ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಒಳ ಮೀಸಲಾತಿ ಇಲ್ಲದೆ 56,432 ಹುದ್ದೆಗಳನ್ನು ತುಂಬಲು ಹೊರಡಿಸಿರುವ ನೋಟಿಫಿಕೇಷನ್ ವಾಪಸ್ಸು ಪಡೆದು ಒಳಮೀಸಲಾತಿ ಅನ್ವಯವೇ ಹುದ್ದೆಗಳನ್ನು ತುಂಬಲು ಮರು ನೋಟಿಫೀಕೇಷನ್ ಮಾಡುವಂತೆ ಮಾಜಿ ಸಚಿವ ಆಂಜನೇಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಂಗಳವಾರ ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಮಾದಿಗರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಸಿಗುತ್ತಿಲ್ಲ ಎಂದು ಕಳೆದ 35 ವರ್ಷಗಳಿಂದ ಹೋರಾಟ ಮಾಡಿದ್ದೇವೆ. ನಮ್ಮ ಬೇಡಿಕೆಗೆ ಸ್ಪಂದಿಸಿ ಒಳಮೀಸಲಾತಿ ಹಂಚಿಕೆ ಮಾಡಿ ನಮಗೆ ಉಪಕಾರ ಮಾಡಿದ ಕೀರ್ತಿ ತಮಗೆ ಸಲ್ಲುತ್ತದೆ.

ಆಂಧ್ರ, ತೆಲಂಗಾಣದಲ್ಲಿ ಈಗಾಗಲೇ ಒಳ ಮೀಸಲಾತಿ ಅನುಷ್ಠಾನಗೊಂಡಿದೆ. ಅಲ್ಲಿ ಯಾವುದೇ ಗೊಂದಲ ಇಲ್ಲದೆ ಪರಿಶಿಷ್ಟ ಜಾತಿಯವರೆಲ್ಲರೂ ಅದನ್ನು ಸ್ವಾಗತಿಸಿ, ಮೀಸಲಾತಿ ಹಂಚಿಕೊಂಡು ಸೌಲಭ್ಯ ಪಡೆಯುತ್ತಿದ್ದಾರೆ. ಇಂತಹ ವಾತಾವರಣ ರಾಜ್ಯದಲ್ಲಿ ನಿರ್ಮಾಣ ಮಾಡಬೇಕಿದೆ ಎಂದರು.

ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಹೆಚ್ಚು ಮೀಸಲಾತಿ ಸೌಲಭ್ಯ ಪಡೆದಿರುವ ಸಮುದಾಯಗಳು ಅನಾವಶ್ಯಕವಾಗಿ ಸಂವಿಧಾನ ವಿರುದ್ಧವಾಗಿ, ಬಾಬಾ ಸಾಹೇಬ್ ಅಂಬೇಡ್ಕರ್ ಆಶಯಗಳಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಮಾದಿಗ ಸಮುದಾಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಹಂಚಿ ತಿನ್ನುವ ಗುಣ ಇರಬೇಕು, ಸರ್ವರಿಗೂ ಸಮಪಾಲು, ಸಮಬಾಳು ನೀತಿಯ ಹೃದಯವಂತಿಕೆಯನ್ನು ಪ್ರದರ್ಶಿಸಬೇಕಾದ ಕೆಲವು ಸಮುದಾಯಗಳು ಮಾದಿಗರ ಏಳಿಗೆಯನ್ನು ಸಹಿಸದೆ ಒಳಮೀಸಲಾತಿ ವಿಷಯದಲ್ಲಿ ಇಲ್ಲಸಲ್ಲದ ಗೊಂದಲ ಉಂಟು ಮಾಡುತ್ತಿವೆ ಎಂದರು.


ಕೋಟ್ಯಂತರ ರು. ವೆಚ್ಚ ಮಾಡಿ ಸರ್ಕಾರಕ್ಕೆ ಸಲ್ಲಿಕೆಯಾದ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ, ಬಳಿಕ ಮಾಧುಸ್ವಾಮಿ ನೇತೃತ್ವದ ಸಂಪುಟ ಉಪ ಸಮಿತಿಯ ಶಿಫಾರಸು, ಪ್ರಸ್ತುತ ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಕೆಲವು ಸಮುದಾಯಗಳು ಒಪ್ಪಲಿಲ್ಲ. ಎಲ್ಲ ಆಯೋಗಗಳ ವರದಿಯನ್ನು ಆ ಸಮುದಾಯಗಳಿಗೆ ಅನುಕೂಲ ಆಗುವ ರೀತಿಯಲ್ಲಿ ತಿದ್ದುಪಡಿ ಮಾಡಲಾಯಿತು. ಇದರಿಂದಾಗಿ ಅನಾಥ, ಅಸ್ಪೃಶ್ಯ ಸಮುದಾಯವಾದ ಅಲೆಮಾರಿಗಳಿಗೆ ತೀವ್ರ ಅನ್ಯಾಯ ಆಗಿದೆ. ಇಷ್ಟೆಲ್ಲ ಅನ್ಯಾಯ, ವಿರೋಧಗಳ ಮಧ್ಯೆಯೂ ಒಳಮೀಸಲಾತಿ ಜಾರಿಗೊಂಡಿರುವುದನ್ನು ನಾವು ಸ್ವಾಗತಿಸಿದ್ದೇವೆ. ಆದರೆ, ಈಗ ಜಾರಿಗೊಳಿಸಿರುವ ಒಳಮೀಸಲಾತಿಯನ್ನು ಅನುಷ್ಠಾನಗೊಳಿಸಲು ಅಡ್ಡಿಪಡಿಸಲಾಗುತ್ತಿದೆ. ಪಟ್ಟಭದ್ರರ ಮಾತುಗಳನ್ನು ಧಿಕ್ಕರಿಸಿ ಅಸ್ಪೃಶ್ಯ, ನೊಂದ ಮಾದಿಗರಿಗೆ ನ್ಯಾಯ ಕೊಡಿಸಲು ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.