ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಒತ್ತಾಯಿಸಿ ಕರ್ನಾಟಕ ಕದಂಬ ಪಡೆ ಕಾರ್ಯಕರ್ತರು ಚೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ಕದಂಬ ಪಡೆಯ ಜಿಲ್ಲಾಧ್ಯಕ್ಷ ಡಿ.ಬಿ. ರುಕ್ಮಾಂಗದ ನೇತೃತ್ವದಲ್ಲಿ ಕಾರ್ಯಕರ್ತರು ಚೆಸ್ಕಾಂ ಕಚೇರಿ ಮುಂದೆ ಜಮಾಯಿಸಿ, ಗ್ರಾಹಕರಿಗೆ ಯಾವುದೇ ತಿಳುವಳಿಕೆ ಇಲ್ಲದೆ ವಿದ್ಯುತ್ ವ್ಯತ್ಯಯ ಮಾಡುತ್ತಿರುವುದನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಇತ್ತೀಚೆಗೆ ನಿರಂತರ ವಿದ್ಯುತ್ ವ್ಯತ್ಯಯ ಉಂಟಾಗುತ್ತಿರುವುದು ಗಂಭೀರ ಸಮಸ್ಯೆಯಾಗಿದೆ. ಪ್ರಸ್ತುತ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ, ಪರೀಕ್ಷೆಗೆ ಸಿದ್ಧಗೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಸರಿಯಾದ ವಿದ್ಯುತ್ ಸೌಲಭ್ಯ ಲಭ್ಯವಾಗದೆ ಇರುವುದರಿಂದ ಅವರ ವಿದ್ಯಾಭ್ಯಾಸಕ್ಕೆ ದೊಡ್ಡ ಅಡಚಣೆ ಉಂಟಾಗಿದೆ ಎಂದು ದೂರಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಅವಲಂಬಿತರಾಗಿದ್ದು, ರಾತ್ರಿ ವೇಳೆ ಅವರ ಓದಿಗೆ ವಿದ್ಯುತ್ ಅಗತ್ಯವಾಗಿದೆ. ಈ ಸಂದರ್ಭದಲ್ಲಿ ಆಗುತ್ತಿರುವ ವಿದ್ಯುತ್ ಕಡಿತದಿಂದ ವಿದ್ಯಾರ್ಥಿಗಳ ಭವಿಷ್ಯವೇ ಪ್ರಶ್ನಾರ್ಹವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ತಕ್ಷಣವೇ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ನಿರಂತರ ಹಾಗೂ ಸಮರ್ಪಕ ವಿದ್ಯುತ್ ಸರಬರಾಜು ಮಾಡುವ ಮೂಲಕ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಮಸ್ಯೆಯನ್ನು ಶೀಘ್ರ ಪರಿಹರಿಸಬೇಕು ಎಂದು ಒತ್ತಾಯಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.


ಕೆ.ನಾಗಮಣಿಗೆ ಪಿಎಚ್.ಡಿ ಪದವಿ ಪ್ರದಾನ

ಕನ್ನಡಪ್ರಭ ವಾರ್ತೆ ಹಲಗೂರು

ಮಳವಳ್ಳಿ ತಾಲೂಕಿನ ಪೂರಿಗಾಲಿ ಪಿ.ಎಲ್.ಎನ್. ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ ಕೆ.ನಾಗಮಣಿ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ಪಿಎಚ್.ಡಿ ಪದವಿ ಪ್ರದಾನ ಮಾಡಿದೆ. ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಪ್ರೊ.ಬಿ.ಗಂಗಾಧರ್ ಮಾರ್ಗದರ್ಶನದಲ್ಲಿ ಕೆ.ನಾಗಮಣಿ ಸಿದ್ದಪಡಿಸಿದ ‘ಪ್ರಗತಿಶೀಲ ಸಾಮಾಜಿಕ ಕಾದಂಬರಿಗಳಲ್ಲಿ ಸ್ತ್ರೀ ಸಂವೇದನೆ (ತರಾಸು, ಅನಕೃ, ಚದುರಂಗ, ನಿರಂಜನ, ಬಸವರಾಜ ಕಟ್ಟೀಮನಿ ಇವರ ಅಯ್ದ ಕಾದಂಬರಿಗಳ ಅನುಲಕ್ಷಿಸಿ) ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಪಿಎಚ್‌.ಡಿ ಪದವಿ ದೊರಕಿದೆ.