ಸ್ಮಶಾನ ಭೂಮಿ ಖರೀದಿಸಲು ಸರ್ಕಾರ ಅನುದಾನ ನೀಡಬೇಕು. ಸರ್ಕಾರಿ ಜಮೀನುಗಳು ಲಭ್ಯವಿದ್ದರೆ ನಿಯಮಾವಳಿ ಅನುಸರಿಸಿ ಭೂಮಿ ಖರೀದಿಸಲು ತಕ್ಷಣ ತಾಲೂಕು ಆಡಳಿತ ಕ್ರಮವಹಿಸಬೇಕು.
ಶಿರಹಟ್ಟಿ: ತಾಲೂಕು ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ದಲಿತ ಸಮುದಾಯದವರಿಗೆ ಶವಸಸ್ಕಾರ ಮಾಡಲು ಪ್ರತ್ಯೇಕ ಭೂಮಿ ಇಲ್ಲ. ರಸ್ತೆ ಬದಿಯಲ್ಲಿಯೇ ಶವಸಂಸ್ಕಾರ ಮಾಡುವ ಅನಿವಾರ್ಯತೆ ಇದೆ. ಅಧಿಕಾರಿಗಳು ನ್ಯಾಯಯುತ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಪ್ರೊ. ಬಿ. ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದ ವತಿಯಿಂದ ಸೋಮವಾರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಮುಖಂಡ ಮುತ್ತು ಭಾವಿಮನಿ ಮಾತನಾಡಿ, ನಗರ ಪ್ರದೆಶಗಳಲ್ಲಿ ಮಾತ್ರ ಶವಸಂಸ್ಕಾರಕ್ಕೆ ಪ್ರತ್ಯೇಕ ಭೂಮಿ ಇದೆ. ಅಲ್ಲಿಯೂ ಕೂಡ ಸ್ವಚ್ಛತೆ ಮರೀಚಿಕೆಯಾಗಿದೆ. ತುರ್ತು ಅಭಿವೃದ್ಧಿ ಕಡೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.ತಾಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ಎಲ್ಲಿಯೂ ದಲಿತರಿಗೆ ಪ್ರತ್ಯೇಕ ಸ್ಮಶಾನ ಜಾಗ ನೀಡಿಲ್ಲ. ಸರ್ಕಾರ ತಾಲೂಕು ಆಡಳಿತದ ಮೂಲಕ ಸಮಗ್ರ ಮಾಹಿತಿ ಕೇಳಿದರೂ ಸ್ಥಳೀಯವಾಗಿ ಕಾರ್ಯನಿರ್ವಹಿಸುತ್ತಿರುವ ತಹಸೀಲ್ದಾರ್ ಸೇರಿದಂತೆ ಯಾವೊಬ್ಬ ಅಧಿಕಾರಿಗಳು ಸರ್ಕಾರಕ್ಕೆ ವಾಸ್ತವ ಸ್ಥಿತಿಗತಿ ಕುರಿತು ಮಾಹಿತಿ ನೀಡದೇ ಈ ಜನಾಂಗಕ್ಕೆ ದ್ರೋಹ ಬಗೆಯುತ್ತಿದ್ದಾರೆ ಎಂದು ದೂರಿದರು.ಸ್ಮಶಾನ ಭೂಮಿ ಖರೀದಿಸಲು ಸರ್ಕಾರ ಅನುದಾನ ನೀಡಬೇಕು. ಸರ್ಕಾರಿ ಜಮೀನುಗಳು ಲಭ್ಯವಿದ್ದರೆ ನಿಯಮಾವಳಿ ಅನುಸರಿಸಿ ಭೂಮಿ ಖರೀದಿಸಲು ತಕ್ಷಣ ತಾಲೂಕು ಆಡಳಿತ ಕ್ರಮವಹಿಸಬೇಕು. ಸರ್ಕಾರಿ ಭೂಮಿ ಲಭ್ಯವಿಲ್ಲದಿದ್ದರೆ ಸೂಕ್ತ ಭೂಮಿ ಗುರುತಿಸಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಬೇಕು. ಸ್ವಾತಂತ್ರ್ಯ ದೊರೆತು ೭೫ ವರ್ಷ ಕಳೆದರೂ ದಲಿತರಿಗೆ ಶವ ಹೂಳಲು ಭೂಮಿ ಇಲ್ಲ ಎಂದರೆ ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಬೇಸರ ಹೊರಹಾಕಿದರು.ಸರ್ಕಾರ ದಲಿತ ಸಮುದಾಯಗಳ ಅಭಿವೃದ್ಧಿಗೆ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿಯಲ್ಲಿ ನೀಡುತ್ತಿರುವ ಅನುದಾನ ದುರ್ಬಳಕೆಯಾಗದಂತೆ ಗಮನ ಹರಿಸಬೇಕು. ತಾಲೂಕಿನಾದ್ಯಂತ ಅಸ್ಪೃಶ್ಯತೆ ಆಚರಣೆಯಲ್ಲಿದ್ದು, ಸೂಕ್ತ ಕ್ರಮ ಜರುಗಿಸಿ ಅಸ್ಪೃಶ್ಯತೆ ಆಚರಣೆ ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಬೇಕು. ದಲಿತ ಸಮುದಾಯದ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ವಿದ್ಯಾರ್ಥಿ ವೇತನ ಮಂಜೂರು ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಬೇಕು ಎಂದು ಆಗ್ರಹಿಸಿದರು.ನಂತರ ತಹಸೀಲ್ದಾರ್ ಅನುಪಸ್ಥಿತಿಯಲ್ಲಿ ಶಿರಸ್ತೇದಾರ ಎಚ್.ಜೆ. ಭಾವಿಕಟ್ಟಿ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ತಾಲೂಕು ಡಿಎಸ್‌ಎಸ್ ಸಂಚಾಲಕ ರವಿ ಗುಡಿಮನಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಅಂಜನಾದೇವಿ ಮ್ಯಾಗೇರಿ, ಪ್ರಕಾಶ ಬಡೆಣ್ಣವರ, ಎಂ.ಕೆ. ಲಮಾಣಿ, ಚಂದ್ರು ಪೋತರಾಜ್, ಹನುಮಂತಪ್ಪ ಬಡ್ಡೆಪ್ಪನವರ, ಅಶೋಕ ಬಡ್ಡೆಪ್ಪನವರ, ರಮೇಶ ಗುಡಿಮನಿ, ಶಿವನಗೌಡ ಪಾಟೀಲ, ಯಲ್ಲಪ್ಪ ಗೋಡೆಣ್ಣವರ, ಪರಮೇಶ ಗುಡಿಮನಿ, ಸುಭಾಸ ಮುಳಗುಂದ, ಮರಿಯಪ್ಪ ಕಂಟೆಮ್ಮನವರ ಸೇರಿ ಇತರರು ಮನವಿ ನೀಡುವ ವೇಳೆ ಇದ್ದರು.