ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಕಳೆದ 40 ವರ್ಷಗಳ ರಾಜಕೀಯ ಜೀವನದಲ್ಲಿ ಒಂದು ಕಪ್ಪುಚುಕ್ಕೆ ಇಲ್ಲದೇ ಮಾದರಿಯಾಗಿ ಬೆಳೆದು ನಿಂತಿದ್ದಾರೆ. ಅವರ ಬಗ್ಗೆ ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಏಕವಚನದಲ್ಲಿ ಮಾತನಾಡುವ ಮೂಲಕ ಇಲ್ಲದ ಆರೋಪಗಳನ್ನು ಮಾಡುವುದು ಸರಿಯಲ್ಲ. ಇದು ಹೀಗೆ ಮುಂದುವರಿದರೇ ಕ್ಷೇತ್ರದ ಜನರೇ ಉತ್ತರ ಕೊಡುತ್ತಾರೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಹರಿಹಾಯ್ದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕು ಬ್ಲಾಕ್ ಕಾಂಗ್ರೆಸ್ ಘಟಕದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಾವರಿ, ಮುಖ್ಯರಸ್ತೆಗಳು, ಗ್ರಾಮೀಣ ರಸ್ತೆಗಳು, ಕೆರೆ ಹಾಗೂ ಕಾಲುವೆಗಳ ನಿರ್ಮಾಣ, ಶಾಲಾ ಕಾಲೇಜುಗಳು ಸೇರಿ ಪಟ್ಟಣ ಹಾಗೂ ಗ್ರಾಮೀಣ ಜನರಿಗೆ ಕುಡಿಯುವ ನೀರು ಒದಗಿಸಿದ್ದಾರೆ. ಅಲ್ಲದೇ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಟೊಂಕ ಕಟ್ಟಿನಿಂತಿದ್ದು, ನೀವು 5 ವರ್ಷದಲ್ಲಿ ಕೇವಲ ಸಿಸಿ ರಸ್ತೆಗಳನ್ನು ಮಾಡಿದರೇ ಅದು ಅಭಿವೃದ್ಧಿನಾ ಎಂದು ಪ್ರಶ್ನಿಸಿದರು.ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳನ್ನು ಹಾಗೂ ಅಧಿಕಾರನ್ನು ಮೆಚ್ಚಿ ಜನರು ಕೊಂಡಾಡುತ್ತಿದ್ದಾರೆ. ಆದರೆ, ನಿಮ್ಮ ಅಧಿಕಾರದಲ್ಲಿ ನಿರ್ಮಿಸಲಾದ ಸಿಸಿ ರಸ್ತೆಗಳನ್ನು ಸಂಪೂರ್ಣ ಕಳಪೆಯಾಗಿ ನಿರ್ಮಿಸಿದ್ದರಿಂದ ಇಂದು ಎಲ್ಲ ರಸ್ತೆಗಳು ಒಡೆದು ಹಾಳಾಗಿ ಹೋಗಿವೆ ಎಂದು ರಸ್ತೆ ಒಡೆದು ಬಿರುಕು ಬಿಟ್ಟ ಫೋಟೋಗಳನ್ನು ಪ್ರದರ್ಶಿಸಿದರು.ಕಳೆದ ಒಂದೂವರೆ ವರ್ಷದ ನಮ್ಮ ಆಡಳಿತದಲ್ಲಿ ಲೋಕೋಪಯೋಗಿ ಇಲಾಖೆಯಿಂದ ವಿವಿಧ ಕಾಮಗಾರಿಗಳಿಗೆ ₹115.8 ಕೋಟಿ, ಸಣ್ಣ ನಿರಾವರಿ ಇಲಾಖೆಯಿಂದ ₹15.75 ಕೋಟಿ, ಮುದ್ದೇಬಿಹಾಳ ತಾಳಿಕೋಟಿ, ನಾಲತವಾಡಗಳಲ್ಲಿ ಅಮೃತ್ ಯೋಜನೆಯಡಿ ಹಾಗೂ ಒಳಚರಂಡಿ ನಿರ್ಮಾಣಕ್ಕಾಗಿ ₹132.8 ಕೋಟಿ, ಪ್ರೌಢಶಾಲೆಗಳ ಅಭಿವೃದ್ಧಿಗಾಗಿ ₹1 ಕೋಟಿ, ಸಿಎಂ ವಿಶೇಷ ಅನುದಾನದಡಿಯಲ್ಲಿ ₹25 ಕೋಟಿ, ತಾಳಿಕೋಟಿ ಪಟ್ಟಣದ ರಾಜೀವ ಗಾಂಧಿಜಿ 3 ವಸತಿ ಯೋಜನೆಯಡಿ ₹49 ಕೋಟಿ, ತಾಳಿಕೋಟಿ ತಾಲೂಕಿನ ಮನಗೂಳಿ ರಸ್ತೆ ಮಾರ್ಗದ ಸೇತುವೆ ನಿರ್ಮಾಣಕ್ಕೆ ₹28 ಕೋಟಿ, ತಾಳಿಕೋಟಿ ಮತ್ತು ನಾಲತವಾಡದಲ್ಲಿ ಹೊಸ ರೈತ ಸಂಪರ್ಕ ಕೇಂದ್ರಗಳಿಗೆ ಸುಮಾರು ₹4 ಕೋಟಿ, ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿಯಲ್ಲಿ ರಸ್ತೆ ನಿರ್ಮಾಣಕ್ಕಾಗಿ ಸುಮಾರು ₹50 ಕೋಟಿ, ಸಣ್ಣ ನಿರಾವರಿ ಇಲಾಖೆ ಎಸ್ಸಿ, ಎಸ್ಟಿ ಸಮುದಾಯದವರಿಗೆ ಬೋರ್‌ವೆಲ್ ಕೊರೆಯಲು ₹1.12 ಕೋಟಿ ಸೇರಿದಂತೆ ಒಟ್ಟು ₹350 ಕೋಟಿ ಅನುದಾನದಲ್ಲಿ ₹240 ಕೋಟಿ ಅದರಲ್ಲಿ ₹110 ಕೋಟಿ ಈ ಹಿಂದಿನ ಸರ್ಕಾರದಲ್ಲಿ ಬಾಕಿ ಉಳಿಸಿಕೊಂಡಿರುವ ಕಾಮಗಾರಿಗಳಿಗೆ ಕಾರ್ಯಕ್ರಮ ಕೈಗೊಳ್ಳುವುದರೊಂದಿಗೆ ನುಡಿದಂತೆ ನಡೆಯುತ್ತಿದ್ದೇವೆ. ಅಭಿವೃದ್ಧಿ ಪರ ಆಡಳಿತ ನೀಡುವ ಮೂಲಕ ಮಾದರಿ ಮತಕ್ಷೇತ್ರ ಮಾಡುವುದೇ ನಮ್ಮ ಗುರಿಯಾಗಿದೆ ಎಂದರು.ಮುಖಂಡ ವೈ.ಎಚ್.ವಿಜಯಕರ ಮಾತನಾಡಿ, ಈ ಭಾಗದಲ್ಲಿ ಪ್ರತಿಷ್ಠಿತ ದೇಶಮುಖ ಹಾಗೂ ನಾಡಗೌಡ ಕುಟುಂಬಗಳು ಸ್ವಂತ ಭೂಮಿಯನ್ನು ಬಡವರಿಗೆ ದಾನ ಮಾಡಿದ್ದಲ್ಲದೇ ಸ್ವಚ್ಛ ರಾಜಕಾರಣಕ್ಕೆ ಹೆಸರಾಗಿದ್ದಾರೆ. ಯಾವುದೇ ಕಾರಣಕ್ಕೂ ಮತ್ತೊಬ್ಬರನ್ನು ತೇಜೋವಧೆ ಮಾಡುವ ಕೆಲಸಕ್ಕೆ ಕೈಹಾಕಿಲ್ಲ. ನಡಹಳ್ಳಿಯವರು ಅಭಿವೃದ್ಧಿ ಮಾಡಿದ್ದರೇ ಯಾಕೆ ಸೋತರು ಎಂಬುವುದನ್ನು ಅರ್ಥೈಸಿಕೊಳ್ಳಬೇಕು ಎಂದು ತಿಳಿಸಿದರು.ಗೋಷ್ಠಿಯಲ್ಲಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಹಿರಿಯ ಮುಖಂಡ ಅಬ್ದುಲಗಫೂರ ಮಕಾಂದಾರ, ತಾಲೂಕು ವೀರಶೈವ ಲಿಂಗಾಯತಿ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಬಾಪುಗೌಡ ಪಿರಾಪೂರ, ಸಂಗಮೇಶ ನಾಲತವಾಡ, ಯಲ್ಲಪ್ಪ ಚಲವಾದಿ, ರಾಜೇಂದ್ರಗೌಡ ರಾಯನಗೌಡ, ಕಾಮರಾಜ ಬಿರಾದಾರ, ಶ್ರೀಕಾಂತ ಚಲವಾದಿ, ತಿಪ್ಪಣ್ಣ ದೊಡಮನಿ ಸೇರಿ ಇತರೆ ಮುಖಂಡರು ಹಾಜರಿದ್ದರು.
ವಿರೋಧ ಪಕ್ಷವಾಗಿ ಕ್ಷೇತ್ರದಲ್ಲಿ ಅಭಿವೃದ್ಧಿಗಾಗಲಿ ಅಥವಾ ಜನಪರವಾಗಿ ಹೋರಾಡುವ ಸಂಪೂರ್ಣ ಅಧಿಕಾರವಿದೆ. ಅದನ್ನು ಬಿಟ್ಟು ಕಾಂಗ್ರೆಸ್ ಪುಡಾರಿಗಳು ಕಮಿಷನ್ ಏಜೆಂಟರಂತೆ ವರ್ತಿಸುತ್ತಿದ್ದಾರೆಂದರೇ ನಾವು ಸಹಿಸುವುದಿಲ್ಲ. ಈ ಹೇಳಿಕೆಯನ್ನು ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ. ಒಬ್ಬ ಹಿರಿಯ ಅನುಭವಿ ರಾಜಕಾರಿಣಿಗಳಿಗೆ ಏಕ ವಚನ ಬಳಸಿ ಮಾತನಾಡುವುದು ನಿಮ್ಮ ಘನತೆಗೆ ಶೋಭೆ ತರುವಂತಹದ್ದಲ್ಲ. ಹೇಳಿಕೆ ನೀಡುವಾಗ ಯೋಚನೆ ಮಾಡಿ.-ಗುರು ತಾರನಾಳ,
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು.