ಸಾರಾಂಶ
ಗದಗ: ಕೊಳಗೇರಿ ಪ್ರದೇಶಗಳ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಲು ಆಗ್ರಹಿಸಿ ಜಿಲ್ಲಾ ಸ್ಲಂ ಸಮಿತಿ ಪದಾಧಿಕಾರಿಗಳು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ.ಆರ್.ಮಾನ್ವಿ ಮಾತನಾಡಿ, ಗದಗ-ಬೆಟಗೇರಿ ಅವಳಿ ನಗರದ ಸ್ಲಂ ಪ್ರದೇಶದಲ್ಲಿ ಸಾವಿರಾರು ಕುಟುಂಬಗಳು ತಮ್ಮ ಪ್ರದೇಶದಲ್ಲಿ ಕನಿಷ್ಟ ಮಟ್ಟದ ಸೌಲಭ್ಯ ಇಲ್ಲದೇ ಜೀವನ ನಡೆಸುತ್ತಿದ್ದಾರೆ. ಈ ಕುರಿತು ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದು ಸ್ಲಂ ಪ್ರದೇಶಗಳಲ್ಲಿ ನಾಗರಿಕ ಸೌಲಭ್ಯ ಒದಗಿಸಲು ಆಗ್ರಹಿಸಲಾಗಿದೆ. ಆದರೆ ಅಧಿಕಾರಿಗಳು ಮಾತ್ರ ಸ್ಲಂ ಪ್ರದೇಶಗಳ ಅಭಿವೃದ್ಧಿಗೆ ಪ್ರಮಾಣಿಕವಾಗಿ ಸ್ಪಂದಿಸುವುದನ್ನು ಬಿಟ್ಟು ಸ್ಲಂ ಜನರ ಸಮಸ್ಯೆಗಳಿಗೆ ಆದ್ಯತೆ ನೀಡದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕೂಡಲೇ ಗದಗ-ಬೆಟಗೇರಿ ಅವಳಿ ನಗರದ ಕೊಳಗೇರಿ ಪ್ರದೇಶಗಳ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.ಗದಗ-ಬೆಟಗೇರಿ ನಗರದ ಅನೇಕ ಅಘೋಷಿತ ಗುಡಿಸಲು ಪ್ರದೇಶಗಳನ್ನು ಸ್ಲಂ ಕಾಯ್ದೆ 1973 ಪ್ರಕಾರ ಸ್ಲಂ ಘೋಷಣೆಗಾಗಿ ಅರ್ಜಿ ಸಲ್ಲಿಸಿ 3 ವರ್ಷಗಳಾದರು ಸಹ ಈವರೆಗೊ ಸ್ಲಂ ಘೋಷಣೆ ಕುರಿತು ಅಗತ್ಯ ಕ್ರಮ ಕೈಗೊಳ್ಳದೇ ಅಧಿಕಾರಿಗಳು ಸ್ಲಂ ಜನರ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಗರದ ಸ್ಲಂ ಪ್ರದೇಶಗಳ ಕುಟುಂಬಗಳಿಗೆ ಪುನರವಸತಿ ಕಲ್ಪಿಸಲು 863 ಮನೆ ಮಂಜೂರಾಗಿದೆ. ಆದರೆ ವಸತಿ ಯೋಜನೆಯ ಅನುದಾನ ದುರುಪಯೋಗ ಪಡಿಸಿಕೊಂಡಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಅರ್ಹ ಗುಡಿಸಲು ನಿವಾಸಿಗಳನ್ನು ಕಡೆಗಣಿಸಿ ಬಡವರ ಪರ ಸರ್ಕಾರದ ವಸತಿ ಯೋಜನೆಯಲ್ಲಿ ಉಳ್ಳವರಿಗೆ ಮನೆ ನಿರ್ಮಿಸಿ ಕೊಡಲಾಗುತ್ತಿದೆ. ಇದರಿಂದ ಸರ್ಕಾರದ ವಸತಿ ಯೋಜನೆಯ ಅನುದಾನದಲ್ಲಿ ಭಾರಿ ಭ್ರಷ್ಟಾಚಾರ ನಡೆಸಲಾಗುತ್ತಿರುವುದನ್ನು ಅನೇಕ ಬಾರಿ ಸ್ಲಂ ಬೋರ್ಡ್ ಅಧಿಕಾರಿಗಳ ಗಮನಕ್ಕೆ ತಂದರು ಸಹ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳದೇ ಮೌನವಾಗಿರುವುದನ್ನು ಗಮನಿಸಿದರೆ ಗುತ್ತಿಗೆದಾರರ ಜತೆಗೆ ಅಧಿಕಾರಿಗಳು ಶಾಮೀಲಾಗಿರುವುದು ಅನುಮಾನ ಬರುತ್ತಿದೆ. ಕೂಡಲೇ ಸ್ಲಂ ಜನರ ಬೇಡಿಕೆಗಳಿಗೆ ಅಧಿಕಾರಿಗಳು ಪ್ರಮಾಣಿಕವಾಗಿ ಕೆಲಸ ಮಾಡದಿದ್ದರೆ ಡಿ. 26 ರಂದು ನೂರಾರು ಸ್ಲಂ ನಿವಾಸಿಗಳಿಂದ ಸ್ಲಂ ಬೋರ್ಡ್ ಕಚೇರಿಗೆ ಬೀಗ್ ಜಡಿದು ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕ್ಕೆ ನೀಡಿದರು.
ಈ ವೇಳೆ ಉಪಾಧ್ಯಕ್ಷ ರವಿಕುಮಾರ ಬೆಳಮಕರ, ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಇಬ್ರಾಹಿಂ ಮುಲ್ಲಾ, ಮೌಲಾಸಾಬ್ ಗಚ್ಚಿ, ಮೆಹಬೂಬಸಾಬ ಬಳ್ಳಾರಿ, ಮಂಜುನಾಥ ಶ್ರೀಗಿರಿ, ಮೆಹರುನಿಸಾ ಡಂಬಳ, ದುರ್ಗಪ್ಪ ಮಣ್ಣವಡರ, ಖಾಜಾಸಾಬ್ ಇಸ್ಮಾಯಿಲನವರ, ಜಾಫರ ಮಲಬಾರ, ಖಾಜಾಸಾಬ ಬಳ್ಳಾರಿ, ಶಂಕ್ರಪ್ಪ ಪೂಜಾರ ಹಾಗೂ ಪದಾಧಿಕಾರಿಗಳು ಇದ್ದರು.