವನ್ನ ಮಾಡಿಸಿಕೊಡುವಂತಹ ವ್ಯವಸ್ಥೆಯನ್ನ ಮಾಡಿದ್ದೇವೆ. ಕಾರ್ಖಾನೆಯಲ್ಲಿ ತೂಕದ ಮೋಸ ಆಗಕೂಡದು, ಇಲ್ಲಿ ತೂಕದ ಮಷೀನ್‍ನಿಂದ ಮಾಡಿಕೊಂಡು ಹೋದಮೇಲೆ ಅವರಿಗೆ ವ್ಯತ್ಯಾಸ ಗೊತ್ತಾಗುತ್ತದೆ. ಅಲ್ಲಿ ಅವರು ಮರುಪರೀಶಿಲನೆ ಮಾಡಿದರೆ. ಅವರಿಗೆ ಗೊತ್ತಾಗಿ ಅವರು ಕಾರ್ಖಾನೆಯ ಮೇಲೆ ದೂರು ಕೊಟ್ಟರೆ ನಾವು ಖಂಡಿತ ಅವರ ಮೇಲೆ ಈ ವರ್ಷದ ಹಂಗಾಮಿ ಲೈಸನ್ ಏನಿದೆ ಅದನ್ನು ರದ್ದು ಮಾಡತಕ್ಕಂತಹ ಅಧಿಕಾರ ಇದೆ ಎಂದರು.ನಾನು ಈಗಾಗಲೆ ಎರಡು ಸಭೆಗಳನ್ನು ಮಾಡಿ ಆದೇಶ ಮಾಡಿದ್ದೇನೆ. ಸಿಧಂಗಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಭೇಟಿ ನೀಡಿದ್ದಾಗ ಅಲ್ಲಿ ತೂಕದ ಯಂತ್ರವನ್ನು ಸುಸರ್ಜಿತವಾಗಿ ಇಟ್ಟಿರಲಿಲ್ಲ. ನಾವು ಈಗಾಗಲೇ ಕಾರ್ಯದರ್ಶಿಯನ್ನು ಅಮಾನತು ಮಾಡಿ ಬಂದಿದ್ದೇವೆ ಎಂದರು.
ಕಬ್ಬು ಬೆಳೆಗಾರರಿಗೆ ಅನೇಕ ರೀತಿಯಲ್ಲಿ ಅಳತೆ ಯಂತ್ರದಲ್ಲಿ ಮೋಸ ಹೋಗುತ್ತಿದ್ದಾರೆ. ಇದನ್ನು ಕ್ರಮಬದ್ಧವಾಗಿ ಪರಿಶೀಲಿಸಿ ಕ್ರಮಕೈಗೊಳ್ಳಬೇಕೆಂದು ಪತ್ರಕರ್ತರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಯಾವುದೇ ಅಳತೆ ಮತ್ತು ತೂಕ ಮಾಪನ ಇಲಾಖೆ ನಾವು ಸೇರಿಕೊಂಡು ಪರಿಶೀಲನೆ ಮಾಡುತ್ತೇವೆ ಎಂದರು. ಎ.ಪಿ.ಎಂ.ಸಿ.ಗೆ ಅನೇಕ ರಸ್ತೆ ಗಳಿಂದ ಜನರು ಬರುತ್ತಾರೆ ಎರಡು ಪ್ರಮುಖ ದ್ವಾರ ನಿರ್ಮಿಸಬೇಕು ಎಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಅಲ್ಲಮಪ್ರಭು ಪಾಟೀಲ್, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಜಗದೇವ ಗುತ್ತೇದಾರ ಇದ್ದರು. ಇದೇ ಸಂದರ್ಭದಲ್ಲಿ ವರ್ತಕರು, ಹಮಾಲರು, ರೈತರು ಅಹವಾಲುಗಳನ್ನು ಸಲ್ಲಿಸಿದ್ದರು.