ಒಂದು ಕಲ್ಲು ಶಿಲೆಯಾಗಿ ರಚನೆಯಾಗಬೇಕಾದರೆ ನೂರಾರು ಪೆಟ್ಟು ತಿನ್ನಬೇಕಾಗುತ್ತದೆ. ಹಾಗೆಯೇ ಸಾಕಷ್ಟು ಶೋಷಣೆ ಅನುಭವಿಸಿದ ಹಡಪದ ಅಪ್ಪಣ್ಣನವರು ಸಮಾಜದ ಅಂಕು ಡೊಂಕುಗಳನ್ನು ತಿದ್ದುವಂತಹ ಹಲವಾರು ವಚನಗಳನ್ನು ನಮಗೆ ಕೊಡುಗೆಯಾಗಿ ನೀಡಿದ್ದಾರೆ.

ಶಿವಶರಣ ಶ್ರೀ ಹಡಪದ ಅಪ್ಪಣ್ಣನವರ ೮೯೨ನೇ ಜಯಂತ್ಯುತ್ಸವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಮುಂಡಗೋಡ

ಒಂದು ಕಲ್ಲು ಶಿಲೆಯಾಗಿ ರಚನೆಯಾಗಬೇಕಾದರೆ ನೂರಾರು ಪೆಟ್ಟು ತಿನ್ನಬೇಕಾಗುತ್ತದೆ. ಹಾಗೆಯೇ ಸಾಕಷ್ಟು ಶೋಷಣೆ ಅನುಭವಿಸಿದ ಹಡಪದ ಅಪ್ಪಣ್ಣನವರು ಸಮಾಜದ ಅಂಕು ಡೊಂಕುಗಳನ್ನು ತಿದ್ದುವಂತಹ ಹಲವಾರು ವಚನಗಳನ್ನು ನಮಗೆ ಕೊಡುಗೆಯಾಗಿ ನೀಡಿದ್ದಾರೆ ಎಂದು ತಹಸೀಲ್ದಾರ ಎಸ್.ಎ. ಪ್ರಸಾದ ಹೇಳಿದರು.

ಬುಧವಾರ ಪಟ್ಟಣದ ಮಿನಿವಿಧಾನಸೌಧದ ಸಭಾಂಗಣದಲ್ಲಿ ಶಿವಶರಣ ಶ್ರೀ ಹಡಪದ ಅಪ್ಪಣ್ಣನವರ ೮೯೨ನೇ ಜಯಂತ್ಯುತ್ಸವದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬಳಿಕ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

೧೨ನೇ ಶತಮಾನದಲ್ಲಿ ಉನ್ನತ ಹುದ್ದೆಯಾದ ಅನುಭವ ಮಂಟಪದ ಪ್ರಧಾನ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣರಂತಹ ಮಹಾನ್‌ ವ್ಯಕ್ತಿಗಳ ವಚನಗಳ ಬಗ್ಗೆ ಅರ್ಥ ಮಾಡಿಕೊಂಡಾಗ ಅರಿವು ಮೂಡುತ್ತದೆ. ವಿವೇಚನ ಶಕ್ತಿ ಪ್ರತಿಯೊಬ್ಬರಿಗೂ ಇರುತ್ತದೆ. ಸರಿ ತಪ್ಪು ಎಂಬುದರ ಬಗ್ಗೆ ನಮಗೆ ಅರಿವು ಇರಬೇಕು. ಅದು ಅನುಭವದಿಂದ ಮಾತ್ರ ಬರಲು ಸಾಧ್ಯ ಎಂದ ಅವರು, ಇಂದು ಯಾರು ಕೂಡ ಹಿಂದುಳಿದಿಲ್ಲ. ಕ್ಷೌರಿಕ ವೃತ್ತಿ ಸೇರಿದಂತೆ ಎಲ್ಲ ಕೆಲಸಕ್ಕೂ ಅದರದ್ದೇ ಆದ ಗೌರವವಿದೆ ಎಂದರು.

ಪಿ. ನಾಗೇಂದ್ರ ಉಪನ್ಯಾಸ ನೀಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಸಂತ ಕೊಣಸಾಲಿ, ಬಿಜೆಪಿ ತಾಲೂಕಾಧ್ಯಕ್ಷ ಮಂಜುನಾಥ ಪಾಟೀಲ, ಬಸವರಾಜ ಸಂಗಮೇಶ್ವರ, ಹಡಪದ ಸಮಾಜದ ಕಾರ್ಯದರ್ಶಿ ಮಹೇಶ ಹಡಪದ ಮಾತನಾಡಿದರು.

ಹಡಪದ ಸಮಾಜದ ಜಿಲ್ಲಾಧ್ಯಕ್ಷ ಶಂಕ್ರಪ್ಪ ಹುಲಗೂರ, ತಾಲೂಕಾಧ್ಯಕ್ಷ ಮಂಜುನಾಥ ಹಡಪದ, ಮಾರ್ಕಡಪ್ಪ ಕ್ಷೌರದ, ಬಸವರಾಜ ಅಂಗಡಿ, ಸಹಾಯಕ ಕೃಷಿ ನಿರ್ದೇಶಕ ಕೆ.ಎನ್. ಮಹಾರಡ್ಡಿ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕೃಷ್ಣ ಕುಳ್ಳೂರ, ದೈಹಿಕ ಶಿಕ್ಷಣ ಪರಿವೀಕ್ಷಕ ಅಶೋಕ ಶಂಕ್ರಿಕೊಪ್ಪ, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಶಾರದಾ ರಾಠೋಡ ಮುಂತಾದವರಿದ್ದರು. ಈಶ್ವರ ರಾಥೋಡ ನಿರೂಪಿಸಿದರು.