ಕನ್ನಡಪ್ರಭ ವಾರ್ತೆ ಕಾರವಾರವೃತ್ತಿಪರ ಜವಾಬ್ದಾರಿ ನಿರ್ವಹಿಸುತ್ತಿದ್ದ ನ್ಯಾಯವಾದಿ ಮೇಲೆ ನಡೆದ ಅಪಮಾನ ಘಟನೆಯನ್ನು ಜಿಲ್ಲಾ ವಕೀಲರ ಸಂಘ ಖಂಡಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ವರಿಷ್ಠರಿಗೆ ಮನವಿ ಮಾಡಿದೆ.ಜಿಲ್ಲಾ ವಕೀಲರ ಸಂಘದ ಸದಸ್ಯರೂ ಹಾಗೂ ಹಿರಿಯ ನ್ಯಾಯವಾದಿ ಆದ ನಾಗರಾಜ ವಿ. ನಾಯಕ ನ್ಯಾಯಾಲಯದಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಾನೂನುಬದ್ಧವಾಗಿ ತಮ್ಮ ಕಕ್ಷಿದಾರರ ಪರವಾಗಿ ವಾದ ಮಂಡಿಸಿದ್ದರು. ಇದೇ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡ ಗೋಪಾಲಕೃಷ್ಣ ನಾಯಕ ಹಾಗೂ ಅವರ ಸಂಗಡಿಗರು, ಮೇ 6 ರಂದು ರಾತ್ರಿ ಅಂಕೋಲಾ ತಾಲೂಕಿನ ವಂದಿಗೆ ಗ್ರಾಮದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಮೇಲೆ ದೌರ್ಜನ್ಯ ಎಸಗಿದ್ದಾರೆ. ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ನಾಗರಾಜ ನಾಯಕ ಅವರಿಗೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಭಾಷಣ ನಿಲ್ಲಿಸು, ನಿನ್ನನ್ನು ಕೊಂದು ಹಾಕುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆನ್ನಲಾಗಿದೆ. ಅಷ್ಟೇ ಅಲ್ಲದೆ, ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸಿದ್ದಕ್ಕಾಗಿ ಸಿಟ್ಟಿನಿಂದ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.ವಕೀಲರು ತಮ್ಮ ಕಕ್ಷಿದಾರರ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸುವುದು ಅವರ ವೃತ್ತಿಧರ್ಮ ಹಾಗೂ ನೈತಿಕ ಹೊಣೆಯಾಗಿದೆ. ಆದರೆ ಗೋಪಾಲಕೃಷ್ಣ ನಾಯಕ ಎಂಬುವವರು ಈ ಹಿಂದೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವಕೀಲರ ಕುರಿತು ವ್ಯಂಗ್ಯವಾಗಿ ಪೋಸ್ಟ್ ಮಾಡುವ ಮೂಲಕ ಅವರ ತೇಜೋವಧೆ ಮಾಡಿದ್ದರು. ಇದೀಗ ನೇರವಾಗಿ ಅಪಮಾನ ಮಾಡುವ ಮೂಲಕ ವಕೀಲರ ರಕ್ಷಣಾ ಕಾಯ್ದೆ ಕಲಂ 4ರ ಅಡಿಯಲ್ಲಿ ಅಕ್ಷಮ್ಯ ಅಪರಾಧ ಎಸಗಿದ್ದಾರೆ ಎಂದು ಸಂಘವು ಅಸಮಾಧಾನ ವ್ಯಕ್ತಪಡಿಸಿದೆ.ವಕೀಲರ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಇಂತಹ ಸಮಾಜವಿರೋಧಿ ಕೃತ್ಯಗಳು ವಕೀಲ ವೃತ್ತಿಯ ಗೌರವಕ್ಕೆ ಧಕ್ಕೆ ತಂದಿವೆ. ಈ ಹಿನ್ನೆಲೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಘಟನೆಯನ್ನು ಬಲವಾಗಿ ಖಂಡಿಸಿದ್ದು, ಹಲ್ಲೆ ನಡೆಸಿದ ಗೋಪಾಲಕೃಷ್ಣ ನಾಯಕ ಹಾಗೂ ಅವರ ಸಂಗಡಿಗರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಿ ನ್ಯಾಯ ಒದಗಿಸಬೇಕೆಂದು ಅಪರ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಲಾಗಿದೆ.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಂತೋಷ ಭಾಗವತ, ಚರಣ ನಾಯ್ಕ, ಜ್ಯೋತಿ ಮಿರಾಶಿ ಇತರರಿದ್ದರು.
ನ್ಯಾಯವಾದಿಗೆ ಅಪಮಾನ ಖಂಡಿಸಿ ವಕೀಲರ ಸಂಘದಿಂದ ಮನವಿ
ವೃತ್ತಿಪರ ಜವಾಬ್ದಾರಿ ನಿರ್ವಹಿಸುತ್ತಿದ್ದ ನ್ಯಾಯವಾದಿ ಮೇಲೆ ನಡೆದ ಅಪಮಾನ ಘಟನೆಯನ್ನು ಜಿಲ್ಲಾ ವಕೀಲರ ಸಂಘ ಖಂಡಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ವರಿಷ್ಠರಿಗೆ ಮನವಿ ಮಾಡಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.