ಈ ವೇಳೆ ಫಲಾನುಭವಿ ಶ್ರೀಕಾಂತ ಹಾದಿಮನಿ ಮಾತನಾಡಿ, ಕಳೆದ ಆರೇಳು ತಿಂಗಳಿನಿಂದ ಸಂಧ್ಯಾಸುರಕ್ಷಾ, ಇಂದಿರಾ ವಿಕಾಸ, ವಿಧವಾ, ಮನಸ್ವಿನಿ ಮಾಸಾಶನ ಸಂದಾಯವಾಗಿಲ್ಲ ಎಂದರು.
ಶಿರಹಟ್ಟಿ: ಅನೇಕ ಅಂಗವಿಕಲರು, ವಿಧವೆಯರು, ಹಿರಿಯ ನಾಗರಿಕರು ಹಾಗೂ ಮನಸ್ವಿನಿಯ ಫಲಾನುಭವಿಗಳಿಗೆ ಸರ್ಕಾರದಿಂದ ನೀಡಲಾಗುವ ಮಾಸಾಶನ ಹಣವನ್ನು 6 ತಿಂಗಳಿನಿಂದ ನೀಡಿಲ್ಲ. ಕೂಡಲೇ ಹಣ ಬಿಡುಗಡೆ ಮಾಡಬೇಕೆಂದು ಫಲಾನುಭವಿಗಳು ಗುರುವಾರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ಫಲಾನುಭವಿ ಶ್ರೀಕಾಂತ ಹಾದಿಮನಿ ಮಾತನಾಡಿ, ಕಳೆದ ಆರೇಳು ತಿಂಗಳಿನಿಂದ ಸಂಧ್ಯಾಸುರಕ್ಷಾ, ಇಂದಿರಾ ವಿಕಾಸ, ವಿಧವಾ, ಮನಸ್ವಿನಿ ಮಾಸಾಶನ ಸಂದಾಯವಾಗಿಲ್ಲ. ತಹಸೀಲ್ದಾರ್ ಕಚೇರಿ, ಅಂಚೆ ಕಚೇರಿ ಮತ್ತು ಬ್ಯಾಂಕ್‌ಗೆ ಅಲೆದಾಡಿ ಸಾಕಾಗಿದೆ. ಬರೀ ಹಾರಿಕೆ ಉತ್ತರ ನೀಡುವ ಅಧಿಕಾರಿಗಳು ವೃದ್ಧರ, ಹಿರಿಯ ನಾಗರಿಕರ ಗೋಳು ಆಲಿಸುತ್ತಿಲ್ಲ ಎಂದು ದೂರಿದರು.ಆರ್ಥಿಕವಾಗಿ ದುರ್ಬಲರಾಗಿರುವ ಫಲಾನುಭವಿಗಳು ದೈನಂದಿನ ಜೀವನ ನಿರ್ವಹಣೆ, ಔಷಧೋಪಚಾರ ಹಾಗೂ ಇತರೆ ಅಗತ್ಯ ವೆಚ್ಚಗಳನ್ನು ಭರಿಸಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಈ ಸಮಸ್ಯೆಯಿಂದಾಗಿ ಫಲಾನುಭವಿಗಳಲ್ಲಿ ಆತಂಕ ಮತ್ತು ಅಸಮಾಧಾನ ಉಂಟಾಗಿದೆ. ಅಧಿಕಾರಿಗಳು ಮತ್ತು ಸರ್ಕಾರ ಈ ವಿಷಯವನ್ನು ತುರ್ತಾಗಿ ಪರಿಶೀಲಿಸಿ ಬಾಕಿ ಉಳಿದಿರುವ ಆರೇಳು ತಿಂಗಳ ಎಲ್ಲ ಫಲಾನುಭವಿಗಳ ಪಿಂಚಣಿ ಮೊತ್ತವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.ತಹಸೀಲ್ದಾರ ಕೆ. ರಾಘವೇಂದ್ರ ರಾವ್ ಹಾಗೂ ಗ್ರೇಡ್- ೨ ತಹಸೀಲ್ದಾರ್ ವಿ.ಎ. ಮುಳಗುಂದಮಠ ಅವರು ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಿ ಕೊಡುವ ಭರವಸೆ ನೀಡಿದರು.ಕೃಷ್ಣಾ ಜಾಧವ, ನೀಲಪ್ಪ ತುಳಿ, ಅಡಿವೆಕ್ಕ ರಾಮಗೇರಿ, ಇಮಾಮಸಾಬ ಬೈರೆಕದಾರ, ಜಿನ್ನತಬಿ ಬೈರೆಕದಾರ, ಪುಂಡಲೀಕ ಪರಬತ, ಮೋದಿನಸಾಬ ಮಾಡಳ್ಳಿ,ಶಾಂತವ್ವ ತುಳಿ, ವಿನಾಯಕ ಹಾದಿಮನಿ, ಲಕ್ಷ್ಮಣ ತೋಡೇಕಾರ, ಲಕ್ಷ್ಮವ್ವ ಹಾದಿಮನಿ, ಈರಪ್ಪ ಚಿಕ್ಕತೋಟದ, ದೇವಕ್ಕ ಜೋಗೇರ, ಗಂಗವ್ವ ಬುಳ್ಳಣ್ಣವರ, ಹುಚ್ಚಪ್ಪ ಕಂಬಳಿ, ಫಕ್ಕೀರಪ್ಪ ಹಮ್ಮಿಗಿ, ಸಿದ್ದಲಿಂಗಪ್ಪ ಗೊರವರ, ದಸ್ತಗೀರಸಾಬ ಕಬಾಡಿ, ಶಾಹುಮಹಾರಾಜ ಪರಬತ, ಮಹ್ಮದಸಾಬ ಇತರರು ಇದ್ದರು.