ಈಗಾಗಲೇ ತಾಲೂಕಿನಾದ್ಯಂತ ಜೋಳ ಕೊಯ್ಲು ಕಾರ್ಯ ಪೂರ್ಣಗೊಂಡಿದ್ದು, ಎಕರೆಗೆ ಸರಾಸರಿ 30 ಕ್ವಿಂಟಲ್ ವರೆಗೆ ಇಳುವರಿ ಬಂದಿದೆ.
ಕಂಪ್ಲಿ: ತಾಲೂಕಿನಲ್ಲಿ ಜೋಳ ಬೆಳೆ ಕೊಯ್ಲು ಪೂರ್ಣಗೊಂಡಿರುವ ಹಿನ್ನೆಲೆ, ರೈತರ ಹಿತದೃಷ್ಟಿಯಿಂದ ತಕ್ಷಣವೇ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಮತ್ತು ರೈತರು ಗುರುವಾರ ತಹಸೀಲ್ದಾರ್ ಜೂಗಲ ಮಂಜುನಾಯಕಗೆ ಮನವಿ ಸಲ್ಲಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಕಾರ್ಯಾಧ್ಯಕ್ಷ ಕೊಟ್ಟೂರು ರಮೇಶ್ ಮಾತನಾಡಿ, ಈಗಾಗಲೇ ತಾಲೂಕಿನಾದ್ಯಂತ ಜೋಳ ಕೊಯ್ಲು ಕಾರ್ಯ ಪೂರ್ಣಗೊಂಡಿದ್ದು, ಎಕರೆಗೆ ಸರಾಸರಿ 30 ಕ್ವಿಂಟಲ್ ವರೆಗೆ ಇಳುವರಿ ಬಂದಿದೆ. ಆದರೆ, ಸರ್ಕಾರದ ಖರೀದಿ ನೀತಿಯಲ್ಲಿ ಎಕರೆಗೆ ಕೇವಲ 15 ಕ್ವಿಂಟಲ್ ಜೋಳ ಮಾತ್ರ ಖರೀದಿಸುವುದರಿಂದ ರೈತರಿಗೆ ಭಾರೀ ತೊಂದರೆಯಾಗುತ್ತಿದೆ. ಕನಿಷ್ಠ ಎಕರೆಗೆ 20 ಕ್ವಿಂಟಲ್ ಜೋಳವನ್ನು ಖರೀದಿಸುವ ವ್ಯವಸ್ಥೆ ಮಾಡಬೇಕು.ಮಾರುಕಟ್ಟೆಯಲ್ಲಿ ಜೋಳದ ದರ ಕ್ವಿಂಟಲ್‌ಗೆ ಸುಮಾರು ₹2,700 ರೂಪಾಯಿಗಳಷ್ಟಿದ್ದು, ದಿನದಿಂದ ದಿನಕ್ಕೆ ಬೆಲೆ ಇಳಿಮುಖವಾಗುತ್ತಿದೆ. ಈ ದರದಲ್ಲಿ ಜೋಳವನ್ನು ಮಾರಾಟ ಮಾಡಿದರೆ ರೈತರಿಗೆ ನಷ್ಟವಾಗುತ್ತೆ. ಆದರೆ, ಸರ್ಕಾರದ ಜೋಳ ಖರೀದಿ ಕೇಂದ್ರ ಆರಂಭಿಸಿದಲ್ಲಿ ಕ್ವಿಂಟಲ್‌ಗೆ ಸುಮಾರು ₹3,700 ವರೆಗೆ ದರ ದೊರೆಯಲಿದ್ದು, ಇದರಿಂದ ರೈತರಿಗೆ ಆರ್ಥಿಕವಾಗಿ ಹೆಚ್ಚಿನ ನೆರವು ಸಿಗಲಿದೆ.
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಜೋಳ ಖರೀದಿ ಕೇಂದ್ರವನ್ನು ತಡವಾಗಿ ಆರಂಭಿಸಿದ್ದರಿಂದ, ಜೋಳ ಹುಳು ಹಿಡಿದು ಗುಣಮಟ್ಟ ಕಳೆದುಕೊಂಡು ರೈತರು ತೀವ್ರ ನಷ್ಟ ಅನುಭವಿಸಬೇಕಾಯಿತು. ಈ ಬಾರಿ ಅಂತಹ ಪರಿಸ್ಥಿತಿ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಿ, 2026ರ ಜನವರಿ 15ರೊಳಗಾಗಿ ಜೋಳ ಖರೀದಿ ಕೇಂದ್ರವನ್ನು ಆರಂಭಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ನಗರ ಅಧ್ಯಕ್ಷ ಎನ್. ತಿಮ್ಮಪ್ಪ ನಾಯಕ, ತಾಲೂಕು ಉಪಾಧ್ಯಕ್ಷ ಕಾಗೆ ಈರಣ್ಣ ಸೇರಿದಂತೆ ರೈತರಾದ ತಿಪ್ಪಣ್ಣ, ಜಡೆಪ್ಪ, ಮಳ್ಳೆ ಸಣ್ಣ ಜಡೆಪ್ಪ, ಮುರಾರಿ, ಹೆಬ್ಬೆಟ್ಟು ರಾಮಾಂಜಿನಿ, ಎಚ್. ರಂಗಪ್ಪ, ವಿ.ಟಿ. ರಾಜು, ಬಜಾರ ವೆಂಕಟೇಶ, ಗಾದಿಲಿಂಗಪ್ಪ, ನಾಗೇಶ್, ರಾಜೇಶ್ ಉಪಸ್ಥಿತರಿದ್ದರು.