ಸಾರಾಂಶ
ಕೊಡಗು ವಿಶ್ವವಿದ್ಯಾಲಯವನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು, ಕೊಡಗು ವಿವಿ ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು ಎಂದು ಮನವಿ ಮಾಡಲಾಯಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಕೊಡಗು ವಿಶ್ವವಿದ್ಯಾಲಯವನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಕೊಡಗಿನ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಂಪುಟ ಉಪಸಮಿತಿ ಕೊಡಗು ವಿ.ವಿ ಯನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಬೇಕು ಎಂದು ಕೊಡಗು ಪತ್ರಕರ್ತರ ಸಂಘ ಮತ್ತು ಸೋಮವಾರಪೇಟೆ ತಾಲೂಕು ಘಟಕ ಮನವಿ ಮಾಡಿದೆ.ಈ ಕುರಿತು ಮುಖ್ಯಮಂತ್ರಿಗಳಿಗೆ ತಾಲೂಕು ಆಡಳಿತದ ಮೂಲಕ ಮನವಿ ಪತ್ರವನ್ನು ನೀಡಲಾಯಿತು.ರಾಜ್ಯದಲ್ಲಿಯೇ ವಿಶೇಷ ಜಿಲ್ಲೆಯಾಗಿರುವ ಕೊಡಗು ಗುಡ್ಡಗಾಡು ಪ್ರದೇಶವಾಗಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಬಹಳಷ್ಟು ವಿದ್ಯಾರ್ಥಿಗಳು ಹೊರ ಜಿಲ್ಲೆಯಲ್ಲಿ ವಿದ್ಯಾಭ್ಯಾಸ ಮಾಡಲು ಕಷ್ಟವಾಗುತ್ತಿದೆ. ಕರ್ನಾಟಕ ರಾಜ್ಯ ಏಕೀಕರಣವಾಗುವುದಕ್ಕಿಂತ ಮೊದಲು ಕೊಡಗು ಸಂಸ್ಥಾನವಾಗಿ, ಸಿ ಪ್ರವರ್ಗದ ರಾಜ್ಯವಾಗಿದ್ದು, ಪ್ರಸ್ತುತ ಜಿಲ್ಲೆಯಾಗಿ ರಾಜ್ಯದ ಆದಾಯಕ್ಕೆ ಶೇಕಡ 10 ರಷ್ಟು ಸಂಪನ್ಮೂಲ ಕ್ರೋಡೀಕರಣ ಮಾಡಿಕೊಡುತ್ತಿದೆ. ಇಂದಿಗೂ ಪ್ರಾದೇಶಿಕ ಅಸಮತೋಲನದ ಕಾರಣದಿಂದ ಆರೋಗ್ಯ,ಶಿಕ್ಷಣ ಮೊದಲಾದ ನಾಗರಿಕ ಸೇವಾ ವ್ಯವಸ್ಥೆಗೆ ಕೊಡಗಿನ ಜನತೆ ಪಕ್ಕದ ಜಿಲ್ಲೆಗಳನ್ನು ಅವಲಂಬಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೊಡಗು ವಿಶ್ವವಿದ್ಯಾಲಯವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಬೇಕೆಂದು ಮನವಿ ಮಾಡಲಾಗಿದೆ.
ತಹಸೀಲ್ದಾರ್ ಕೃಷ್ಣಮೂರ್ತಿ ಅವರ ಮೂಲಕ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಸ್.ಎ.ಮುರಳೀಧರ್, ತಾಲೂಕು ಘಟಕದ ಅಧ್ಯಕ್ಷರಾದ ಎಚ್.ಆರ್.ಹರೀಶ್ ಕುಮಾರ್, ಉಪಾಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ, ಕಾರ್ಯದರ್ಶಿ ಡಿ.ಪಿ.ಲೋಕೇಶ್ ಇದ್ದರು.