ಸಾರಾಂಶ
ಕಾರಟಗಿ: ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾಡಿದ ಎಡವಟ್ಟಿನಿಂದ ಪೀಠೋಪಕರಣ ಜಪ್ತಿ ಮಾಡಿಸಿಕೊಳ್ಳುವ ಪರಿಸ್ಥಿತಿಗೆ ಕಾರಟಗಿ ವಿಶೇಷ ಎಪಿಎಂಸಿ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪಟ್ಟಣದ ಗ್ರಾಮ ದೇವತೆ ದ್ಯಾವಮ್ಮದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು.ತಮ್ಮ ಕನಸಿನ ಕೂಸು ರೈಸ್ ಟೆಕ್ ಪಾರ್ಕ್‌ನ ಸಂಬಂಧ ಭೂಮಿ ಕೊಟ್ಟ ರೈತರು ನ್ಯಾಯಾಲಯದ ಮೆಟ್ಟಿಲು ಏರಿ ವಿಶೇಷ ಎಪಿಎಂಸಿಯ ಪೀಠೋಪಕರಣ ಜಪ್ತಿ ಮಾಡಿದ ಪ್ರಕರಣಕ್ಕೆ ಸಂಬಂಧ ಸಚಿವರು ಪ್ರತಿಕ್ರಿಯಿಸಿದರು.
ಮಹತ್ವಕಾಂಕ್ಷಿ ರೈಸ್ ಟೆಕ್ನಾಲಜಿ ಪಾರ್ಕ್ ನಿರ್ಮಾಣಕ್ಕೆ ಅಂದು ರೈತರೇ ಸ್ವಇಚ್ಛೆಯಿಂದ ಭೂಮಿ ನೀಡಿದ್ದಾರೆ. ನಾವು ಅವರಿಂದ ಭೂಮಿ ವಶಪಡಿಸಿಕೊಂಡಿಲ್ಲ. ಒಂದೇ ಬಾರಿಗೆ ಹಣ ಸಂದಾಯ ಮಾಡುವಂತೆ ರೈತರು ಬಾಂಡ್ ಬರೆದುಕೊಟ್ಟು ಸರ್ಕಾರಕ್ಕೆ ಭೂಮಿ ನೀಡಿದ್ದಾರೆ. ಅಂತೆಯೇ ರೈತರಿಗೆ ಹಣ ಸಂದಾಯ ಮಾಡಲಾಗಿದೆ. ಇನ್ನು ಹೆಚ್ಚಿನ ಪರಿಹಾರ ನಾವು ಕೇಳುವುದಿಲ್ಲ ಎಂದು ಸ್ವತಃ ರೈತರೇ ಬಾಂಡ್ ಬರೆದುಕೊಟ್ಟಿದ್ದಾರೆ ಎಂದ ಸಚಿವ ತಂಗಡಗಿ, ರೈತರು ಬರೆದುಕೊಟ್ಟ ಬಾಂಡ್‌ಗಳು ಹಾಗೂ ದಾಖಲೆಗಳನ್ನು ಬಿಜೆಪಿ ಸರ್ಕಾರ ಅಂದು ಸಲ್ಲಿಕೆ ಮಾಡಿದ್ದರೆ ಇಂದು ಈ ಸಮಸ್ಯೆ ಬರುತ್ತಿರಲಿಲ್ಲ. ಈಗ ನಾನು ಎಪಿಎಂಸಿ ನಿರ್ದೇಶಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜತೆಗೆ ಚರ್ಚಿಸಿ ವಾಸ್ತವಿಕತೆ ತಿಳಿದುಕೊಂಡು ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು.ಸಂತ್ರಸ್ತರಿಗೆ ನಿವೇಶನ: ಪಟ್ಟಣದ ಗ್ರಾಮ ದೇವತೆ ದ್ಯಾವಮ್ಮದೇವಿ ದೇವಸ್ಥಾನದ ಬಳಿಯ ನಿವಾಸಿ ಹಾಗೂ ಸುಂಕಲ ವೀರಪ್ಪನ ಪುಷ್ಕರಣಿ ಬಳಿಯ ನಿವಾಸಿಗಳಿಗೆ ಹೊರವಲಯದ ದೇವಿ ಕ್ಯಾಂಪ್‌ನಲ್ಲಿ ನಿವೇಶನ ನೀಡಲಾಗುವುದು.
ಎಲ್ಲ ಕುಟುಂಬದವರು ಕೂಡಲೇ ಮನೆ ಖಾಲಿ ಮಾಡಿ, ದೇವಸ್ಥಾನ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.ಪಟ್ಟಣದ ಸರ್ವ ಸಮಾಜದವರು ದೇವಸ್ಥಾನ ಅಭಿವೃದ್ಧಿಪಡಿಸುವಂತೆ ಮನವಿ ಸಲ್ಲಿಸಿದ್ದಾರೆ. ಹೀಗಾಗಿ ದೇವಸ್ಥಾನ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಬೇಗ ನಿಮ್ಮ ಮನೆಗಳನ್ನು ಖಾಲಿ ಮಾಡಿದಲ್ಲಿ ದೇವಸ್ಥಾನ ನಿರ್ಮಾಣದ ಕಾರ್ಯಕ್ಕೆ ವೇಗ ಸಿಗಲಿದೆ. ತಕ್ಷಣ ಮನೆ ಖಾಲಿ ಮಾಡಿ ಎಂದರೆ ಹೇಗೆ ಒಂದು ತಿಂಗಳ ಕಾಲಾವಕಾಶ ನೀಡುವಂತೆ ನಿವಾಸಿಗಳು ಇದೇ ವೇಳೆ ಮನವಿ ಮಾಡಿಕೊಂಡರು.
ಇದಕ್ಕೆ ಸಚಿವ ತಂಗಡಗಿ ಸಕಾರಾತ್ಮಕವಾಗಿ ಸ್ಪಂದಿಸಿದರು. ಸ್ಥಳದಲ್ಲಿದ್ದ ತಹಸೀಲ್ದಾರ್ ಎಂ. ಕುಮಾರಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಸುರೇಶ್ ಹಾಗೂ ಪಿಐ ಪ್ರದೀಪ್ ಎಸ್.ಭಿಸೆ ಅವರಿಗೆ ದೇವಿಕ್ಯಾಂಪ್‌ನ ಸೀಮೆಯಲ್ಲಿ ಸರ್ವೇ ನಡೆಸಿ ಕೋಟೆ ಪ್ರದೇಶದ ೨೭ಮತ್ತು ಪುಷ್ಕರಣಿ ಪ್ರದೇಶದಿಂದ ತೆರವುಗೊಂಡ ೯ ಕುಟುಂಬಗಳಿಗೆ ನಿವೇಶನ ಗುರುತಿಸಿ ಕೊಡುವಂತೆ ಸೂಚಿಸಿದರು.ಇನ್ನು ದೇವಿಕ್ಯಾಂಪ್ ಪ್ರದೇಶದಲ್ಲಿ ಕೆಲವು ಬಲಾಡ್ಯರು ಅಕ್ರಮವಾಗಿ ನಿವೇಶನ ಅಕ್ರಮಿಸಿಕೊಂಡು ಬಡವರಿಗೆ ಬಾಡಿಗೆ ನೀಡುತ್ತಿದ್ದಾರೆ. ಅಂಥ ಬಡ ಕುಟುಂಬಗಳ ಪಟ್ಟಿ ತಯಾರಿಸಿ,ಆ ಸ್ಥಳದಲ್ಲಿ ಯಾರು ವಾಸ ಮಾಡುತ್ತಿದ್ದಾರೋ ಅವರ ಹೆಸರಿನಲ್ಲೇ ಹಕ್ಕು ಪತ್ರ ನೀಡಲು ಅಧಿಕಾರಿಗಳಿಗೆ ಖಡಕ್ಕಾಗಿ ಆದೇಶಿಸಿದರು. ಈ ವೇಳೆ ಕಾರಟಗಿ ಕಾಂಗ್ರೆಸ್ ಮುಖಂಡರು, ಪುರಸಭೆ ಸದಸ್ಯರು ಇದ್ದರು.
ತಂಗಡಗಿ ಮೌನಕ್ಕೆ ಪ್ರತಿಧ್ವನಿ: ಗ್ರಾಮ ದೇವತೆ ದೇವಸ್ಥಾನಕ್ಕೆ ಸಂಬಂಧಿಸಿದ ಭೂಮಿಯನ್ನು ಕೆಲವರು ರೈಲ್ವೇ ಇಲಾಖೆಗೆ ಮಾರಾಟ ಮಾಡಿದ್ದು, ಅದರಿಂದ ಬಹುಕೋಟಿ ಪರಿಹಾರದ ರೂಪದಲ್ಲಿ ಬಂದಿದೆ. ಈ ಪರಿಹಾರದ ಹಣ ಪಾರುಪತ್ಯದ ಕುರಿತು ಸಚಿವರು ಸ್ಥಳದಲ್ಲಿದ್ದರೂ ಏನನ್ನೂ ಹೇಳಲಿಲ್ಲ. ಕೆಲ ಕಾಂಗ್ರೆಸ್‌ನ ಮುಖಂಡರು ಈ ಬಹುಕೋಟಿ ಪರಿಹಾರದ ಹಣ ಬಿಡುಗಡೆಯಾಗಿದ್ದು, ಮುಚ್ಚಿ ಹಾಕುವ ಪ್ರಯತ್ನಕ್ಕೆ ನಡೆಸಿದ್ದು, ಈಗ ವಿರೋಧ ವ್ಯಕ್ತವಾಗಿದ್ದು, ಸಚಿವರು ಈ ಕುರಿತು ಯಾಕೆ ಮಾತನಾಡುತ್ತಿಲ್ಲ ಎನ್ನುವ ಪ್ರಶ್ನೆ ಇಂದು ಪುನಃ ಪ್ರತಿಧ್ವನಿಸಿತು. ಇನ್ನೂ ಕೆಲವರು ಈಗಾಗಲೇ ದಾಖಲೆಗಳಿಗೆ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿಯಾಗಿ ಗ್ರಾಮ ದೇವತೆ ದೇವಸ್ಥಾನದ ಹಣ ಉಳಿಸಿ ಎಂದು ಮನವಿ ಮಾಡಿದ್ದಾರೆ.