ತಾಲೂಕು ಕಚೇರಿಯ ದಾಖಲಾತಿ ಕೊಠಡಿಯಲ್ಲಿ ದಾಖಲಾತಿಗಳ ತಿದ್ದುಪಡಿಯನ್ನು ತಡೆಗಟ್ಟುವುದು, ದಾಖಲಾತಿ ಬಗ್ಗೆ ಸೂಕ್ತ ನಿಗಾವಹಿಸುವಂತೆ ಒತ್ತಾಯಿಸಿ ಗುರುವಾರ ವಕೀಲರ ಸಂಘದಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಾಗರ: ತಾಲೂಕು ಕಚೇರಿಯ ದಾಖಲಾತಿ ಕೊಠಡಿಯಲ್ಲಿ ದಾಖಲಾತಿಗಳ ತಿದ್ದುಪಡಿಯನ್ನು ತಡೆಗಟ್ಟುವುದು, ದಾಖಲಾತಿ ಬಗ್ಗೆ ಸೂಕ್ತ ನಿಗಾವಹಿಸುವಂತೆ ಒತ್ತಾಯಿಸಿ ಗುರುವಾರ ವಕೀಲರ ಸಂಘದಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈಗಾಗಲೆ ತಾಲೂಕು ಕಚೇರಿಯಲ್ಲಿ ದಾಖಲಾತಿ ತಿದ್ದುಪಡಿ ಸಂಬಂಧ ಇಬ್ಬರು ಅಧಿಕಾರಿಗಳನ್ನು ಸಾಗರ ತಹಸೀಲ್ದಾರ್ ಅವರ ದೂರಿನ ಹಿನ್ನೆಲೆಯಲ್ಲಿ ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ. ಆದರೆ ಈ ದಾಖಲಾತಿ ಕೊಠಡಿಯಲ್ಲಿ ದಾಖಲಾತಿಗಳ ತಿದ್ದುಪಡಿ ಆಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ಆಗುತ್ತಿದೆ ಎಂದು ದೂರಿದರು.ಇತ್ತೀಚೆಗೆ ಇಬ್ಬರು ಅಧಿಕಾರಿಗಳನ್ನು ಬಂಧಿಸಿರುವುದರಿಂದ ದಾಖಲಾತಿ ತಿದ್ದುಪಡಿ ಆಗುತ್ತಿತ್ತು ಎನ್ನುವ ಚರ್ಚೆಗೆ ಪುಷ್ಟಿ ದೊರೆತಿದೆ. ರಜಾ ದಿನಗಳಲ್ಲಿ, ರಾತ್ರಿ ಹೊತ್ತಿನಲ್ಲಿ ದಾಖಲಾತಿ ಕೊಠಡಿಗಳು ತೆರೆದು ಇರುತ್ತದೆ ಎನ್ನುವ ದೂರುಗಳಿವೆ. ಅಲ್ಲದೆ ಲೇಔಟ್‌ದಾರರು, ರಿಯಲ್ ಎಸ್ಟೇಟ್‌ದಾರರು ಇತರರು ಈ ದಾಖಲಾತಿ ಕೊಠಡಿಯಲ್ಲಿ ಕಚೇರಿ ಹೊರತಾದ ವೇಳೆಯಲ್ಲಿ ಇರುವುದು ಕಂಡು ಬಂದಿರುತ್ತದೆ ಎಂದು ವಕೀಲರ ಸಂಘ ದೂರಿದೆ.
ಈಗಾಗಲೆ ಕೋಟ್ಯಾಂತರ ರು. ಸರ್ಕಾರಿ ಜಾಗಗಳ ದಾಖಲಾತಿ ತಿದ್ದುಪಡಿ ಮೂಲಕ ಹಕ್ಕನ್ನು ನೀಡಿರುವುದು ದೃಢಪಟ್ಟಿರುತ್ತದೆ. ಇನ್ನಾದರೂ ತಾಲೂಕು ಕಚೇರಿಯ ದಾಖಲೆ ಸಂರಕ್ಷಣೆ ಮಾಡಿ ತಪ್ಪಿತಸ್ಥರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ತಾಲೂಕು ಕಚೇರಿಯಲ್ಲಿ ನಡೆಯುತ್ತಿರುವ ದಾಖಲಾತಿ ತಿದ್ದುಪಡಿ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸಂಘದ ಅಧ್ಯಕ್ಷ ಗಿರೀಶ್ ಗೌಡ, ಜ್ಯೋತಿ ಕೋವಿ, ಅಣ್ಣಪ್ಪ ಎಚ್.ಕೆ., ಕರುಣಾಕರ, ಕೆ.ವಿ.ಪ್ರವೀಣ್, ತ್ಯಾಗಮೂರ್ತಿ, ಪರಿಮಳ, ಜಿಕ್ರಿಯಾ, ಉಲ್ಲಾಸ ಇನ್ನಿತರರು ಹಾಜರಿದ್ದರು.