ವಿಶ್ವ ಹಿಂದೂ ಪರಿಷತ್ ನಿಂದ ಪಿಎಸ್‌ಐಗೆ ಮನವಿ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಇತ್ತೀಚಿನ ದಿನಗಳಲ್ಲಿ ಅವ್ಯಾಹತವಾಗಿ ಗೋಹತ್ಯೆ ಹಾಗೂ ಗೋ ಕಳ್ಳತನ ನಡೆಯುತ್ತಿರುವ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ನಿಂದ ಪಿಎಸ್‌ಐಗೆ ಮನವಿ ಸಲ್ಲಿಸಲಾಯಿತು.ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಮಾತನಾಡಿ ಬಾಳೆಹೊನ್ನೂರಿನ ರೇಣುಕಾನಗರದಲ್ಲಿ ಗೋವಿನ ತಲೆ ಹಾಕಿದ ಘಟನೆ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗೋಹತ್ಯೆ ಸಾಗಾಟ ನಡೆಯುತ್ತಿರುವುದಕ್ಕೆ ಬಲವಾದ ಸಾಕ್ಷಿ. ಈ ಕೃತ್ಯ ಮಾಡಿದ ಕಿಡಿಕೇಡಿಯನ್ನು ಆದಷ್ಟು ಬೇಗ ಬಂಧಿಸಬೇಕು. ಇದರೊಂದಿಗೆ ರಾತ್ರಿ ವೇಳೆ ವಾಹನಗಳ ತಪಾಸಣೆ ನಡೆಸಿ ಗೋ ಸಾಗಾಟ ಪತ್ತೆ ಹಚ್ಚಬೇಕು. ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ಸಂಘಟನೆಯಿಂದ ಹೋರಾಟ ಆರಂಭಿಸುವುದಾಗಿ ಎಚ್ಚರಿಸಿದರು.
ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಪಿಎಸ್‌ಐ ಅಂಬರೀಶ್, ರೇಣುಕಾನಗರದಲ್ಲಿ ಹಸುವಿನ ತಲೆ ಪತ್ತೆಯಾದ ಘಟನೆ ಬಗ್ಗೆ ಸುಮೊಟೊ ಕೇಸ್ ದಾಖಲು ಮಾಡಿದ್ದು ಶೀಘ್ರ ಆರೋಪಿಯನ್ನು ಬಂಧಿಸಲಾಗುವುದು. ಠಾಣಾ ವ್ಯಾಪ್ತಿಯಲ್ಲಿ ಬಿಡಾಡಿ ದನಗಳ ಸಂಖ್ಯೆ ಹೆಚ್ಚಾಗಿದೆ. ಹಸುಗಳ ವಾರಸುದಾರರು ಮನೆಯಲ್ಲಿ ಕಟ್ಟಿ ಸಾಕಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯ್ತಿ ಹಾಗೂ ಸಂಘಟನೆಗಳ ಸಹಕಾರದಿಂದ ಗೋಶಾಲೆಗೆ ಬಿಡಲಾಗುವುದು ಎಂದು ತಿಳಿಸಿದರು. ವಿಹಿಂಪ ತಾಲೂಕು ಕಾರ್ಯದರ್ಶಿ ಮಂಜುನಾಥ್ ಶೆಟ್ಟಿ, ಬಜರಂಗದಳ ಜಿಲ್ಲಾ ಸಹ ಸಂಚಾಲಕ ಮಂಜು ಹಲಸೂರು, ಬಿಜೆಪಿ ತಾಲ್ಲೂಕು ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಹೋಬಳಿ ಅಧ್ಯಕ್ಷ ಪ್ರದೀಪ್ ಕಿಚ್ಚಬ್ಬಿ, ಮಂಜು ಶೆಟ್ಟಿ, ಸುರೇಶ್ ಗುಂಡ, ಸುಮೇಶ್ ಶೆಟ್ಟಿ ಮತ್ತಿತರರು ಹಾಜರಿದ್ದರು.೧೭ಬಿಹೆಚ್‌ಆರ್ ೧:ಅಕ್ರಮ ಗೋ ಹತ್ಯೆ, ಸಾಗಾಟ ಪ್ರಕರಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಪಿಎಸ್‌ಐ ಅಂಬರೀಷ್ ಅವರಿಗೆ ವಿಹಿಂಪ ಕಾರ್ಯಕರ್ತರು ಮನವಿ ಸಲ್ಲಿಸಿದರು.