ಹೆದ್ದಾರಿಗಳಲ್ಲಿ ಸನ್ಯಾಸಿ ದಾಟುವಿಕೆ ವಲಯ ಎಂದು ಸೂಚಿಸುವ ಶಾಶ್ವತ ಎಚ್ಚರಿಕೆ ಫಲಕಗಳ ಅಳವಡಿಕೆ ಮತ್ತು ವಾಹನಗಳ ವೇಗ ನಿಯಂತ್ರಣಕ್ಕೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಲಾಯಿತು.

ಗದಗ: ಒಬ್ಬ ಸಂತನ ನಷ್ಟವು ಕೇವಲ ಅಪಘಾತವಲ್ಲ, ಅದು ನಮ್ಮ ಸಾಮೂಹಿಕ ಮನಸ್ಸಿಗೆ ನೋವಿನ ಸಂಗತಿಯಾಗಿದ್ದು, ಜೈನ ಸಾಧು-ಸಾಧ್ವಿಯರ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶುಕ್ರವಾರ ಜಿಲ್ಲಾ ಜೈನ್ ಸಮಾಜದಿಂದ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿ, ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಶತಮಾನಗಳಿಂದ ಅಹಿಂಸೆ, ಶಾಂತಿ ಮತ್ತು ಆಧ್ಯಾತ್ಮಿಕ ಶಿಸ್ತಿನ ಸಂದೇಶವನ್ನು ಹೊತ್ತು ಬರಿಗಾಲಿನಲ್ಲಿ ದೇಶಾದ್ಯಂತ ಪಾದಯಾತ್ರೆ ಮಾಡುವುದು ಜೈನ ತಪಸ್ವಿಗಳ ಪರಂಪರೆ. ಇದು ಕೇವಲ ಧಾರ್ಮಿಕ ಆಚರಣೆಯಲ್ಲ, ಭಾರತದ ನಾಗರಿಕ ಪರಂಪರೆಯ ಜೀವಂತ ದ್ಯೋತಕ. ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ‍್ಯ ಮತ್ತು ಚಲನಾ ಸ್ವಾತಂತ್ರ‍್ಯದ ಹಕ್ಕಿನಡಿ ಸಾಗುವ ಈ ಶಾಂತಿದೂತರ ಪಯಣ ಇಂದು ಹೆದ್ದಾರಿಗಳಲ್ಲಿ ಅಪಾಯಕ್ಕೆ ಸಿಲುಕುವಂತಾಗಿದೆ.ಇತ್ತೀಚೆಗೆ ಸರಣಿಯಾಗಿ ನಡೆಯುತ್ತಿರುವ ಅಪಘಾತಗಳು ಜೈನ ಸಮುದಾಯವನ್ನು ತೀವ್ರ ಆತಂಕಕ್ಕೀಡು ಮಾಡಿವೆ. ಮಾನವೀಯತೆ ಮತ್ತು ಧರ್ಮ ಜಾಗೃತಿಯ ಪ್ರತೀಕವಾಗಿರುವ ಮುನಿಗಳ ಜೀವ ರಕ್ಷಣೆಗಾಗಿ ಸಮಾಜದ ಧ್ವನಿ ಈಗ ದೆಹಲಿಯತ್ತ ಹೊರಟಿದೆ. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿ ಜೈನ ತಪಸ್ವಿಗಳು, ಗ್ರಾಮೀಣರು ಹಾಗೂ ಕಾಲ್ನಡಿಗೆ ಪ್ರಯಾಣಿಕರಿಗಾಗಿ ಮೀಸಲಾದ, ಸಂರಕ್ಷಿತ ಪಾದಚಾರಿ ಕಾರಿಡಾರ್ ಮಾರ್ಗ ನಿರ್ಮಿಸಬೇಕು.ಹೆದ್ದಾರಿಗಳಲ್ಲಿ ಸನ್ಯಾಸಿ ದಾಟುವಿಕೆ ವಲಯ ಎಂದು ಸೂಚಿಸುವ ಶಾಶ್ವತ ಎಚ್ಚರಿಕೆ ಫಲಕಗಳ ಅಳವಡಿಕೆ ಮತ್ತು ವಾಹನಗಳ ವೇಗ ನಿಯಂತ್ರಣಕ್ಕೆ ಕ್ರಮ ಜರುಗಿಸಬೇಕು.ಪಾದಯಾತ್ರೆ ವೇಳೆ ಸಂಭವಿಸುವ ಜೈನ ಸನ್ಯಾಸಿ- ಸನ್ಯಾಸಿನಿಯರ ಸಾವಿನ ಪ್ರಕರಣಗಳಲ್ಲಿ ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಆರ್‌ಟಿಒ ಮೂಲಕ ಚಾಲನಾ ಪರವಾನಗಿ ನೀಡುವ ಪ್ರಕ್ರಿಯೆಯಲ್ಲಿ ಬರಿಗಾಲಿನ ತಪಸ್ವಿಗಳ ಉಪಸ್ಥಿತಿ ಕುರಿತು ಜಾಗೃತಿ ಮಾಡ್ಯೂಲ್ ಸೇರ್ಪಡೆ ಮಾಡಬೇಕು.ಜೈನ ಮುನಿಗಳು ಹೆಚ್ಚಾಗಿ ವಿಹಾರ ಮಾಡುವ ಸಮಯದ ಅವಧಿಯಲ್ಲಿ ಹೆದ್ದಾರಿಗಳಲ್ಲಿ ಪೊಲೀಸ್ ಇಲಾಖೆಯಿಂದ ವಿಶೇಷ ಗಸ್ತು ಮತ್ತು ಮೇಲ್ವಿಚಾರಣೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.

ಈ ವೇಳೆ ಶ್ವೇತಾಂಬರ ಮೂರ್ತಿ ಪೂಜಕ ಅಧ್ಯಕ್ಷ ಇಂದ್ರಕುಮಾರ ಬಾಫಣಾ, ವರ್ಧಮಾನ ಸ್ಥಾನಿಕವಾಸಿ ಸಮಾಜದ ಅಧ್ಯಕ್ಷ ರೂಪಚಂದಜೀ ಪಾಲರೇಚಾ, ತೇರಾಪಂಥ ಸಮಾಜದ ಅಧ್ಯಕ್ಷ ಖೀಮಚಂದ ಬನ್ಸಾಲಿ, ಕೆಡಿಒ ಜೈನ್‌ಮಹಾಜನ್ ಸಮಾಜದ ಅಧ್ಯಕ್ಷ ವಿಜಯ ಲೂಥಿಯಾ, ಜಿಲ್ಲಾ ದಿಗಂಬರ ಜೈನ್ ಸಮಾಜದ ಅಧ್ಯಕ್ಷ ಪದ್ಮರಾಜ ಕುಲಕರ್ಣಿ ಸೇರಿದಂತೆ ಸಮಾಜದ ಮಹಿಳೆಯರು, ಯುವಕರು ಇದ್ದರು.