ಜೀವನದುದ್ದಕ್ಕೂ ಏನೂ ಮಾಡಿಕೊಳ್ಳದೆ, ಸರ್ವವೂ ಬಸವಪ್ರಿಯನಿಗೆ ಅರ್ಪಿತ ಎಂಬ ಹಡಪದ ಅಪ್ಪಣ್ಣನ ಆದರ್ಶಪಾಲನೆ ಇಂದಿಗಲ್ಲ, ಎಲ್ಲ ಕಾಲಕ್ಕೂ ಪ್ರಸ್ತುತ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಜೀವನದುದ್ದಕ್ಕೂ ಏನೂ ಮಾಡಿಕೊಳ್ಳದೆ, ಸರ್ವವೂ ಬಸವಪ್ರಿಯನಿಗೆ ಅರ್ಪಿತ ಎಂಬ ಹಡಪದ ಅಪ್ಪಣ್ಣನ ಆದರ್ಶಪಾಲನೆ ಇಂದಿಗಲ್ಲ, ಎಲ್ಲ ಕಾಲಕ್ಕೂ ಪ್ರಸ್ತುತ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.ನಗರದ ಮಲೆನಾಡು ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 12ನೇ ಶತಮಾನದ ವಚನ ಚಳವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಹಡಪದ ಅಪ್ಪಣ್ಣನವರು ಕೂಡ ಒಬ್ಬರು. ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿದ್ದ ಹಡಪದ ಅಪ್ಪಣ್ಣನವರು ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದು ಹೆಸರಾದ ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿ ಅವರಿಗೆ ಯಾವುದೇ ರೀತಿಯ ಮುಜುಗರವಾಗದಂತೆ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಹೊಂದಿದ್ದಾರೆ.
ಬಸವಣ್ಣನವರು ಅನುಭವ ಮಂಟಪಕ್ಕೆ ಯಾರೇ ಬಂದರೂ ಮೊದಲು ಹಡಪದ ಅಪ್ಪಣ್ಣನವರನ್ನು ನೋಡಿಕೊಂಡು ಬರಬೇಕೆಂಬ ನಿಯಮವನ್ನೇ ಮಾಡಿದ್ದರೆಂಬ ಪ್ರತೀತಿ ಇದೆ. ಹಡಪದ ಅಪ್ಪಣ್ಣನವರು ಒಂದು ಸಾವಿರಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದು, ಇವುಗಳಲ್ಲಿ 250 ವಚನಗಳು ದೊರೆತಿವೆ. ಕಾಯಕ ಹಾಗೂ ದಾಸೋಹ ನಿಷ್ಠೆಯಿಂದ ವಚನಗಳನ್ನು ರಚಿಸಿ ಅವರು ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಅವರು ವಚನಗಳ ಮೂಲಕ ಸಮಾಜದ ಕುಂದು ಕೊರತೆಗಳನ್ನು ವಿಡಂಬನಾತ್ಮಕವಾಗಿ ತಿದ್ದುವ ಕೆಲಸ ಮಾಡಿದ್ದರು. ಅವರ ಧರ್ಮಪತ್ನಿ ಲಿಂಗಮ್ಮನವರು ಸಹ ಮಹಾನ್ ವಚನಕಾರ್ತಿಯಾಗಿದ್ದು, 114 ವಚನಗಳನ್ನು ರಚಿಸಿದ್ದಾರೆಂದು ತಿಳಿಸಿದರು.ಹೋರಾಟ ಅಗತ್ಯ:
ರಾಜ್ಯ ಪರಿಸರ ಮೌಲ್ಯ ಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ, ಮಾನವತೆಯ ಆಶಯದೊಂದಿಗೆ ಸಮ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಿ ಹೋರಾಟ ನಡೆಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.12ನೇ ಶತಮಾನದಲ್ಲಿದ್ದ ವರ್ಗ, ವರ್ಣ ಹಾಗೂ ಜಾತಿ ಸಂಘರ್ಷಗಳು ಇಂದಿನ ಆಧುನಿಕ ಯುಗದಲ್ಲೂ ಇನ್ನೂ ಹೆಚ್ಚಾಗುತ್ತಿರುವುದು ಅತ್ಯಂತ ಶೋಚನೀಯ ಸಂಗತಿ. ಇಂತಹ ತಾರತಮ್ಯ ಮತ್ತು ಜಾತಿ ಪದ್ಧತಿಯ ವ್ಯವಸ್ಥೆಯನ್ನು ಸಮಾಜದಿಂದ ಕಿತ್ತೊಗೆಯಬೇಕಿದೆ. ಬಸವಣ್ಣನವರು ಹಾಗೂ ಹಡಪದ ಅಪ್ಪಣ್ಣನವರು ಕನಸು ಕಂಡಿದ್ದ ಶೋಷಣೆ ರಹಿತ, ಸಮಾನತೆಯ ಸಮಾಜ ಕಟ್ಟಲು ನಾವೆಲ್ಲರೂ ಪ್ರತಿಜ್ಞೆ ಮಾಡಬೇಕಿದೆ. ಅದೇ ನಾವು ಆ ಮಹಾಶರಣರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಅಭಿಪ್ರಾಯಪಟ್ಟರು.
ಐಡಿಎಸ್‌ಜಿ ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಜಯಣ್ಣ ನಿಡಘಟ್ಟ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಎಂ.ಎಸ್.ಉಮೇಶ್‌ಕುಮಾರ್, ಸವಿತಾ ಸಮಾಜದ ಅಧ್ಯಕ್ಷ ಮಹಲಿಂಗಯ್ಯ, ಹಸೀನಾಬಾನುಸಣ್ಣ ಉಪಕಾರ ಮರೆಯಬಾರದು: ಸಿ.ಟಿ.ರವಿ
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಆಪತ್ತಿನಲ್ಲಿ ದೇಶ ಕಾಯುವ ಸೈನಿಕರನ್ನು ಹಾಗೂ ಸಣ್ಣ ಉಪಕಾರ ಮಾಡಿದವರನ್ನು ಎಂದಿಗೂ ಮರೆಯಬಾರದು; ನೆನಪಿಸಿಕೊಳ್ಳುವ, ಗೌರವಿಸುವ ಹಾಗೂ ದೈವತ್ವಕ್ಕೆ ಏರಿಸುವ ಮಹಾನ್ ಸಂಸ್ಕೃತಿ ನಮ್ಮ ಭಾರತೀಯ ಮೂಲದ್ದು ಎಂದು ಹೇಳಿದರು.೧೨ನೇ ಶತಮಾನದ ವಚನ ಚಳವಳಿಯ ಸಂದರ್ಭವನ್ನು ಸ್ಮರಿಸಿದ ಅವರು, ಆ ಕಾಲದಲ್ಲಿ ಕಾಸಿ ಕಮ್ಮಾರನಾದ, ಬಿಸಿ ಮಡಿವಾಳನಾದ, ಹಾಸಿ ನೇಕಾರನಾದ ಹಾಗೂ ವೇದ ಓದಿ ಹಾರುವನಾದ ಎಂದು ವೃತ್ತಿಗಳ ಆಧಾರದ ಮೇಲೆ ಗುರುತಿಸಲಾಗುತ್ತಿತ್ತು. ವೃತ್ತಿಗಳಿಂದ ಜಾತಿಗಳು ನಿರ್ಮಾಣವಾದವೇ ಹೊರತು ಹುಟ್ಟಿನಿಂದ ಅಲ್ಲ. ಬಸವಣ್ಣನವರು ಕೂಡ ತಮ್ಮ ವಚನಗಳಲ್ಲಿ ಇದನ್ನೇ ಸ್ಪಷ್ಟಪಡಿಸಿದ್ದಾರೆ.
ಶರಣರ ಜಯಂತ್ಯುತ್ಸವಗಳನ್ನು ಆಚರಿಸುವ ಮೂಲ ಉದ್ದೇಶ ಅವರ ಬದುಕಿನ ಪ್ರೇರಣೆ ವರ್ತಮಾನದ ಸಮಾಜಕ್ಕೆ ತಲುಪಬೇಕು ಹಾಗೂ ಭವಿಷ್ಯಕ್ಕೆ ಮಾರ್ಗದರ್ಶನ ಸಿಗಬೇಕು ಎಂಬುದಾಗಿದೆ. ಮಣ್ಣಿನಿಂದ ಮಡಕೆ, ಕುಂಭ ಹಾಗೂ ದೀಪ ಮಾಡುವಂತೆ, ಬಂಗಾರದಿಂದ ಸರ, ಉಂಗುರ ಮಾಡುವಂತೆ ಆಕಾರ ಹಾಗೂ ಹೆಸರುಗಳು ಬೇರೆಯಾಗಿದ್ದರೂ ಮೂಲ ಧಾತು ಒಂದೇ ಆಗಿರುತ್ತದೆ. ಅದೇ ರೀತಿ ನಮ್ಮ ಭಾಷೆ, ಆಚಾರ-ವಿಚಾರ, ಆಹಾರ ಪದ್ಧತಿ ಬೇರೆಯಾಗಿದ್ದರೂ ನಾವೆಲ್ಲರೂ ಮೂಲತಃ ಒಂದೇ ಎಂಬ ಸಾಮರಸ್ಯದ ಭಾವನೆ ಬೆಳೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.ಶೋಷಣೆ, ಮೌಢ್ಯ, ಅಸಮಾನತೆ ಹಾಗೂ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದ ಶರಣರ ವಿಚಾರಧಾರೆಗಳು ಮತ್ತು ತತ್ವ ಚಿಂತನೆಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಎಚ್.ಡಿ.ತಮ್ಮಯ್ಯ, ಶಾಸಕರು, ಚಿಕ್ಕಮಗಳೂರು
---------